ಏಳನೆಯ ಶತಮಾನದಲ್ಲಿ ಪ್ರವಾದಿ ಮಹ್ಮದರು ಇಸ್ಲಾಂ ಧರ್ಮ ಸ್ಥಾಪಿಸಿದ ನಂತರ ಅದು ಬಹುಬೇಗ ಜಗತ್ತಿನ ಇತರೆಡೆ ವ್ಯಾಪಿಸಿಕೊಳ್ಳತೊಡಗಿತು. ವ್ಯಾಪಾರಕ್ಕೆ ಹೆಸರಾದ ಅರಬ್ಬರು ಒಂಟೆ ಕಾರವಾನ್ ಮೂಲಕ ಭಾರತ , ಚೀನಾ, ಈಜಿಪ್ಟ್ ಸಹಿತ ಹಲವು ರಾಷ್ಟ್ರಗಳಿಗೆ ದಂತ, ಕಾರ್ಪೆಟ್ ಮೊದಲಾದವುಗಳ ವ್ಯಾಪಾರಕ್ಕೆ ಹೋಗುವುದು ನಡೆದೇ ಇತ್ತು. ಅಲ್ಲಿಂದ ಬರುವಾಗ ಅಲ್ಲಿಯ ವಸ್ತುಗಳನ್ನು ಅರಬ್ ನಾಡಿಗೆ ತರುತ್ತಿದ್ದರು. ೧೪ ಶತಮಾನಗಳ ಸಂಬಂಧ ಇದು.
ಇಸ್ಲಾಮಿಕ್ ಪರಂಪರೆ ಸಂಸ್ಕೃತಿ ಮೂಲತ: ಬೆಡೋಯಿನ್ ಬುಡಕಟ್ಟು ಜನಾಂಗಕ್ಕೆ ಸೇರಿದ್ದು. ಜಾನಪದ ಕಲೆ ಸಂಗೀತ ನಾಟಕ ಕಾವ್ಯಗಳ ಈ ಸಂಸ್ಕೃತಿಯನ್ನು ೧೯೩೨ ರ ನಂತರ ಬಂದ ಸೌದಿ ಅರಸು ಮನೆತನದವರು ಸಹ ಸಂರಕ್ಷಿಸಿ ಬೆಳೆಸಿದರು. ಸೌದಿ ಸರಕಾರದ ಸಂಸ್ಕೃತಿ ಮತ್ತು ಮಾಹಿತಿ ಸಚಿವಾಲಯ ಬಹಳ ವ್ಯಾಪಕವಾದ ಕಾರ್ಯ ಯೋಜನೆಗಳನ್ನು ಹೊಂದಿದ್ದು ಅಸಂಖ್ಯಾತ ಸಂಘ ಸಂಸ್ಥೆಗಳು ಕಲೆಸಾಹಿತ್ಯ ಬೆಳೆಸಲು ನೆರವಾಗುತ್ತಿವೆ. ಸೌದಿ ಅರೇಬಿಯಾ ಸೊಸೈಟಿ ಫಾರ್ ಕಲ್ಚರ್ ಆ್ಯಂಡ್ ಆರ್ಟ್ , ಕಿಂಗ್ ಫಹದ್ ಲೈಬ್ರರಿ, ಕಿಂಗ್ ಫೈಸಲ್ ಫೌಂಡೇಶನ್ ಮೊದಲಾದವು ಈ ಕಾರ್ಯ ನಿರ್ವಹಿಸುತ್ತಿವೆ. ರಿಯಾದ್ ಅತಿ ದೊಡ್ಡ ರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನು ಹೊಂದಿದೆ. ಜೆಡ್ಡಾದಲ್ಲಿ ಹ್ಯೂಮನ್ ಹೆರಿಟೇಜ್ ಮ್ಯೂಸಿಯಂ ಅಲ್ಲದೆ ೧೩ ಪ್ರಾಂತಗಳಲ್ಲಿ ವಸ್ತು ಸಂಗ್ರಹಾಲಯಗಳನ್ನು ಹೊಂದಿವೆ. ದಮ್ಮಾಮ್ ಬಳಿಯ ಇತ್ರಾ ಕಲ್ಚರಲ್ ಮ್ಯೂಸಿಯಂ ಬಹಳ ಪ್ರಸಿದ್ಧ.
ಕ್ಯಾಲಿಗ್ರಫಿ ಕಲೆ
*************
ಇದು ಅರಬ್ ನಾಡಿನದೇ ವಿಶಿಷ್ಟ ಕಲೆ. ಇದಕ್ಕೆ ಕುರಾನ್ ಮೂಲವಾಗಿರುವುದರಿಂದ ಇದನ್ನು ಪವಿತ್ರ ಕಲೆ ಎಂದು ಪರಿಗಣಿಸಲಾಗುತ್ತದೆ. ಕುರಾನಿನ ಅಕ್ಷರ ಮತ್ತು ಪದ್ಯಗಳನ್ನು ಕಲಾತ್ಮಕ ವಿನ್ಯಾಸಕ್ಕೊಳಪಡಿಸುವ ಕಲೆ ಇದು. ( ಮಾದರಿ ಚಿತ್ರಗಳನ್ನು ಗಮನಿಸಬಹುದು) . ಅರೇಬಿಕ್ ಭಾಷೆಯ ವರ್ಣಮಾಲೆಯಲ್ಲಿ ೨೮ ಅಕ್ಷರಗಳಿದ್ದು ಬಲದಿಂದ ಎಡಕ್ಕೆ ಬರೆಯಲಾಗುವುದು. ಇದರಲ್ಲಿ ೧೭ ಮುಖ್ಯರೂಪಗಳಿವೆ. ಪ್ರತಿ ಅಕ್ಷರವನ್ನು ನಾಲ್ಕು ರೀತಿಯಲ್ಲಿ ಬರೆಯುವ ಅವಕಾಶಗಳಿವೆ. ಇಸ್ಲಾಮಿಕ್ ಕ್ಯಾಲಿಗ್ರಫಿ ಮತ್ತು ಅರೇಬಿಕ್ ಕ್ಯಾಲಿಗ್ರಫಿಗಳಲ್ಲಿ ವ್ಯತ್ಯಾಸವಿದೆ. ಇದಕ್ಕೆ ಬಳಸಲಾಗುವ ಪೆನ್ನುಗಳು , ಶಾಯಿ , ಕಾಗದ ಎಲ್ಲವೂ ಪ್ರತ್ಯೇಕ . ಈ ಪೆನ್ನಿನ ರೀಡ್ , ಬಿದಿರು ನದಿತಟದಲ್ಲಿ ಬೆಳೆಯಲಾಗುತ್ತದೆ. ೫೦೦ ವರ್ಷ ಬಾಳುವಂತಹವು ಇವೆಯಂತೆ. ಖಮಿಶ್ ಪೆನ್, ರೀಡ್ ಪೆನ್, ಚಾತಾ ಪೆನ್, ಹ್ಯಾಂಡಮ್ ಪೆನ್ , ಸೆಲಿ ಪೆನ್ ಮೊದಲಾದ ಪ್ರಕಾರಗಳ ಪೆನ್ನುಗಳಿವೆ. ಸಣ್ಣ ಸ್ಕ್ರಿಪ್ಟ್ ಬರೆಯುವುದಕ್ಕೆ ಬೇರೆಯೇ. ಶಾಯಿ ಸಹ ಸ್ಪೆಶಲ್ಲೇ. ಜೇನುತುಪ್ಪ, ಕಪ್ಪು ಮಸಿ, ಕೇಸರಿ ಮಿಶ್ರಣಗಳನ್ನೊಳಗೊಂಡಿರುತ್ತದೆ. ಇದಕ್ಕೆ ಬೇಕಾದ ವಿಶೇಷ ಕಾಗದ ಕೈಯಿಂದ ತಯಾರಿಸಲಾಗುತ್ತದೆ. ಮಸೀದೆಗಳ ಒಳ ಗೋಡೆಗಳ ಮೇಲೆ , ಖಾಸಗಿ ಕಚೇರಿ, ಮನೆಗಳ ಒಳಬದಿ ,ಇವನ್ನು ಚಿತ್ರಿಸಲಾಗುತ್ತದೆ. ಕ್ಯಾಲಿಗ್ರಫಿಯಲ್ಲಿ ಕುಫಿಕ್ ಮತ್ತು ನಾಸ್ಕ್ ಎಂಬ ಎರಡು ಜನಪ್ರಿಯ ಶೈಲಿಗಳಿವೆ. ಕಲಾತ್ಮಕತೆ ದೃಷ್ಟಿಯಿಂದ ಅರೇಬಿಕ್ ಕ್ಯಾಲಿಗ್ರಫಿ ವೈವಿಧ್ಯಮಯವಾಗಿದೆ.
ಎಲ್. ಎಸ್. ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ