ಈ ವಾರಾಂತ್ಯದಲ್ಲಿ ಸೌದಿ ಅರೇಬಿಯಾ ವಿಪರೀತ ಚಳಿಯನ್ನು ಅನುಭವಿಸಲಿದೆಯೆಂದು ಸುದ್ದಿ. . ರಾಜಧಾನಿ ರಿಯಾಧನಲ್ಲಂತೂ ಬಹಳ ಚಳಿಯಂತೆ. ನಾವಿರುವ ಜುಬೇಲ್ ನಲ್ಲೂ ಚಳಿ ಇದೆ. ಮಂದ ಬಿಸಿಲು. ಏನಿದ್ದರೂ ಸೌದಿ ಅರೇಬಿಯಾದ ಪ್ರವಾಸಕ್ಕೆ ನವೆಂಬರದಿಂದ ಫೆಬ್ರುವರಿ ತನಕದ ಕಾಲವೇ ಹೆಚ್ಚು ಅನುಕೂಲ. ಇಲ್ಲಿ ಸ್ವಲ್ಪ ಮಳೆ ಬೀಳುವುದಿದ್ದರೂ ಅದು ಚಳಿಗಾಲದಲ್ಲೇ. ನಮಗೂ ಆ ಮಳೆಯನ್ನು ನೋಡುವ ಅವಕಾಶ ಸಿಕ್ಕಿತು.
ಎಲ್ಲರಿಗೂ ತಿಳಿದಿರುವಂತೆ ಅರಬ್ ಮರುಭೂಮಿ ಅತಿಯಾದ ಬಿಸಿಲು/ ಉಷ್ಣ ಹವಾಮಾನಕ್ಕೆ ಪ್ರಸಿದ್ಧ. ಜುಲೈ ತಿಂಗಳು ಇಲ್ಲಿ ದಿನದ ಹನ್ನೊಂದು ತಾಸು ಬಿಸಿಲು. ಮೇ ತಿಂಗಳಿನಿಂದ ಬಿಸಿಲು ಏರುತ್ತ ಏರುತ್ತ ಅಗಸ್ಟ್ ವೇಳೆಗೆ ೪೫-೪೯ ಡಿಗ್ರಿಗೆ ತಲುಪುತ್ತದೆ. ಹೊರಗೆ ರಸ್ತೆಯಲ್ಲಿ ತಿರುಗಾಡುವ ಪ್ರಶ್ನೆ ಇಲ್ಲವೇ ಇಲ್ಲ. ಸಾಮಾನ್ಯವಾಗಿ ಇಲ್ಲಿಯ ನಗರದ ಪ್ರಮುಖ ರಸ್ತೆಗಳಲ್ಲಿ ಜನ ತಿರುಗಾಡುವುದನ್ನು ನೋಡಲು ಸಾಧ್ಯವಿಲ್ಲ. ಮಾಲ್, ಹೊಟೆಲ್, ಬೀಚ್ ಮೊದಲಾದ ಸ್ಥಳಗಳಲ್ಲೇ ಒಂದಿಷ್ಟು ಜನ ಕಾಣಸಿಗುತ್ತಾರೆ. ಅದೂ ಬಹುತೇಕ ಎಲ್ಲರೂ ಕಾರಿನಲ್ಲಿಯೇ ತಿರುಗಾಡುವವರು. ಇಲ್ಲಿಯ ಬಿಸಿಲುಗಾಲ ದೀರ್ಘವಾದದ್ದು ಮತ್ತು ಯಾರನ್ನೂ ಕ್ಷಮಿಸದಂತಹದು ಎಂಬ ಮಾತಿದೆ. ಅದು ನಿಜ. ದೇಶದ ನೈಋತ್ಯ ಭಾಗ ಬಿಟ್ಟರೆ ಉಳಿದೆಡೆ ಅತಿ ಶುಷ್ಕ ಹವೆ. ಮಧ್ಯಭಾದಲ್ಲಿ ಅತಿ ಉಷ್ಣತೆ. ಒಳನಾಡಿನಲ್ಲಿ 27 ರಿಂದ 43 ಡಿ. ಸೆ. ಉಷ್ಣತೆ. ಕರಾವಳಿ ಭಾಗದಲ್ಲಿ ೨೭-೩೮ ಡಿ. ಸೆ. ಚಳಿಗಾಲದಲ್ಲಿ ಸರಾಸರಿ ೮ ರಿಂದ ೨೦ , ಕೆಲವೆಡೆ ೧೯-೨೯ ಡಿ. ಸೆ.
ವಾರ್ಷಿಕವಾಗಿ ನೈಋತ್ಯ ಭಾಗದಲ್ಲಿ ಮಳೆಯ ಪ್ರಮಾಣ ಅತಿ ಹೆಚ್ಚೆಂದರೆ ೪೦೦-೬೦೦ ಮಿ. ಮಿ. ಉಳಿದೆಡೆ ೧೫೦ ಮಿಮಿ. ಗಿಂತ ಕಡಿಮೆ. ಸೌದಿಯಲ್ಲೇ ಅತಿ ಹೆಚ್ಚು ಉಷ್ಣತೆಯಿರುವ ನಗರ ಮೆಕ್ಕಾ. ಸೆಪ್ಟೆಂಬರ್ ಅಕ್ಟೋಬರ್ ತಿಂಗಳುಗಳನ್ನು ಇಲ್ಲಿ ಶರತ್ಕಾಲವೆನ್ನಬಹುದು. ಬೇಸಿಗೆ ೩ ತಿಂಗಳು ಶಾಲೆಗೆ ರಜೆ. ಆಗ ಜನ ಬೇರೆ ಬೇರೆ ತಂಪಿನ ಸ್ಥಳಗಳನ್ನು ಹುಡುಕಿಕೊಂಡು ಪ್ರವಾಸ ಹೋಗುತ್ತಾರೆ. ಅಲ್ ತೈಫ್- ಅಲ್ ಮದೀನಾ ಪರ್ವತ ಪ್ರದೇಶ, ಸ್ನೋ ಸಿಟಿ, ಕೆಲವು ದೊಡ್ಡ ಮಾಲ್ ಗಳಲ್ಲಿ ಐಸ್ ಸ್ಕೇಟಿಂಗ್‌, ಸ್ಕೀಯಿಂಗ್, ಸ್ಲೆಡ್ಜಿಂಗ್ ಮೊದಲಾದವುಗಳತ್ತ ಜನರ ಗಮನ. ಇಸ್ತೀರಾಹ್ ಅಂದರೆ ವಿಶ್ರಾಂತಿ ಗೃಹಗಳಿಗೆ ಬಹಳ ಬೇಡಿಕೆ. ಮಾರ್ಚದಿಂದ ಜುಲೈ ನಡುವಿನ ವಸಂತ ಕಾಲದಲ್ಲಿ ಮರಳಿನ ಬಿರುಗಾಳಿ ಜಾಸ್ತಿ. ಅದಕ್ಕೆ ಹ್ಯಾಬೂಬ್ಸ್ ಎನ್ನುತ್ತಾರೆ. ಈ ಕಾಲದಲ್ಲೇ ಸಸ್ಯಗಳು ಕಾಣಿಸಿಕೊಳ್ಳುವುದು ಹೆಚ್ಚು.
ಶುಷ್ಕ ಮರುಭೂಮಿಗೆ ತಕ್ಕಂತೆ ಇಲ್ಲಿ ವರ್ಷದಲ್ಲಿ ಒಟ್ಟು ಸುಮಾರು ೩೪೦೦ ಗಂಟೆಗಳ ಕಾಲ ಬಿಸಿಲು. ಅತಿ ತಂಪಿನ ತಿಂಗಳುಗಳು ಜನೆವರಿ ಫೆಬ್ರುವರಿ. ಅತಿ ಬಿಸಿಲಿನ ತಿಂಗಳು ಜುಲೈ. ವಾರ್ಷಿಕ ಸರಾಸರಿ ಮಳೆ ೧೧೧ ಮಿಮಿ.
ಇಲ್ಲಿಯ ಜನ ಈ ವಾತಾವರಣಕ್ಕೆ ಹೊಂದಿಕೊಂಡಿದ್ದಾರೆ. ಅನಿವಾರ್ಯವೂ ಹೌದು.
ಸೌದಿ ಜನ ಯಾವಾಗಲೂ ಹೆಚ್ಚು ಕೆಲಸ ಮಾಡುವವರಲ್ಲ ಎಂಬ ಮಾತಿದೆ. ಸರಕಾರಿ‌ ಕೆಲಸಗಾರರು ಸರಾಸರಿ ದಿವಸಕ್ಕೆ ಒಂದು ತಾಸು ಕೆಲಸ ಮಾಡಿದರೆ ಹೆಚ್ಚು. ಅದನ್ನು ಸಚಿವರೊಬ್ಬರೇ ಹೇಳಿದ್ದಾರೆ. ಐಷಾರಾಮಿ ಜೀವನ ಶೈಲಿ ಇವರಿಗೆ ಇಷ್ಟ. ಪ್ರವಾಸದಲ್ಲಿ , ತಿನ್ನುವುದರಲ್ಲಿ, ಕಾಫಿ ಕುಡಿಯುವುದರಲ್ಲಿ ಬಹಳ ಆಸಕ್ತಿ. ವಿದೇಶಿ ಉದ್ಯೋಗಿಗಳಿಗೆ ಅದಕ್ಕೇ ಬೇಡಿಕೆ ಜಾಸ್ತಿ. ಕೆಲಸ ಮಾಡುವವರು ಅವರೇ.
ಸೌದಿಯಲ್ಲಿ ಮದ್ಯಪಾನ ನಿಷೇಧ ೧೯೫೦ ರೀಚೆ ಜಾರಿಗೆ ಬಂತು. ಈಗಿನ ಅರಸನ ಉದಾರೀಕೃತ ಸಾಮಾಜಿಕ ನೀತಿಯಿಂದಾಗಿ ೭೦ ವರ್ಷಗಳ ನಂತರ ಈಗ ವಿದೇಶೀ ರಾಜತಾಂತ್ರಿಕರಿಗಾಗಿ ಆ ನಿಯಮ ಸಡಿಲಿಸಿ ರಾಜಧಾನಿ ರಿಯಾಧ್ ನಲ್ಲಿ ಒಂದು ಮದ್ಯದಂಗಡಿ ಆರಂಭಿಸಲಾಗಿದೆ. ಮುಂದೆ ಈ ನಿಯಮ ಇನ್ನಷ್ಟು ಉದಾರವಾದರೆ ಆಶ್ಚರ್ಯವೇನಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಹಲವು ಬಗೆಯ ಬದಲಾವಣೆಗಳಿಗೆ ಮೈಒಡ್ಡುತ್ತಿರುವ ಸೌದಿ ಅರೇಬಿಯಾ ಒಂದೊಂದಾಗಿ‌ತನ್ನ ಹಳೆಯ ಪದರುಗಳನ್ನು ಕಳಚಿಹಾಕುತ್ತಲಿದೆ. ಅದೇ ವಿಶೇಷ.

 

ಎಲ್. ಎಸ್. ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ