ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ, ಅದೆಷ್ಟೋ ವರ್ಷಗಳ ಹೋರಾಟದ ಫಲ ಇಂದು ರಾಮಮಂದಿರ ಉದ್ಘಾಟನೆಗೆ ಸಜ್ಜಾಗಿ ನಿಂತಿರುವುದು ಹೆಮ್ಮೆಯ ವಿಚಾರ.

ನಿನ್ನೆಯಿಂದಲೇ ಅಯೋಧ್ಯೆ ರಾಮಮಂದಿರದ ಉದ್ಘಾಟನೆಗೆ ಸಂತರು, ಗಣ್ಯರು ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ್ದಾರೆ, ಇಂದು ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬೆಳಿಗ್ಗೆಯಿಂದಲೇ ಸಂತರು, ಗಣ್ಯರು ರಾಮಮಂದಿರದತ್ತ ಹೆಜ್ಜೆ ಹಾಕುತ್ತಿದ್ದಾರೆ.

ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿರುವ 51 ಇಂಚಿನ ಬಾಲರಾಮನ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ನೆರವೇರುವುದರೊಂದಿಗೆ ಮಂದಿರದ ಉದ್ಘಾಟನೆಯೂ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ 7 ಸಾವಿರ ಅತಿಥಿಗಳು ಈ ದಿವ್ಯ ಘಳಿಗೆಗೆ ಪ್ರತ್ಯಕ್ಷ ಸಾಕ್ಷಿಯಾಗಲಿದ್ದಾರೆ. ಮುಂಜಾನೆ ಬ್ರಾಹ್ಮೀ ಮುಹೂರ್ತದಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಮಧ್ಯಾಹ್ನ 12.20ರಿಂದ 12.45ರ ಅಭಿಜಿನ್‌ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನ ವಿಧಿ ನಡೆಯಲಿದೆ.
ಪ್ರಾಣ ಪ್ರತಿಷ್ಠಾಪನೆ ವೇಳೆ ಗರ್ಭಗುಡಿಯಲ್ಲಿ ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್‌, ಪ್ರಧಾನ ಪುರೋಹಿತರು ಸೇರಿ ಒಟ್ಟು ಕೇವಲ ಐವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಮಂದಿರ ಉದ್ಘಾಟನೆಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ದೇಶದ ಅಗ್ರ ಸಂತರು, ವಿದ್ವಾಂಸರ ಸಹಿತ ಮೂರು ಮುಖ್ಯ ತಂಡಗಳು ನಡೆಸಿಕೊಡಲಿವೆ.

ಈ ಒಂದು ಶುಭ ಕಾರ್ಯಕ್ರಮದಲ್ಲಿ ಅಮೆರಿಕ, ಫ್ರಾನ್ಸ್‌, ಇಂಗ್ಲೆಂಡ್‌, ಆಸ್ಟ್ರೇಲಿಯ, ಅರ್ಜೆಂಟೀನ ಸೇರಿದಂತೆ ಜಗತ್ತಿನ 55 ದೇಶಗಳಿಂದ 100 ಗಣ್ಯಾತಿಗಣ್ಯರು ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಭದ್ರತೆಗಾಗಿ ಉತ್ತರಪ್ರದೇಶ ಪೊಲೀಸರು, ಸೇನೆ, ವಿಪತ್ತು ನಿರ್ವಹಣ ದಳ ಸೇರಿದಂತೆ 13 ಸಾವಿರಕ್ಕೂ ಅಧಿಕ ಭದ್ರತಾ ಸಿಬಂದಿಯನ್ನು ನಿಯೋಜಿಸಲಾಗಿದೆ.