ಹಲವು ವೈಭವೋಪೇತ ಅರಮನೆಗಳಿಂದ ತುಂಬಿದ ಸೌದಿ ಅರೇಬಿಯಾದಲ್ಲಿ ಮುಖ್ಯವಾದದ್ದು ಅಲ್ – ಯಮಾಮಾ. ಅಲ್ ಯಮಾಮಾ ಇದು ಒಂದು ಪ್ರದೇಶದ ಹೆಸರು. ‌ರಾಜಧಾನಿ ರಿಯಾಧ್ ನ ವಾಯವ್ಯ ಭಾಗದ ಅಲ್ ಹದಾ ಜಿಲ್ಲೆಯಲ್ಲಿರುವ ಈ ಅರಮನೆ ೧೯೮೮ ರಲ್ಲಿ ನಿರ್ಮಾಣಗೊಂಡಿದ್ದು ಇಟಾಲಿಯನ್ ಅಮೃತಶಿಲೆಯ ಭವ್ಯ ಅರಮನೆ. ೪ ಮಿಲಿಯನ್ ಚದುರು ಅಡಿ ವಿಸ್ತೀರ್ಣದ ಅರಮನೆಯಲ್ಲಿ ಥಿಯೇಟರ್, ಈಜುಗೊಳ, ಮಸೀದೆ ಸಹಿತ ಎಲ್ಲ ಸೌಕರ್ಯಗಲೂ ಇವೆ. ವಿದೇಶೀ ಗಣ್ಯರ ಆತಿಥ್ಯ ಇಲ್ಲಿಯೇ.
ಈಗಿನ ಸೌದಿ ಅರಸನ ನಿವಾಸ ಮತ್ತು ಸೌದಿ ಸರಕಾರದ ಪ್ರಧಾನ ಕಚೇರಿಯೂ ಇದೇ. ರಾಜಮನೆತನಕ್ಕೆ ಸಂಬಂಧಿಸಿದ ಎಲ್ಲ ನಿರ್ಣಯಗಳು, ಸರಕಾರದ ನಿರ್ಣಯಗಳು ರೂಪುಗೊಳ್ಳುವುದು ಇಲ್ಲಿಯೇ. ಸಾಪ್ತಾಹಿಕ ಸರಕಾರಿ ಸಭೆಗಳು ನಡೆಯುವುದು ಇಲ್ಲಿಯೇ. ಅಪಾರ ಸಂಪತ್ತು ಹೊಂದಿದ ಸೌದಿ ರಾಜಮನೆತನದ ಈಗಿನ ರಾಜ ಕಲಾಪ್ರೇಮಿಯೂ ಹೌದು. ಈತ ಅಪೂರ್ವ ಕಲಾಸಂಗ್ರಹವನ್ನೂ ಹೊಂದಿದ್ದಾನೆ. ವಿಶ್ವವಿಖ್ಯಾತ ಲಿಯೋನಾರ್ಡ್ ವಿಂಚಿ, ಪಿಕಾಸೊ , ಚೆಫ್ ಕೂನ್ಸ್, ಮೊದಲಾದವರ ಚಿತ್ರಗಳ ಸಂಗ್ರಹವಿದೆ. ವಿಂಚಿಯ ಒಂದು ಚಿತ್ರವನ್ನು ಹರಾಜಿನಲ್ಲಿ ಅರಸ ೪೫೦ ಮಿಲಿಯನ್ ಡಾಲರಿಗೆ ಖರೀದಿಸಿದ್ದುಂಟು. ಬೆಲೆ ಬಾಳುವ ಕಾರುಗಳ ಸಂಗ್ರಹವಂತೂ ಬಹಳ ದೊಡ್ಡದು. ಸ್ವಂತ ಹಡಗು, ವಿಮಾನಗಳಂತೂ ಇದ್ದೇಇವೆ.
ಮುರಬ್ಬಾ ಅರಮನೆ
*****************
ಇದು ಐತಿಹಾಸಿಕ ಮಹತ್ವದ ಹಳೆಯ ಅರಮನೆ. ಈಗ ಮ್ಯೂಸಿಯಂ ಮಾಡಲಾಗಿದೆ. ಸಾಂಪ್ರದಾಯಿಕ ಅರಬ್ ವಾಸ್ತುಶಿಲ್ಪದ ೪೦೦+೪೦೦ ಮೀಟರ್ ಅಳತೆಯ ಅರಮನೆಯಲ್ಲಿ ೯ ದ್ವಾರ, ೩೨ ಕೋಣೆಗಳಿವೆ.
ಅಲ್- ಹಮ್ರಾ ಅರಮನೆ
*********************
ಇದಕ್ಕೆ ರೆಡ್ ಪ್ಯಾಲೇಸ್ ಎಂದೂ ಹೇಳುತ್ತಾರೆ. ಇದು ಹಳೆಯ ಬ್ರಿಟಿಷ್ ಮಾದರಿಯ ಕಾಂಕ್ರೀಟ್ ನಿರ್ಮಾಣ. ಈಗ ಐಷಾರಾಮಿ ಹೊಟೆಲ್ ಆಗಿದೆ.
ಇವಲ್ಲದೆ ಕ್ರೌನ್ ಪ್ಲಾಜಾ ರಿಯಾದ್ ಅರಮನೆ ಸಹ ವಿಲಾಸಿ ಹೊಟೆಲ್ ಆಗಿದ್ದು ಇದು ೧೧ ಅಂತಸ್ತು ಹೊಂದಿದೆ. ಅಲ್ ಹುಕ್ ಅರಮನೆ ಜನಪ್ರಿಯ ಸಾಂಸ್ಕೃತಿಕ ಪರಂಪರೆಯ ಹೆಗ್ಗುರುತೆನಿಸಿದೆ.
ಇಂತಹ ಅಸಂಖ್ಯಾತ ಅರಮನೆಗಳಿಂದ ಕೂಡಿದ ಸೌದಿ ಅರೇಬಿಯಾದ ಬಹಳಷ್ಟು ಅರಮನೆಗಳು ಲಗ್ಝುರಿ ಹೊಟೆಲ್ ಅಥವಾ ಮ್ಯೂಸಿಯಂ ಸೌಕರ್ಯಗಳಾಗಿವೆ. ಅರಸನ ನಿಕಟ ಪರಿವಾರದಲ್ಲೇ ಎರಡು ಸಾವಿರದಷ್ಟು ಸದಸ್ಯರಿದ್ದಾರೆ. ನೂರಾರು ರಾಜಕುಮಾರರು, ರಾಣಿಯರು, ಅವರ ಮಕ್ಕಳು, ಹತ್ತಿರದ ಸಂಬಂಧಿ ಗಳು ಇವರೆಲ್ಲ ಸರಕಾರದ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಸಚಿವರಾಗಿದ್ದಾರೆ. ರಾಜಪ್ರಭುತ್ವವಾಗಿರುವುದರಿಂದ ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ.