ಕರ್ನಾಟಕ, ಕನ್ನಡಿಗರ ವಿರೋಧಿ ನಿಲುವನ್ನು ಸಚಿವ ಸಂಪುಟವೇ ಖಂಡಿಸಬೇಕು ಮತ್ತೆ ರಾಜಭವನಕ್ಕೇ ಕಳಿಸಬೇಕು! ಕರ್ನಾಟಕದಲ್ಲಿ ವಾಣಿಜ್ಯ ಸಂಸ್ಥೆಗಳ, ಅಂಗಡಿ ಮುಗ್ಗಟ್ಟುಗಳ ನಾಮಫಲಕಗಳಲ್ಲಿ
ಪ್ರತಿಶತ 60 ರಷ್ಟು ಕನ್ನಡವೇ ಇರಬೇಕು ಎಂದು ಕಡ್ಡಾಯಗೊಳಿಸಿರುವ ರಾಜ್ಯ ಸರಕಾರ ಇದೇ ಫೆಬ್ರುವರಿ 28 ರ ಗಡುವು ವಿಧಿಸಿತ್ತು.ಈ ಸಂಬಂಧದ ಸುಗ್ರೀವಾಜ್ಞೆಗೆ
ಸಹಿ ಹಾಕಲು ರಾಜ್ಯಪಾಲರಿಗೆ ಕಳಿಸಿತ್ತು.ಆದರೆ ರಾಜ್ಯಪಾಲ ಥಾವರಚಂದ್ ಗೆಲ್ಹೊಟ್ ಅವರು ಸುಗ್ರೀವಾಜ್ಞೆಗೆ ಸಹಿ ಹಾಕದೇ ಸರಕಾರಕ್ಕೆ ವಾಪಸ್ ಕಳಿಸಿದ್ದಾರೆ!

ರಾಜ್ಯಪಾಲರ ಈ ನಡೆಯು ಕರ್ನಾಟಕ ಹಾಗೂ ಕನ್ನಡಿಗರ ವಿರೋಧಿ ಕ್ರಮವಾಗಿದ್ದು ಈ ನಡೆಯ ಹಿಂದೆ ಕನ್ನಡೇತರ ಉದ್ದಿಮೆದಾರ ಮತ್ತು ವಾಣಿಜ್ಯ ಸಂಸ್ಥೆಗಳು ಇರಬಹುದೆಂಬ ಶಂಕೆ ವ್ಯಕ್ತವಾಗತೊಡಗಿದೆ. ದೇಶದ ಕೆಲವು ಬಿಜೆಪಿ ಯೇತರ ಸರಕಾರವಿರುವ ರಾಜ್ಯಗಳ ರಾಜ್ಯಪಾಲರು ಈಗಾಗಲೇ ಅಲ್ಲಿಯ ಸರಕಾರಗಳೊಂದಿಗೆ ಸಂಘರ್ಷಕ್ಕೆ ಇಳಿದಿದ್ದಾರೆ.ಆ ರಾಜ್ಯಪಾಲರ ದಾರಿಯಲ್ಲಿಯೇ ಗೆಲ್ಹೊಟ್ ಅವರೂ
ಹೊರಟಿದ್ದಾರೆಯೆ?

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ನಡೆಯನ್ನು ಹೇಗೆ ಸ್ವೀಕರಿಸುತ್ತರೆ ಎಂಬುದು ಕುತೂಹಲಕಾರಿ. ರಾಜ್ಯದ ಕನ್ನಡಿಗರಿಗೆ ಅವರು ನೀಡಿದ ಭರವಸೆಯಂತೆ ಫೆಬ್ರುವರಿ 28 ರ
ಗಡುವಿಗೆ ಸರಕಾರ ಬದ್ಧವಿರಲೇ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಗುರುವಾರವೇ ನಡೆಯಬಹುದಾದ ಸಚಿವ ಸಂಪುಟ ದಲ್ಲಿ ರಾಜ್ಯಪಾಲರ ನಡೆಯನ್ನು ವಿರೋಧಿಸಿ ಸುಗ್ರೀವಾಜ್ಞೆಯನ್ನು ,ಸಹಿಗಾಗಿ,ಮತ್ತೊಮ್ಮೆ
ರಾಜಭವನಕ್ಕೆ ಕಳಿಸಲೇ ಬೇಕು.

ರಾಜ್ಯಪಾಲರ ಕನ್ನಡಿಗರ ವಿರೋಧಿ ನಿಲುವನ್ನು ಜವಾಬ್ದಾರಿಯುತ ಪ್ರತಿಪಕ್ಷದ ಸ್ಥಾನದಲ್ಲಿರುವ ಬಿಜೆಪಿ ಯು ಸಹ ಖಂಡಿಸಬೇಕಾಗುತ್ತದೆ.ಅವರ ತಪ್ಪಿನ
ಬಗ್ಗೆ ತಿಳಿಹೇಳಬೇಕಾಗುತ್ತದೆ. ರಾಜ್ಯಪಾಲರು ತಮ್ಮ ತಪ್ಪನ್ನು ತಿದ್ದಿಕೊಂಡು ಸುಗ್ರೀವಾಙ್ಞೆಗೆ ಸಹಿ ಮಾಡಿ
ಕಳಿಸದಿದ್ದರೆ ನಾಡಿನಾದ್ಯಂತದ ಕನ್ನಡ ಸಂಘ ಸಂಸ್ಥೆಗಳು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡುವದು
ಅನಿವಾರ್ಯವಾಗುತ್ತದೆ.

ಅಶೋಕ ಚಂದರಗಿ
ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ