( ನಾವಿಂದು ಈ ದೇಶದ ಬಗ್ಗೆ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಗಮನಿಸೋಣ)
ಸೌದಿ ಅರೇಬಿಯಾದಲ್ಲಿರುವುದು ಅರಸೊತ್ತಿಗೆಯ ಆಡಳಿತ. ೧೯೩೨ ರಿಂದಲೂ ಇಲ್ಲಿ ಈಗಿನ ಸೌದ್ ಅರಸು ಕುಟುಂಬದವರ ಪ್ರಭುತ್ವ ಇದೆ. ಸರಕಾರವೂ ಅವರದೇ. ಎಲ್ಲ ಉನ್ನತ ಹುದ್ದೆಗಳಲ್ಲಿರುವವರೂ ಅರಸು ಪರಿವಾರದವರೇ. ಈ ಪರಿವಾರದಲ್ಲಿ ಸುಮಾರು ೧೫ ಸಾವಿರ ಸದಸ್ಯರಿದ್ದಾರೆನ್ನಲಾಗುತ್ತಿದ್ದು ಅವರಲ್ಲಿ ಕುಟುಂಬದ ಒಳವಲಯಕ್ಕೆ ಸೇರಿದ ೨ ಸಾವಿರ ಸದಸ್ಯರು ಕುಟುಂಬದ ಎಲ್ಲ ನಿರ್ಧಾರ, ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ.
ಸೌದಿಯ ಈಗಿನ ಅರಸನ ಸಂಪತ್ತು ಲೆಕ್ಕಕ್ಕೆ ಸಿಗದಂತಹದು. ಆದರೂ ಒಂದು ಅಂದಾಜಿನಂತೆ ಆ ಮೊತ್ತ ಸುಮಾರು 1.4 trillion ಡಾಲರುಗಳಷ್ಟು. ಇದು ಬ್ರಿಟಿಷ್ ರಾಜಮನೆತನದ ಸಂಪತ್ತಿಗಿಂತ ಹೆಚ್ಚು. ಅದಕ್ಕೆ ಕಾರಣ ವಿಶ್ವದ ಅತಿದೊಡ್ಡ ಪೆಟ್ರೋಲಿಯಂ ಉತ್ಪಾದಕ , ವಿತರಕ ರಾಷ್ಟ್ರ ಇದು. ಸಂಪತ್ತಿನ ಮುಲವೇ ಅದು.
ಸೌದಿ ಅರೇಬಿಯಾವನ್ನು ಅರಮನೆಗಳ ನಗರ/ ಅರಮನೆಗಳ ದೇಶ ಎಂದು ಕರೆದರೂ ನಡೆಯುತ್ತದೆ. ಅಷ್ಟೊಂದು ಅರಮನೆಗಳಿವೆ. ಈಗ ಕೆಲವನ್ನು ಮ್ಯೂಸಿಯಂ, ಪಂಚತಾರಾ ಹೊಟೆಲುಗಳನ್ನಾಗಿ ಮಾಡಲಾಗಿದೆ. ಈ ದೇಶಕ್ಕೆ ಜಾಗತಿಕ ಮಹತ್ವ ಬರಲು ಇನ್ನೂ ಕೆಲವು ಕಾರಣಗಳಿವೆ.
೧. ಪೆಟ್ರೋಲಿಯಂ ಖಜಾನೆ.
೨. ಇದು ಇಸ್ಲಾಂ ಧರ್ಮ ಹುಟ್ಟಿದ ಮೆಕ್ಕಾ ಮದೀನಾಗಳಿರುವ ದೇಶ. ಜಗತ್ತಿನಾದ್ಯಂತದ ಮುಸ್ಲಿಮರಿಗೆ ಇದು ಯಾತ್ರಾಸ್ಥಳ.
೩. ಇದು ಅತ್ಯಂತ ದೊಡ್ಡ ಒಂಟೆ ಮಾರುಕಟ್ಟೆಯನ್ನು ಹೊಂದಿದ್ದು ರಿಯಾದ್ ನ ಮಾರುಕಟ್ಟೆಯಲ್ಲಿ ದಿನಕ್ಕೆ ಕನಿಷ್ಠ ನೂರು ಒಂಟೆಗಳು ಮಾರಾಟವಾಗುತ್ತವೆ. ಈ ಮಾರುಕಟ್ಟೆ ಸುಮಾರು ಎರಡು ಚದುರು ಮೈಲು ವಿಸ್ತೀರ್ಣವಾಗಿದೆ. ಇಲ್ಲಿ ಒಂಟೆಗಳ ಓಟದ ಸ್ಪರ್ಧೆ ಬಹಳ ಪ್ರಸಿದ್ಧ. ಅದಕ್ಕಾಗಿ ೧೯ ಕಿ. ಮೀ. ಓಟದ ಟ್ರ್ಯಾಕ್ ಇದೆ. ಸುಮಾರು ಎರಡು ಸಾವಿರ ಒಂಟೆಗಳು ಓಟದಲ್ಲಿ ಭಾಗವಹಿಸುತ್ತವೆ..
೪. ಜಗತ್ತಿನ ಅತಿ ದೊಡ್ಡ ಮರಳುಗಾಡು ಇದು. ೬೫೦೦೦೦ ಚದುರು ಕಿ.ಮಿ. ನಷ್ಟು ವಿಸ್ತಾರ. ೨೫೦ ಮೀ. ನಷ್ಟು ಎತ್ತರದ. ಮರಳು ದಿಬ್ಬಗಳೂ ಇವೆ. ನದಿಗಳೇ ಇಲ್ಲದ ದೇಶ ಇದು. ಶೇ. ೯೫ ಭಾಗ ಮರಳು. ( ಆದರೆ ಸಮುದ್ರ ಕರಾವಳಿ ಇದೆ.)
೫. ವಿಶ್ವದ ಅತಿ ದೊಡ್ಡ ಕಿಂಗ್ ಖಾಲಿದ್ ವಿಮಾನ ನಿಲ್ದಾಣ( ದಮ್ಮಮ್) ಇಲ್ಲಿದೆ. ಅದು ೩೦೦ ಚದುರು ಮೈಲು ವಿಸ್ತೀರ್ಣವಾಗಿದ್ದು , ೧೯೨೦೦೦ ಎಕರೆ ಭೂಮಿಯನ್ನು ಹೊಂದಿದೆ. ತಲಾ ಎಂಟು ಏರೋಬ್ರಿಜ್ ಗಳಿದ್ದು , ಪ್ರಯಾಣಿಕರ ೫ ಟರ್ಮಿನಲ್ ಗಳಿವೆ. ಒಮ್ಮೆ ೧೧೬೦೦ ವಾಹನಗಳ ಪಾರ್ಕಿಂಗಿಗೆ ಅವಕಾಶವಿದೆ. ೪೨೬೦ ಮೀಟರುಗಳ ಎರಡು ಸಮಾನಾಂತರ ರನ್ ವೇ ಗಳಿವೆ.
೬. ಜಗತ್ತಿನ ಅತಿ ಎತ್ತರದ ಕಟ್ಟಡವೊಂದು ಇಲ್ಲಿ ನಿರ್ಮಾಣವಾಗುತ್ತಿದ್ದು ಅದು ದುಬೈನ ಬುರ್ಜ ಖಲೀಫಾಕ್ಕಿಂತ ೨೦೦ ಮೀಟರ್ ಹೆಚ್ಚು ಎತ್ತರವಿದೆ. ಜೆಡ್ಡಾದ ಈ ಕಿಂಗಡಮ್ ಸೆಂಟರ್ ೯೮ ಅಡಿ ವ್ಯಾಸದ ಹೊರ ಬಾಲ್ಕನಿ ಹೊಂದಿರುತ್ತದೆ. ೫೯ ಎಲಿವೇಟರುಗಳು, ೧೨ ಎಸ್ಕಲೇಟರುಗಳು , ೫ ಡಬಲ್ ಡೆಕ್ಕರ್ ಎಲಿವೇಟರುಗಳು, ೩ ಸ್ಕೈ ಲಾಬಿ ಮೊದಲಾದ ವೈಶಿಷ್ಟ್ಯಗಳನ್ನು ಹೊಂದಿದೆ.
೭. ಹೊಸ ಯೋಜನೆಯಂತೆ ಇಲ್ಲಿ ೧೭೦ ಕಿ. ಮೀ. ಉದ್ದದ ” ರೇಖಾ ನಗರ” ವೊಂದು ನಿರ್ಮಾಣವಾಗುತ್ತಿದೆ. Line City.
ಈ ದೇಶದ ಲಾಂಛನ ಎರಡು ಖಡ್ಗ ಮತ್ತು ತಾಳೆಮರದ ಚಿತ್ರಗಳಿಂದ ಕೂಡಿದ್ದು ರಾಷ್ಟ್ರೀಯ ಪ್ರಾಣಿ ಒಂಟೆ. ರಾಷ್ಟ್ರೀಯ ಪಕ್ಷಿ ಫಾಲ್ಕನ್. ರಾಷ್ಟ್ರೀಯ ತಿಂಡಿಯ ಹೆಸರು ಕಬ್ಸಾ. ರಾಷ್ಟ್ರೀಯ ನೃತ್ಯ ಅಲ್ ಅರ್ಧಾ – ಕತ್ತಿ ನೃತ್ಯ. ರಾಷ್ಟ್ರೀಯ ಪುಷ್ಪ ಅರ್ಫಾಜ್.
( ಮುಂದಿನ ಭಾಗ : ಅರಸರು/ ಅರಮನೆಗಳು)