ಈ ವರ್ಷ ಭಾರತದಿಂದ ಹಜ್ ಯಾತ್ರೆಗೆ ಸುಮಾರು ೧ ಲಕ್ಷ ೭೫ ಸಾವಿರ ಮುಸ್ಲಿಂ ಯಾತ್ರಿಕರು ಹೊರಡಲಿದ್ದಾರೆ ಮತ್ತು ಕರ್ನಾಟಕದಿಂದ ಹತ್ತು ಸಾವಿರದಷ್ಟು ಹಜ್ ಯಾತ್ರಿಕರು‌ ಹೊಗಲಿದ್ದಾರೆ ಎಂದು ಸುದ್ದಿಯಾಗಿದೆ.
ಜಗತ್ತಿನ ಇಸ್ಲಾಂ ಧರ್ಮೀಯರಿಗೆಲ್ಲ ಪವಿತ್ರ ಕ್ಷೇತ್ರ ಸ್ಥಳಗಳೆಂದರೆ ಮೆಕ್ಕಾ ಮತ್ತು ಮದೀನಾ. ಇವೆರಡೂ ಸೌದಿ ಅರೇಬಿಯಾದಲ್ಲೇ ಇವೆ. ಮತ್ತೊಂದು ಜೆರೂಸಲೇಂ. ಅದು ಇಸ್ರೇಲ್ ನಲ್ಲಿದೆ. ಮುಸ್ಲಿಮರು ಬದುಕಿನಲ್ಲಿ ಒಮ್ಮೆಯಾದರೂ ಹೋಗಲೇಬೇಕೆಂದು ಬಯಸುವುದು ಮೆಕ್ಕಾ ಮತ್ತು ಅಲ್ಲಿರುವ ಕಾಬಾ. ಮುಸ್ಲಿಮೇತರರಿಗೆ ಇಲ್ಲಿ ಒಳಪ್ರವೇಶವಿಲ್ಲ. ಪ್ರತಿ ವರ್ಷ ಎರಡು ದಶಲಕ್ಷಕ್ಕೂ ಹೆಚ್ಚು ಇಸ್ಲಾಂ ಯಾತ್ರಿಕರು ಹಜ್ ಯಾತ್ರೆ ಕೈಗೊಳ್ಳುತ್ತಾರೆ.

ಮೆಕ್ಕಾ/ ಮಕ್ಕಾ/ ಬಕ್ಕಾ/ ಮಕೋರಬಾ ಇರುವುದು ಪಶ್ಚಿಮ ಸೌದಿಯಲ್ಲಿ. ಕೆಂಪು ಸಮುದ್ರದ ಕರಾವಳಿಯಿಂದ ಒಳನಾಡು ಸಿರಾತ್ ಪರ್ವತ ಪ್ರದೇಶದಲ್ಲಿ. ಇಸ್ಲಾಂ ಧರ್ಮ ಸಂಸ್ಥಾಪಕ ಪ್ರವಾದಿ ಮಹ್ಮದರ ಜನ್ಮ ಸ್ಥಳವಾದ್ದರಿಂದ ಇದಕ್ಕೆ ಮಹತ್ವ ಬಂದಿದೆ. ಮದೀನಾದಲ್ಲಿ ಮಹ್ಮದರ ಸಮಾಧಿ ಇದೆ. ಸೌದಿ ಅರೇಬಿಯಾದ ದೊರೆ ತನ್ನ ಹೆಸರಿನೊಡನೆ ” ಎರಡು ಪವಿತ್ರ ಮಸೀದೆಗಳ ಪಾಲಕ” ಎಂದು ಹಾಕಿಕೊಳ್ಳುತ್ತಾನೆ. ಅವೇ ಮೆಕ್ಕಾ ಮತ್ತು ಮದೀನಾ. ಮೆಕ್ಕಾದಿಂದ ಮದೀನಾ ೨೭೫ ಮೈಲು ದೂರವಿದೆ.
ಸಾಮಾನ್ಯವಾಗಿ ಮೆಕ್ಕಾದ ಬಗ್ಗೆ ಎಲ್ಲರೂ ಅರಿತಿರುತ್ತಾರೆ. ಅಲ್ಲಿರುವ ಭವ್ಯ ಅಲ್ ಹರಾಂ ಅಥವಾ ಗ್ರೇಟ್ ಮಸೀದೆಯ ಆವರಣದಲ್ಲಿಯೇ ಕಾಬಾ ಇದೆ. ಕಾಬಾ ಎಂದರೆ ಘನ ಎಂಬ ಅರ್ಥವೂ ಇದೆ. ಇದು ಚೌಕಾಕಾರವಾಗಿದ್ದು ಸುಮಾರು ೫೦ ಅಡಿ ಎತ್ತರ ಮತ್ತು ೩೫-೪೦ ಅಡಿ ಅಗಲವಾಗಿದೆ. ಬೂದುಕಲ್ಲು – ಅಮೃತಶಿಲೆಗಳಿಂದ ನಿರ್ಮಾಣವಾದ ಈ ರಚನೆಯ ಒಳಗೆ ವೀಶೇಷವೇನಿಲ್ಲ. ಮೂರು ಆಧಾರ ಸ್ತಂಭಗಳು ಮತ್ತು ಬಳಸದ ಬೆಳ್ಳಿ ಚಿನ್ನದ ದೀಪದಂತಹ ವಸ್ತುಗಳಿವೆಯೆನ್ನಲಾಗಿದೆ. ಇದರ ಒಂದು ಮೂಲೆಯಲ್ಲಿ ಬ್ಲ್ಯಾಕ್ ಸ್ಟೋನ್ ಕಪ್ಪುಶಿಲೆ ಎನ್ನುವುದಿದೆ. ಯಾತ್ರಿಕರು ಇದನ್ನು ತಮ್ಮ ಹಸ್ತದಿಂದ ಸ್ಪರ್ಶಿಸಬಯಸುತ್ತಾರೆ. ಹಜ್ ಯಾತ್ರಿಕರು ಈ ಕಾಬಾದ ಸುತ್ತ ಅಪ್ರದಕ್ಷಿಣೆಯಾಗಿ ಏಳು ಸುತ್ತು ಸುತ್ತಿ ತಮ್ಮ ಗೌರವ ಸೂಚಿಸುತ್ತಾರೆ. ಒಂದು ಐತಿಹ್ಯದ ಪ್ರಕಾರ ಇಸ್ಲಾಂ ಪೂರ್ವದಲ್ಲಿ ಇದು ಬಹುವಿಗ್ರಹಾರಾಧನೆಯ ಸ್ಥಳವಾಗಿತ್ತು ಮತ್ತು ಇಲ್ಲಿ ೩೬೦ ರಷ್ಟು ವಿಗ್ರಹಗಳಿದ್ದವೆಂದು ಹೇಳಲಾಗುತ್ತದೆ. ೬೦೫ CE ಯಲ್ಲಿ ಪ್ರವಾದಿ‌ ಮಹ್ಮದರಿಂದ ಇದು ಇಸ್ಲಾಂ ಧರ್ಮೀಯರ ಪವಿತ್ರ ಸ್ಥಳವಾಗಿ ರೂಪುಗೊಂಡಿತು. ಕಾಬಾದ ಸುತ್ತಲಿನ ಪ್ರದೇಶಕ್ಕೆ ಮತಾಫ್ ಎನ್ನುತ್ತಾರೆ. ಉಳಿದ ದಿನಗಳಲ್ಲಿ ಈ ಕಾಬಾದ ಸುತ್ತ ಕಪ್ಪು ಬಟ್ಟೆ – ಕಿಸ್ವಾ ಆವರಣವಿರುತ್ತದೆ. ಕಾಬಾ ಹಿಂದೆ ಹಲವು ಬಾರಿ ಆಕ್ರಮಣಕ್ಕೆ ತುತ್ತಾಗಿ ನಾಶವಾಗಿ ಪುನರ್ನಿರ್ಮಾಣವಾಗಿದೆ. ಸೌದಿ ಅರಸರು ಈಗ ಆ ಪ್ರದೇಶವನ್ನು ಸಾಕಷ್ಟು ಸುಧಾರಣೆ ಮಾಡಿದ್ದು ಅಲ್ಲಿ ಯಾತ್ರಿಕರಿಗಾಗಿ ಅನೇಕ ಬಗೆಯ ಸೌಕರ್ಯಗಳನ್ನು ನಿರ್ಮಿಸಿದ್ದಾರೆ. ಇಲ್ಲಿಯ ಹಿರಾ ಪರ್ವತದ ಗುಹೆಯಲ್ಲಿಯೇ ಪ್ರವಾದಿ ಮಹ್ಮದರಿಗೆ ಕುರಾನಿನ ಮೊದಲ ಪದ್ಯದ ದರ್ಶನವಾಯಿತಂತೆ. ಕಾಬಾದಂತೆ ಅಲ್ಲಿರುವ ಝಮ್ಝಮ್ನ ಬಾವಿಯೂ ಅವರಿಗೆ ಬಹಳ ಪವಿತ್ರವಾದುದಾಗಿದೆ. ಮೆಕ್ಕಾ ಅತ್ಯಂತ ಉಷ್ಣ ಪ್ರದೇಶವಾಗಿದೆ.

ಹೆಜಾಜ್ ಪ್ರದೇಶದಲ್ಲಿರುವ ಮದೀನಾವನ್ನು ಇಸ್ಲಾಂ ಧರ್ಮದ ತೊಟ್ಟಿಲು ಎಂದು ಕರೆಯಲಾಗುತ್ತದೆ. ಇಲ್ಲಿ ೧೮೧೭ ರಲ್ಲಿ ಬೃಹತ್ ಗುಮ್ಮಟ ನಿರ್ಮಾಣವಾಯಿತು ಮತ್ತು ಅದಕ್ಕೆ ಹಸಿರು ಬಣ್ಣ ಬಳಿಯಲಾಯಿತು. ಅದೇ ಅಧಿಕೃತವಾಗಿ ಮುಸ್ಲಿಮರ ಬಣ್ಣವಾಗಿ ಮನ್ನಣೆ ಪಡೆಯಿತು. ಮದೀನಾ ಫಲವತ್ತಾದ ಓಯಸಿಸ್ ಭಾಗದಲ್ಲಿದ್ದು ಇಲ್ಲಿಯ ಜನ ಬೇಸಾಯ ಮತ್ತು ಕುಂಬಾರಿಕೆ ಉದ್ಯೋಗದಿಂದ ಬದುಕುತ್ತಿದ್ದವರು. ಹಿಂದೆ ಇಲ್ಲಿ ಚಿನ್ನದ ಗಣಿಗಾರಿಕೆಯೂ ಇತ್ತು. ಈಗ ಪ್ರವಾಸಿಗಳಿಂದ ದೊಡ್ಡ ಆದಾಯ ಬರುತ್ತಿದೆ.

 

ಎಲ್. ಎಸ್. ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ