ದೇಶಕ್ಕೆ ದೇಶವೇ ರಾಮೋತ್ಸವದ ಸಂತಸ, ಸಂಭ್ರಮೋತ್ಸಾಹಗಳನ್ನು ಅನುಭವಿಸುತ್ತಿದೆ. ಅಯೋಧ್ಯೆಯಲ್ಲಿ ೫೦೦ ವರ್ಷಗಳ ನಂತರ ಸ್ವಸ್ಥಾನಕ್ಕೆ ಮರಳಲಿರುವ ಬಾಲರಾಮನ ಪ್ರತಿಷ್ಠಾಪನೆಯ ಘಟನೆ ಈ ದೇಶಕ್ಕಷ್ಟೇ ಸೀಮಿತವಾಗಿಲ್ಲ. ಅದು ಜಾಗತಿಕ ಮಹತ್ವ ಪಡೆದುಕೊಂಡಿದೆ. ವಿಶ್ವದ ಅಸಂಖ್ಯಾತ ರಾಷ್ಟ್ರಗಳಲ್ಲಿನ ರಾಮಭಕ್ತರು ತಮ್ಮದೇ ಮನೆಯ ಸಮಾರಂಭವೆಂಬಂತೆ ಈ ಉತ್ಸವವನ್ನು ಆಚರಿಸುತ್ತಿದ್ದಾರೆ. ಅಯೋಧ್ಯೆಯಂತೂ ಆ ದೇವಲೋಕವೇ ಕೆಳಗಿಳಿದು ಬಂದಂತೆ ಅಲಂಕೃತವಾಗಿದೆ. ಜನರು ಈ ಸಂಭ್ರಮದಲ್ಲಿ ಬಗೆಬಗೆಯಾಗಿ ತಮ್ಮನ್ನೂ ತೊಡಗಿಸಿಕೊಳ್ಳುತ್ತಿರುವ ರೀತಿ ಅವರ್ಣನೀಯವಾದದ್ದು. ಹಲವು ಬಗೆಯಲ್ಲಿ ಆ ಬಾಲರಾಮನಿಗೆ ತಮ್ಮ ಸೇವೆ ಸಲ್ಲಿಸಲು ಮುಂದಾಗುತ್ತಿದ್ದಾರೆ. ತಮ್ಮಿಂದ ಸಾಧ್ಯವಾದ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತಿದ್ದಾರೆ. ದೇಶದ ಮೂಲೆಮೂಲೆಗಳಿಂದ ಸಹಸ್ರ ಸಹಸ್ರ ಭಕ್ತರು ಅಯೋಧ್ಯೆ ತಲುಪಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಜನ ಗಣ್ಯರು, ಸಾಧುಸಂತರು ಅಧಿಕೃತ ಆಮಂತ್ರಣವನ್ನು ಪಡೆದಿದ್ದಾರೆ. ಅಯೋಧ್ಯೆ ಒಂದು ಸಣ್ಣ ನಗರವಾಗಿರುವುದರಿಂದ ಅಲ್ಲಿ ವಸತಿ ಮತ್ತಿತರ ಸಮಸ್ಯೆಗಳಿದ್ದೇಇವೆ. ಸಾಧ್ಯವಾದಷ್ಟು ಉತ್ತಮ ವ್ಯವಸ್ಥೆಯನ್ನು ಉತ್ತರ ಪ್ರದೇಶ ಸರಕಾರ ಮತ್ತು ರಾಮ ಮಂದಿರ ಟ್ರಸ್ಟ್ ಮಾಡಿದೆ. ರಾಮ ಮಂದಿರ ವಿರೋಧಿಗಳಿಂದ ಆಗಬಹುದಾದ ಯಾವುದೇ ತೊಂದರೆಯನ್ನು ಎದುರಿಸಲು ಆಡಳಿತ ಭದ್ರತಾ ವ್ಯವಸ್ಥೆಯನ್ನೂ ಮಾಡಿದೆ. ಯಾವ ಅಹಿತಕರ ಘಟನೆಯು ನಡೆಯದೆ ಈ ಉತ್ಸವ ಯಶಸ್ವಿಯಾಗಿ ನಡೆಯಲೆಂಬುದು ಭಾರತೀಯರ ಮನದ ಹಾರೈಕೆಯಾಗಿದೆ.
ಈ ರಾಮ ಮಂದಿರ ಉದ್ಘಾಟನೆ ನಿಶ್ಚಯವಾದ ನಂತರ ಅದನ್ನು ವಿರೋಧಿಸುವ ಹಲವರು ಹಲವು ಬಗೆಯಾಗಿ ಅಪಪ್ರಚಾರ ಮಾಡುವುದರಲ್ಲಿ ನಿರತರಾದದ್ದನ್ನೂ ನಾವು ಕಂಡಿದ್ದೇವೆ. ಮೋದಿಯವರಿಗೂ ಬಿಜೆಪಿಗೂ ಈ ಉತ್ಸವದಿಂದ ರಾಜಕೀಯ ಲಾಭವಾದೀತೆಂಬ ಭಾವನೆಯಿಂದ ಮತ್ತು ಮೋದಿಯವರ ಮೇಲಿನ ಅಸಹನೆಯಿಂದ ಕೆಲವು ರಾಜಕೀಯ ಪಕ್ಷಗಳ ನಾಯಕರು ಮತ್ತು ಅವರ ಬೆಂಬಲಿಗರು ರಾಮೋತ್ಸವಕ್ಕೆ ವಿಘ್ನವನ್ನೊಡ್ಡಲು ಸಾಕಷ್ಟು ಪ್ರಯತ್ನ ನಡೆಸಿದ್ದನ್ನು, ಬಗೆಬಗೆಯ ಟೀಕೆಟಿಪ್ಪಣೆಗಳನ್ನು ಮಾಡುತ್ತಬಂದಿದ್ದನ್ನು, ಅಷ್ಟೇ ಅಲ್ಲ, ಕಾರ್ಯಕ್ರಮಕ್ಕೆ ತಡೆ ತರಲು ಕೋರ್ಟಿನ ಕಟ್ಟೆ ಏರಿದ್ದನ್ನು ಸಹ ನೋಡಿದ್ದೇವೆ.
ಆದರೆ ಈ ಎಲ್ಲ ಕುತಂತ್ರಗಳನ್ನೂ ದಾಟಿ ರಾಮೋತ್ಸವ ಯಶಸ್ವಿಯಾಗಿ ನಡೆಯುವಂತಾದದ್ದು ಸಂತೋಷದ ವಿಷಯ. ಅಯೋಧ್ಯೆಯ ಈ ಐತಿಹಾಸಿಕ ಸಂದರ್ಭಕ್ಕೂ ನಮ್ಮ ಕರ್ನಾಟಕಕ್ಕೂ ಹಲವು ಬಗೆಯಲ್ಲಿ ಸಂಬಂಧವಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕಾಗಿದೆ. ಬಾಲರಾಮನ ವಿಗ್ರಹಕ್ಕೆ ಬೇಕಾದ ಶಿಲೆಯನ್ನು ಒಯ್ದದ್ದು ನಮ್ಮ ರಾಜ್ಯದಿಂದ. ಆ ವಿಗ್ರಹವನ್ನು ನಿರ್ಮಿಸಿದವರೂ ನಮ್ಮ ಮೈಸೂರಿನ ಶಿಲ್ಪಿ. ವಿಗ್ರಹ ಪ್ರತಿಷ್ಠೆಗೆ ಶುಭ ಮುಹೂರ್ತವಿರಿಸಿದ್ದೂ ನಮ್ಮ ಬೆಳಗಾವಿಯವರು. ಶ್ರೀರಾಮ ಹನುಮಂತರ ಮಿಲನದ ಕಿಷ್ಕಿಂಧೆ ಇರುವುದೂ ಕರ್ನಾಟಕದಲ್ಲೇ. ಇಂತಹ ಹಲವು ಸಂಗತಿಗಳು ಇವೆ.
ಇದು ಕೇವಲ ಒಂದು ದೇವರ ಗುಡಿಯ ವಿಚಾರ ಅಲ್ಲ. ಇದರೊಡನೆ ಭಾರತೀಯರಿಗೆ ಭಾವನಾತ್ಮಕವಾದ ಸಂಬಂಧವಿದೆ. ಈಗ ನಿರ್ಮಾಣವಾಗಿರುವ ರಾಮ ಮಂದಿರ ಭಾರತೀಯರ ಅಸ್ಮಿತೆಯ ಪ್ರತೀಕ. ಭಾರತೀಯರ ಐಕ್ಯತೆಯ ಮಂದಿರ. ಭಾರತದ ಜನರ ಅಭಿಮಾನದ ಸಂಕೇತ. ಒಂದು ಮಂದಿರದ ನಿರ್ಮಾಣವನ್ನು ಭಾರತದ ಬಹುದೊಡ್ಡ ಜನಸಮೂಹ ಈ ಬಗೆಯಲ್ಲಿ ಸಂಭ್ರಮಿಸಿದ ಬೇರೆ ಉದಾಹರಣೆಗಳು ಸಿಗಲಾರವು. ಇದರ ಹಿಂದೆ ಬಹಳ ದೀರ್ಘವಾದ ಇತಿಹಾಸವೂ ಇದೆ. ಐದು ಸಾವಿರ ವರ್ಷಗಳ ಹಿಂದೆ ರಚಿತವಾಗಿದ್ದೆನ್ನಲಾದ ಮಹರ್ಷಿ ವಾಲ್ಮೀಕಿಯ ಶ್ರೀಮದ್ರಾಮಾಯಣ ಕೋಟಿ ಕೋಟಿ ಭಾರತೀಯರ ಮನ್ನಣೆ ಪಡೆದಿದೆ. ಪೂಜನೀಯ ಗ್ರಂಥವಾಗಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಉದಾತ್ತ ಜೀವನದ ಕತೆ ಈ ದೇಶದಲ್ಲಿ ಮಾತ್ರವಲ್ಲ, ಏಷ್ಯಾದ ಹಲವು ರಾಷ್ಟ್ರಗಳ ಮೇಲೆ ದಟ್ಟ ಪ್ರಭಾವ ಬೀರಿರುವುದು ಗಮನಾರ್ಹ. ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತ , ಭರತ ಮೊದಲಾದ ಪಾತ್ರಗಳು ಹಲವು ಬಗೆಯಲ್ಲಿ ಜೀವನ ದರ್ಶನ ಮಾಡುವ ರೀತಿ ಅನನ್ಯವಾದುದು. ಭಾರತೀಯ ಪರಂಪರೆ ಸಂಪ್ರದಾಯಗಳಲ್ಲಿ ರಾಮಾಯಣ ಮತ್ತು ಮಹಾಭಾರತಗಳು, ಹಾಗೆಯೇ ಭಗವದ್ಗೀತೆಗಳಿಗೆ ಗೌರವಪೂರ್ಣ ಸ್ಥಾನವಿದೆ. ಅವು ಭಾರತೀಯತ್ವದ ಪ್ರತಿಬಿಂಬವಾಗಿ ನಮ್ಮ ಬದುಕಿನಲ್ಲಿ ಬೆರೆತುಹೋಗಿವೆ. ಪರಕೀಯರ ದುರಾಕ್ರಮಣಗಳಲ್ಲಿ ನಾಶವಾದ ಹಿಂದೂ ದೇವಾಲಯಗಳ ಇತಿಹಾಸ ಅರಿತವರಿಗೆ ಅಯೋಧ್ಯೆಯ ಶ್ರೀ ರಾಮ ಮಂದಿರದ ಬಗೆಗೂ ತಿಳಿದಿರುತ್ತದೆ. ಅವರಿಗೆ ಈ ರಾಮ ಮಂದಿರ ಮತ್ತು ಬಾಲರಾಮನ ವಿಗ್ರಹದ ಪುನರ್ಪತಿಷ್ಠಾಪನೆಯ ಅಗತ್ಯವಿತ್ತು..
ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರದಲ್ಲಿ ಕೋಟ್ಯಂತರ ಭಾರತೀಯರ ಆ ಕನಸು ನನಸಾಗಿದೆ. ಆ ಸಂತಸವನ್ನು ಭಾರತೀಯರು ಅನುಭವಿಸುತ್ತಿರುವುದನ್ನು ನೋಡುವುದೂ ಒಂದು ಸುಖಾನುಭೂತಿಯೇ ಆಗಿದೆ. ಸಮಾಜದಲ್ಲಿ ವಿರೋಧ ಎಲ್ಲ ಕಾಲಗಳಲ್ಲಿಯೂ ಇದ್ದೇ ಇರುತ್ತದೆ. ದುಷ್ಟ ಮನಸ್ಸುಗಳು ಒಳ್ಳೆಯದನ್ನು ಯಾವತ್ತೂ ಇರಗೊಡಬಾರದೆಂಬ ಪ್ರಯತ್ನ ಮಾಡಿಯೇ ಮಾಡುತ್ತವೆ. ರಾವಣ, ಕಂಸ, ಹಿರಣ್ಯಕಷಿಪು, ತಾರಕಾಸುರ, ಮಹಿಷಾಸುರ ಮೊದಲಾದ ದುಷ್ಟ ರಾಕ್ಷಸರು ಕೆಡುಕನ್ನು ಬಯಸಿದರೂ ರಾಮ, ಕೃಷ್ಣ , ಮೊದಲಾದ ಅವತಾರಪುರುಷರು ಅಂತಹ ದುಷ್ಟರನ್ನು ಸಂಹರಿಸಿ ಜಗತ್ತಿಗೆ ಕಲ್ಯಾಣವನ್ನುಂಟುಮಾಡುವ ಮಹತ್ಕಾರ್ಯ ನೆರವೇರಿಸಿದರು. ಅಧರ್ಮದ ಮೇಲೆ ಧರ್ಮದ ವಿಜಯವೇ ಭಾರತೀಯ ಪರಂಪರೆಯ ತಿರುಳು.
ಇಂದು ಅಯೋಧ್ಯೆಯಲ್ಲಿ ರೂಪುಗೊಂಡ ಶ್ರೀರಾಮ ಮಂದಿರ ಕೇವಲ ಪೌರಾಣಿಕ ಮತ್ತು ಐತಿಹಾಸಿಕ ಮಹತ್ವ ಪಡೆದಿದೆ ಎಂದು ಭಾವಿಸಬೇಕಿಲ್ಲ. ಅದು ಆಧುನಿಕ ಭಾರತದ ಅತ್ಯಂತ ಪ್ರತಿಷ್ಠೆಯ, ಗೌರವದ ಕೇಂದ್ರವಾಗಿರಲಿದೆ. ದೇಶದ ಧಾರ್ಮಿಕ ಪ್ರವಾಸೋದ್ಯಮಕ್ಕೆ ರಾಮ ಮಂದಿರದ ಕೊಡುಗೆ ಬಹಳ ದೊಡ್ಡದೆನಿಸಲಿದೆ. ಭಾರತ ಈ ಮೂಲಕ ಲಕ್ಷಾಂತರ ವಿದೇಶಿ ಪ್ರವಾಸಿಗರನ್ನು ಸೆಳೆದುಕೊಂಡು ಸರಕಾರದ ಆದಾಯ ಹೆಚ್ಚಿಸುವುದರ ಜತೆಗೆ ಲಕ್ಷಾಂತರ ಜನರ ಬದುಕಿಗೂ ಒಂದಲ್ಲ ಒಂದು ರೀತಿ ಆಧಾರವಾಗಲಿದೆ. ಪ್ರವಾಸೋದ್ಯಮ ಬೆಳೆದಂತೆಲ್ಲ ಅಸಂಖ್ಯಾತ ಜನ ಅದರ ಪ್ರಯೋಜನ ಪಡೆಯುತ್ತಾರೆ. ಇಂದು ಗುಜರಾತದ ವಲ್ಲಭಭಾಯಿ ಪಟೇಲ್ ಏಕತಾ ವಿಗ್ರಹ, ಕಾಶಿ ಕಾರಿಡಾರ್ ಗಳ ರಚನೆಯ ನಂತರ ಯಾವ ರೀತಿ ಅಲ್ಲಿ ಪ್ರವಾಸೋದ್ಯಮ ಬೆಳೆದಿದೆ ಎನ್ನುವುದರ ಪ್ರತ್ಯಕ್ಷ ಉದಾಹರಣೆ ನಮ್ಮ ಕಣ್ಣೆದುರಿಗಿದೆ. ಅಯೋಧ್ಯೆ ಮತ್ತು ಮುಂದೆ ಮಥುರಾ ಸಹ ಅದೇ ರೀತಿ ಭಾರತದ ಹಿರಿಮೆಯನ್ನು ವಿಶ್ವದಾದ್ಯಂತ ಹರಡುವ ಆಕರ್ಷಣೆಯ ಕೇಂದ್ರಗಳೆನಿಸಲಿವೆ ಎನ್ನುವುದರಲ್ಲಿ ಸಂದೇಹವಿಲ್ಲ. ಮೋದಿಯವರ ದೂರದರ್ಶಿತ್ವದ ಪರಿಣಾಮವಾಗಿಯೇ ಇವೆಲ್ಲ ಸಾಧ್ಯವಾದದ್ದೆಂದು ಹೇಳಬೇಕು. ಒಬ್ಬ ನಾಯಕನಾದವನಲ್ಲಿ ದೇಶದ ಏಳ್ಗೆಯ ಕುರಿತು ಇರಬೇಕಾದ ನಿಜವಾದ ವಿಷನ್ ಎಂತಹದು ಎನ್ನುವುದನ್ನು ನಾವು ಇಂದು ಪ್ರತ್ಯಕ್ಷ ನೋಡುತ್ತಿದ್ದೇವೆ. ಅವರಿಗೆ ಭಾರತೀಯರು ಎಂದೆಂದೂ ಋಣಿಯಾಗಿರಬೇಕಾಗಿದೆ.
ಶ್ರೀರಾಮ ಮಂದಿರದಲ್ಲಿ ರಾಮನ ವಿಗ್ರಹ ಸ್ಥಾಪನೆಯಾಗುತ್ತಿರುವ ಇಂದಿನ ದಿನ ಕೋಟ್ಯಂತರ ಭಾರತೀಯರು ಸಡಗರದಿಂದ, ಉತ್ಸಾಹದಿಂದ ಭಾಗವಹಿಸುತ್ತಿರುವುದನ್ನು ನೋಡುವುದೇ ಚೆಂದ. ರಾಮ ವಿರೋಧಿ ದುಷ್ಟರ ಕೆಟ್ಟ ಆಸೆ ಈಡೇರಿಲ್ಲ. ಅಂಥವರ ಬಗ್ಗೆ ಯೋಚಿಸುವುದು ಬೇಡ. ಕೆಟ್ಟವರಿಲ್ಲದೆ ಒಳ್ಳೆಯವರ ಮಹತ್ವ ಗೊತ್ತಾಗುವುದಿಲ್ಲ. ಆ ದುಷ್ಟರಿಗೂ ಶ್ರೀ ರಾಮಚಂದ್ರ ಒಳಿತನ್ನುಂಟುಮಾಡಲಿ. –

 

ಎಲ್. ಎಸ್. ಶಾಸ್ತ್ರಿ