ನನ್ನ ಈ ಸಲದ ಸೌದಿ ಅರೇಬಿಯಾ ಪ್ರವಾಸವನ್ನು ಒಂದು “ಸಾಂಸ್ಕೃತಿಕ ಪಯಣ”ವೆಂದೇ ಕರೆಯಬಹುದು.  ಸಾವಿರ ಸಾವಿರ ಮೈಲುಗಳೀಚೆ ಅರಬ್ ಜನಾಂಗದ ಮರಳುಗಾಡಿನ ನಡುವೆಯೂ ಅನುಭವಕ್ಕೆ ಬರುತ್ತಿರುವ ಭಾರತೀಯತ್ವದ ಅಸ್ತಿತ್ವ/ ಅಸ್ಮಿತೆ/ ಅಭಿಮಾನ ಮೈಮನಗಳಿಗೆ ರೋಮಾಂಚನವುಂಟುಮಾಡುವಂತಹದು. “ಎಲ್ಲಿದ್ದರೂ ಕನ್ನಡಿಗನಾಗಿರು” ಎಂದು ಕುವೆಂಪು ಹೇಳಿದಂತೆ ಎಲ್ಲಿದ್ದರೂ ನಾವು ಭಾರತೀಯರಾಗಿಯೇ ಇರಬೇಕೆಂಬ ಆ ಒಂದು ಎಚ್ಚರ , ಆ ಒಂದು ಭಾವ ಬಹಳ ಅಗತ್ಯವಾದುದು. ಅದನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಕೂಡ.

ಪೊಂಗಲ್ ಹಬ್ಬ

**************

ನಾನು ಇಲ್ಲಿಗೆ ಬಂದ ನಂತರ ನಾವಿರುವ ಜುಬೇಲ್ ಎಂಬ ನಗರದಲ್ಲಿ  ನೂರಾರು ಭಾರತೀಯರ ಮನೆಗಳು ಒಂದೆಡೆ ಇರುವ ನೆಸ್ಮಾ ವಿಲೇಜ್ ತಮಿಳು ನಿವಾಸಿಗರೆಲ್ಲ ಸೇರಿ ಪೊಂಗಲ್ ಹಬ್ಬವನ್ನು ಅವರ ಸಾಂಪ್ರದಾಯಿಕ ಪದ್ಧತಿಯಂತೆಯೇ ಆಚರಿಸಿದಾಗ ನಮಗೂ ಅದರಲ್ಲಿ ಭಾಗವಹಿಸುವ ಅವಕಾಶ ಬಂತು‌.  ನಂತರ ಸಂಕ್ರಾಂತಿ ಭೋಗಿ ಹಬ್ಬವನ್ನು ತೆಲುಗರು ಆಚರಿಸಿದರು. ಇಲ್ಲಿ ಭಾರತದ ಹಲವು ರಾಜ್ಯಗಳ ಹಲವು ಭಾಷಿಕ, ಹಲವು ಸಂಸ್ಕೃತಿಗಳ ಜನರು ಒಂದೆಡೆ  ಇದ್ದಾರೆ. ಒಂದಾಗಿ ಕಾರ್ಯಕ್ರಮಗಳನ್ನು ಮಾಡುತ್ತಾರೆ.  ಕನ್ನಡಿಗರು, ಮರಾಠಿಗರು, ಮಲೆಯಾಳಿಗರು, ತಮಿಳರು, ತೆಲುಗರು, ಉತ್ತರ ಭಾರತದವರು ಎಲ್ಲರೂ ನೆಲೆಸಿದ ಮಿನಿ ಭಾರತ ಇದು.

ರಾಮೋತ್ಸವದ ಸಂಭ್ರಮ

*********************

ದಿ. ೨೨ ರಂದು ಭಾರತ ರಾಮೋತ್ಸವದ ಸಂಭ್ರಮದಲ್ಲಿದ್ದಾಗ ಇಲ್ಲಿ ನೆಲೆಸಿರುವ ಭಾರತೀಯರೂ ಆ ಸಂಭ್ರಮಕ್ಕೆ ಅವಕಾಶ ಮಾಡಿಕೊಟ್ಟರು. ನೆಸ್ಮಾ ಕಾಲನಿಯ ಎಲ್ಲರೂ ಒಂದುಗೂಡಿ ರಾಮ ಪೂಜೆ, ಭಜನೆಗಳ ಮೂಲಕ ನಾವೂ ಭಾರತದಲ್ಲೇ ಇದ್ದಂತಹ ಅನುಭವ ತಂದುಕೊಟ್ಟರು.  ಅಪ್ಪಟ ಹಿಂದೂ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗಿತ್ತು. ಹಿರಿಯರೆಂಬ ಕಾರಣಕ್ಕಾಗಿ ನಮಗೂ  ಆರತಿಗೆ ಅವಕಾಶ ದೊರಕಿತು.

ಮರಾಠಿಗರ ಸಂಸ್ಕೃತಿ ದಿನ

(ಜನೆವರಿ 26)

 

ನಿಜ, ಇಂದು ನಾನು ಮಹಾರಾಷ್ಟ್ರದಲ್ಲೇ ಇದ್ದ ಅನುಭವವಾಯಿತು. ಜುಬೇಲ್ ನಲ್ಲಿ ವಾಸಿಸುವ  ಸುಮಾರು ನೂರಿನ್ನೂರು ಮರಾಠಿ ಕುಟುಂಬದವರೆಲ್ಲ ಸೇರಿ   ಒಂದು “ಮರಾಠಿ ಮಂಡಲ, ಜುಬೇಲ್” ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಂಡು  ಹಲವಾರು ವರ್ಷಗಳಿಂದ ಪ್ರತಿವರ್ಷ ಜನೆವರಿ ೨೬ ರಂದು ದೊಡ್ಡ ಪ್ರಮಾಣದಲ್ಲಿ ಮರಾಠಿ ಸಾಂಸ್ಕೃತಿಕ ದಿನವನ್ನಾಚರಿಸುತ್ತ ಬಂದಿದ್ದಾರೆ. ಇಡೀ ದಿನದ ಕಾರ್ಯಕ್ರಮ. ಸುಮಾರು ಎರಡುನೂರಕ್ಕೂ ಹೆಚ್ಚು ಮರಾಠಿಗರ ಕುಟುಂಬದವರು ಒಂದಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುತ್ತಾರೆ.

 

ಇಲ್ಲಿ ಇನ್ನೊಂದು ವಿಶೇಷ ಹೇಳಲೇಬೇಕು. ಈ ಕಾರ್ಯಕ್ರಮ ನಡೆಯುವುದು ಜುಬೇಲ್ ನಗರದ ಹೊರವಲಯದಲ್ಲಿ ಸಮುದ್ರದ ನಡುವೆ ಇರುವ “ನಖೀಲ್ ಬೀಚ್ ಕ್ಯಾಂಪಿನ ಅಬು ಅಲಿ” ಎಂಬ ದ್ವೀಪದಲ್ಲಿ. ಈ  ದ್ವೀಪದಲ್ಲಿ ಬೇರೆ ಬೇರೆ ಕಂಪನಿಯವರು ಸುಂದರ ಸುಸಜ್ಜಿತ ಸಭಾಗೃಹಗಳನ್ನು ನಿರ್ಮಿಸಿಟ್ಟಿದ್ದಾರೆ. ಪಾರ್ಟಿ ಹಾಲ್ ಗಳಿವೆ. ಇವನ್ನು ಬಾಡಿಗೆಗೆ ಪಡೆದು ಸಭೆಸಮಾರಂಭಗಳನ್ನು ನಡೆಸಲಾಗುತ್ತದೆ. ಹಾಗೆ ಇಂದು ಮರಾಠಿ ಮಂಡಲದ ಕಾರ್ಯಕ್ರಮ ನಡೆದದ್ದು ಅಂತಹ ಒಂದು  ಬೀಚ್ ಕ್ಯಾಂಪಿನ ಸುಂದರ ಸಭಾಗೃಹದಲ್ಲಿ.  ಇಲ್ಲಿ ಎಲ್ಲ ಸೌಕರ್ಯಗಳೂ ಇವೆ. ಬಹಳ ಮನೋಹರ ವಾತಾವರಣ ಮನಸ್ಸಿಗೆ ಖುಷಿ ಕೊಡುತ್ತದೆ.

 

ಇಂದಿನ ಕಾರ್ಯಕ್ರಮದಲ್ಲಿ ಮರಾಠಿ ಮಂಡಳ ಜುಬೇಲ್ ವತಿಯಿಂದ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ  ಮೂರು ನಾಲ್ಕು ದಂಪತಿ ಜೋಡಿಗಳನ್ನು ವೇದಿಕೆಗೆ ಕರೆದು ಸನ್ಮಾನಿಸಲಾಯಿತು. ಅವರಲ್ಲಿ ನಮ್ಮ ಜೋಡಿಯೂ ಒಂದಾಗಿತ್ತು. ನಾವೂ ಅವರಿಂದ ಸನ್ಮಾನ ಸ್ವೀಕರಿಸಿದೆವು.

 

ಬೆಳಿಗ್ಗೆ ಒಂಬತ್ತಕ್ಕೆ ಎಲ್ಲರಿಗೂ ಉಪಾಹಾರ, ನಂತರ  ಮಕ್ಕಳಿಂದ , ದೊಡ್ಡವರಿಂದ ವಿವಿಧ ಹಾಡು,  ನೃತ್ಯ, ಸ್ಪರ್ಧೆ,  ಫ್ಯಾನ್ಸಿಡ್ರೆಸ್,  ಮತ್ತಿತರ ಕಾರ್ಯಕ್ರಮಗಳು ಸಂಜೆ ಐದರವರೆಗೂ ನಡೆದವು. ಬಹುಮಾನಗಳನ್ನು ವಿತರಿಸಲಾಯಿತು. ಬಹಳ ಉತ್ಸಾಹದಿಂದ ಕಾರ್ಯಕ್ರಮಗಳಲ್ಲಿ ೩೦೦ ಕ್ಕೂ ಹೆಚ್ಚು ಮರಾಠಿ ಸದಸ್ಯರು ಪಾಲ್ಗೊಂಡಿದ್ದರು. ಉತ್ತಮ ರೀತಿಯಲ್ಲಿ ಸಂಘಟಿಸಲಾಗಿತ್ತು. ದೇಶಭಕ್ತಿ ಗೀತೆಗಳು, ಧ್ವಜ ವಂದನೆ , ಪರೇಡ್ , ವಿವಿಧ ರಾಜ್ಯಗಳ ಸಾಂಪ್ರದಾಯಿಕ ನೃತ್ಯಗಳು, (ಕರ್ನಾಟಕವೂ ಸೇರಿ) , ಮಕ್ಕಳ ಏಕಪಾತ್ರಾಭಿನಯಗಳು ಏನೆಲ್ಲ ಇದ್ದವು. ( ಈ ದೇಶದ ಕಾನೂನಿನಂತೆ ಬಹಿರಂಗವಾಗಿ ಬೇರೆ ದೇಶದ ಧ್ವಜ‌ ಹಾರಿಸುವಂತಿಲ್ಲ / ಹಾರಿಸಿದರೂ ತೋರಿಸುವಂತಿಲ್ಲ. ).

 

ನಿನ್ನೆ ಇಡೀದಿನ ಈ ಸುಂದರ ಕಾರ್ಯಕ್ರಮದ ಸಂಭ್ರಮದಲ್ಲಿ ಕಳೆಯುವಂತಾಯಿತು. ಇದೊಂದು ಹೊಸ ಅನುಭವವವೇ ಆಯಿತು. ನಾವು ಸೌದಿ ಅರೇಬಿಯಾದಲ್ಲಿದ್ದೂ ಭಾರತೀಯ ವಾತಾವರಣದ ನಡುವೆ ಉಳಿಯುವಂತಾಗಲು ಇಲ್ಲಿಯ ಭಾರತೀಯರು ತಮ್ಮ ದೇಶಭಕ್ತಿಯನ್ನು ಉಳಿಸಿಕೊಂಡಿರುವುದೇ ಕಾರಣ. ಇದು ಅಭಿಮಾನದ ಸಂಗತಿ. ಈ  ಎಲ್ಲ ಭಾರತೀಯ ಬಾಂಧವರಿಗೆ ಅಭಿನಂದನೆಗಳು. ನಾವು ಇಲ್ಲಿಗೆ ಬಂದ ಒಂದು ತಿಂಗಳಲ್ಲೇ ಈ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶವಾದದ್ದು ನಮಗೆ ಒಂದು ಬಗೆಯ  ಸಾಂಸ್ಕೃತಿಕ ಪಯಣದ ಅನುಭೂತಿ ತಂದುಕೊಟ್ಟಿತು.

(ಚಿತ್ರ: ಮಕ್ಕಳ ಫ್ಯಾನ್ಸಿಡ್ರೆಸ್ ನಲ್ಲಿ ಝಾಂಸಿ ರಾಣಿ, ಮತ್ತು ಶಿವಾಜಿ ಮಹಾರಾಜರು. ‌ಬೀಚ್ ಕ್ಯಾಂಪ್ ಸಭಾಗೃಹದೆದುರು ನಾವು ಇತರ ಆತ್ಮೀಯರೊಡನೆ.