ಸೌದಿ ಅರೇಬಿಯಾವೇನಿದ್ದರೂ ಕಳೆದ ಒಂದು ದಶಕದಲ್ಲಿ ಅಭೂತಪೂರ್ವ ಬೆಳವಣಿಗೆಯನ್ನುಕಂಡಿದ್ದಿದ್ದರೆ ಅದರ ಹಿಂದೆ ಇರುವುದು ” ವಿಷನ್- 2030 ” ಎಂಬ ಶಬ್ದ. ಅದು ಕೇವಲ ಶಬ್ದವಲ್ಲ, ಅದೊಂದು ಶಕ್ತಿ. 2016 ರಲ್ಲಿ ರೂಪ ಪಡೆದ ಈ ವಿಶಿಷ್ಟ ಕಾರ್ಯಯೋಜನೆ ಈಗ ಅರ್ಧ ದಾರಿಯನ್ನು ಕ್ರಮಿಸಿದ್ದು , ಅದರ ಅದ್ಭುತ ಪರಿಣಾಮಗಳು ಸಹ ಗೋಚರಿಸತೊಡಗಿವೆ. ಹಾಗಿದ್ದರೆ ಈ ಯೋಜನೆಯ ಸ್ವರೂಪವೇನು, ಅದರ ಉದ್ದೇಶ/ ಗುರಿಗಳೇನು, ಅದರ ವೈಶಿಷ್ಟ್ಯಗಳೇನು, ಯಾವ ರೀತಿ ಅದು ಕಾರ್ಯ ನಿರ್ವಹಿಸುತ್ತಿದೆ ಎನ್ನುವುದನ್ನು ನಾವು ತಿಳಿದುಕೊಳ್ಳುವುದಗತ್ಯ.

ಎಲ್ಲರಿಗೂ ಅರಿವಿರುವಂತೆ ಸೌದಿ ಅರೇಬಿಯಾದ ಮೂಲ ಶಕ್ತಿಯೇ ಇಂಧನ ಕ್ಷೇತ್ರ. ಜಗತ್ತಿನ ಅತ್ಯಂತ ಶ್ರೀಮಂತ ದೇಶವೆನಿಸಲು ಕಾರಣವಾದದ್ದು ಅಲ್ಲಿಯ ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ವಸ್ತುಗಳು. ಆದರೆ ಈಗ ಅದು ಕೇವಲ ತೈಲೋದ್ಯಮದ ಆರ್ಥಿಕ ಅವಲಂಬನೆಯನ್ನು ತಪ್ಪಿಸಿಕೊಂಡು ಇತರ ಆರ್ಥಿಕ ಮೂಲಗಳನ್ನು ಬೆಳೆಸುವ ವಿಚಾರವನ್ನು ಇರಿಸಿಕೊಂಡು ಅದಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಿಕೊಂಡು ಮುನ್ನಡೆದಿದೆ. ವಿಷನ್ – 2030 ರ ಒಂದು ಮುಖ್ಯ ಅಂಶ ಅದು. ತೈಲೇತರ ಖಾಸಗಿ ಆರ್ಥಿಕ ವಲಯವನ್ನು ಬೆಳೆಸುವುದು, ಜಾಗತಿಕ ಹೂಡಿಕೆಯ ಶಕ್ತಿ‌ ಮತ್ತು ವ್ಯಾಪ್ತಿಯನ್ನು ಹೆಚ್ಚಿಸುವುದು, ಉದ್ಯೋಗಾವಕಾಶಗಳ ಹೆಚ್ಚಳ, ಜಾಗತಿಕ ಆಧುನಿಕ ಬದಲಾವಣೆಗಳಿಗೆ ಸ್ಪಂದಿಸುವುದು , ಮಹಿಳಾ ಸಬಲೀಕರಣ, ಯುವಶಕ್ತಿ ಅಭಿವೃದ್ಧಿ ಸೇರಿದಂತೆ ಹಲವು ಬಗೆಯ ಕಾರ್ಯಯೋಜನೆಗಳನ್ನು ಕಳೆದ ಎಂಟು ವರ್ಷಗಳ ಅವದಿಯಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗುತ್ತಿದೆ. ಈ ಮುಲಕ ೨೦೨೩ ರಲ್ಲಿ ಶೇ. ೧೧ ರಷ್ಟು ಆದಾಯ ಹೆಚ್ಚಳವನ್ನು ದಾಖಲಿಸಲಾಗಿದೆ. ತೈಲದ ಹೊರತಾಗಿ ಸೌದಿ ಅರೇಬಿಯಾದಲ್ಲಿ ಚಿನ್ನ, ಫಾಸ್ಫೇಟ್, ಯುರೇನಿಯಂ ಮೊದಲಾದ ಕ್ಷೇತ್ರಗಳಲ್ಲೂ ಅವಕಾಶಗಳಿವೆ. ಅವುಗಳನ್ನೆಲ್ಲ ಪರಿಪೂರ್ಣವಾಗಿ ಬಳಸಿಕೊಂಡು ಕೇವಲ ತೈಲೋದ್ಯಮದ ಅವಲಂಬನೆಯನ್ನು ತಪ್ಪಿಸಿಕೊಳ್ಳುವುದು ಸರಕಾರದ ಗುರಿಯಾಗಿದೆ. ಇದಕ್ಕೆ ಬೇರೆ ಅಂತಾರಾಷ್ಟ್ರೀಯವಾದ ಕಾರಣಗಳೂ ಇವೆ. ಹಲವು ಪ್ರಮುಖ ರಾಷ್ಟ್ರಗಳು ತೈಲ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಅಥವಾ ಬದಲಿ ಇಂಧನಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವುದೂ ಇದಕ್ಕೆ ಒಂದು ಕಾರಣವೆನ್ನಬಹುದು.

ವಿಷನ್- 2030 ರ ಕೆಲ ಮುಖ್ಯಾಂಶಗಳನ್ನು ಈ ರೀತಿಯಾಗಿ ಗುರುತಿಸಬಹುದು.
೧. ಒಂದು ವೈಬ್ರೆಂಟ್ ಸೊಸೈಟಿಯ ನಿರ್ಮಾಣ. ಅಂದರೆ ಸಾಮಾಜಿಕ ಮೂಲ ಸೌಕರ್ಯಗಳ ಹೆಚ್ಚಳದ ಮೂಲಕ ಜನರ ಬದುಕಿನ ಮೂಲ ಬೇರುಗಳನ್ನು ಬಲಗೊಳಿಸುವುದು/ ಪರಿಣಾಮಕಾರಿ ಸಾಮಾಜಿಕ ಸೇವೆಗಳನ್ನು ಒದಗಿಸುವುದು/ಸಾಂಸ್ಕೃತಿಕ ಸಂಪ್ರದಾಯಗಳ ರಕ್ಷಣೆ/ ಆಧುನಿಕ ಸೌಕರ್ಯಗಳ ಉನ್ನತೀಕರಣ ಇತ್ಯಾದಿ .
೨. ಅಭಿವೃದ್ಧಿ ಆರ್ಥಿಕತೆ ಸೃಷ್ಟಿ ೩. ಮಹತ್ವಾಕಾಂಕ್ಷೆಯ ರಾಷ್ಟ್ರ ನಿರ್ಮಾಣ ೪. ಪ್ರವಾಸೋದ್ಯಮ ವಿಸ್ತರಣೆ ೫. ಪಾರದರ್ಶಕ , ಜವಾಬ್ದಾರಿಯುತ ಆಡಳಿತ ೬. ಆಡಳಿತದ ದಕ್ಷತೆ ಹೆಚ್ಚಿಸಲು ಸರಕಾರಿ ಸೇವೆಗಳ ಡಿಜಿಲೀಕರಣಕ್ಕೆ ಒತ್ತು. ೭. ನಾಗರಿಕರ ಜೀವನದ ಗುಣಮಟ್ಟ ಹೆಚ್ಚಳ. ೮. ಆರೋಗ್ಯಕರ ಜೀವನ ಶೈಲಿಗೆ ಪ್ರೋತ್ಸಾಹ. ೯. ಶೈಕ್ಷಣಿಕ ಗುಣಮಟ್ಟ ಹೆಚ್ಚಳ. ೧೦. ಉದ್ಯೋಗಿಗಳಿಗೆ ತರಬೇತಿ ಕಾರ್ಯಕ್ರಮ. ೧೧. ಮನರಂಜನಾ ಕ್ಷೇತ್ರ ವಿಸ್ತರಣೆ ೧೨. ಹೊಸ ಸೌದಿ ನಗರಗಳ ನಿರ್ಮಾಣ ಮತ್ತು ಅಭಿವೃದ್ಧಿ. ೧೩. ಆನ್ಲೈನ್ ಸೇವೆ ವಿಸ್ತರಣೆ. ೧೪. ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಸ್ವಂತ ಮನೆಗಳನ್ನು ಹೊಂದುವಂತೆ ಅವರ ಸಬಲೀಕರಣಕ್ಕೆ ಅವಕಾಶ ಕಲ್ಪಿಸುವುದು
ಇತ್ಯಾದಿ.

ವಿಷನ್- 2030 ಕಾರ್ಯಯೋಜನೆ ಈಗಾಗಲೇ ನಿರೀಕ್ಷಿತ ಫಲ ಕೊಡತೊಡಗಿದ್ದು ಅದರ ನಿಶ್ಚಿತ ಪರಿಣಾಮಗಳು ಕಂಡುಬರತೊಡಗಿವೆ. ಆದಾಯದಲ್ಲಿ ಹೆಚ್ಚಳವಾಗಿದೆ. ಜೀವನ ಸ್ವರೂಪದಲ್ಲಿ ನಿರ್ಧಾರ ಹೊನ್ನು. ಗುಣಮಟ್ಟ ಹೆಚ್ಚತೊಡಗಿದೆ. ಈ ಮೊದಲು ಬರೆದಂತೆ ” ರೇಖಾ ನಗರ”( The Line City) ದಂತಹ ಅಪೂರ್ವ ಯೋಜನೆಗಳು ಕಾರ್ಯಗತವಾಗತೊಡಗಿವೆ. ತೈಲೇತರ ಆದಾಯಗಳಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಮನೆಯ ಉಳಿತಾಯದ ಆದಾಯ ಶೇ ೬ ರಿಂದ ೧೦ ಕ್ಕೇರಿದೆ. ಸರಕಾರಿ ಸ್ವಾಮ್ಯದ ಆಸ್ತಿಗಳಿಂದ ಬರುವ ಆದಾಯ ಹೆಚ್ಚಿದೆ. ಇಂತಹ ಹಲವು ಸಕಾರಾತ್ಮಕ ಅಂಶಗಳಿಂದಾಗಿ ಉತ್ತೇಜಿತವಾಗಿರುವ ಸೌದಿ ಸರಕಾರ ಮುಂದಿನ ಆರು ವರುಷಗಳಲ್ಲಿ ವಿಷನ್ -೨೦೩೦ ರ ಮೂಲಕ ಬಹಳಷ್ಟನ್ನು ನಿರೀಕ್ಷಿಸುತ್ತಿರುವುದು ಸಹಜ..

ಸೌದಿ ಸರಕಾರದ ಬಹಳ ದೊಡ್ಡ ಅನುಕೂಲವೆಂದರೆ ಅಲ್ಲಿ ನಮ್ಮಲ್ಲಿಯಂತೆ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಗಾಲು ಹಾಕುವ ರಾಜಕೀಯ ಪ್ರತಿ ಪಕ್ಷಗಳಿಲ್ಲ. ಅಭಿವೃದ್ಧಿಯಲ್ಲೂ ವೈಯಕ್ತಿಕ ರಾಜಕೀಯ ತರುವ ರಾಜಕಾರಣಿಗಳಿಲ್ಲ. ಸರಕಾರಕ್ಕೆ ತನ್ನ ಉದ್ದೇಶಿತ ಯೋಜನೆಗಳನ್ನು ತನ್ನ ಮನಸ್ಸಿಗೆ ತಕ್ಕಂತೆ ಜಾರಿಗೊಳಿಸಲು ಎಲ್ಲ ರೀತಿಯಲ್ಲೂ ದಾರಿ ತೆರವಾಗಿದೆ. ಈ ಮೂಲಕ ಮುಂದಿನ ದಶಕದಲ್ಲಿ ಸೌದಿ ಅರೇಬಿಯಾ ವಿಶ್ವದ ಒಂದು ಪ್ರಬಲ ಆರ್ಥಿಕತೆಯ ಮತ್ತು ಪ್ರಗತಿಪರ ರಾಷ್ಟ್ರಗಳ ಅಗ್ರ ಸಾಲಿನಲ್ಲಿ ಕಾಣಿಸಿಕೊಳ್ಳುವುದರಲ್ಲಿ ಅಚ್ಚರಿಯೂ ಇಲ್ಲ, ಅನಿರೀಕ್ಷಿತವೂ ಅಲ್ಲ.

 

ಎಲ್. ಎಸ್. ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ