ಸೌದಿ ಅರಸು ಮನೆತನದ ಮೂಲ 1727 ರಷ್ಟು ಹಿಂದಕ್ಕೆ ಹೋಗುತ್ತದಾದರೂ ಎರಡು ಸಲ ಅಧಿಕಾರ ಕಳೆದುಕೊಂಡು ೧೯೩೨ ರಲ್ಲಿ ಮತ್ತೆ ಅಧಿಕಾರ ಭದ್ರ ಪಡಿಸಿಕೊಂಡ ನಂತರ ದೇಶವನ್ನು ಪೂರ್ತಿ ತನ್ನ ವಶದಲ್ಲಿರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲ ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಂಡಿದೆ. ನೂರಾರು ಪತ್ನಿಯರು, ಸಾವಿರಾರು ರಾಜಕುಮಾರರು , ಮಕ್ಕಳು ಮರಿಮಕ್ಕಳು, ಅವರ ಬಳಗದವರು ಸೇರಿ ಸುಮಾರು ೧೫-೨೦ ಸಾವಿರ ಸದಸ್ಯರಿಂದ ಕೂಡಿದ ಸೌದ್ ರಾಜಪರಿವಾರ ಆಡಳಿತದಲ್ಲಿ ವ್ಯಾಪಕವಾದ ತನ್ನ ಕಬಂಧ ಬಾಹುವನ್ನು ಚಾಚಿಕೊಂಡಿದೆ. ಒಳಜಗಳ, ಈರ್ಷ್ಯೆ, ಮೇಲಾಟ , ಎಲ್ಲ ಇದ್ದೇಇವೆ. ಆದರೆ ಅವನ್ನೆಲ್ಲ ಅಲ್ಲಿಂದಲ್ಲೇ ಹತ್ತಿಕ್ಕಲಾಗುತ್ತಿದೆ. ವಿರೋಧಿಗಳು ಸದ್ದಿಲ್ಲದೇ ಮಾಯವಾಗುವುದೂ ಉಂಟು.
೨೦೨೦ ರಲ್ಲಿ ಸೌದಿಯ ಬುದ್ಧಿಜೀವಿಗಳು ಆಡಳಿತದ ವಿರುದ್ಧ ಒಂದು ರಾಜಕೀಯ ಪಕ್ಷ ಕಟ್ಟಲು ಪ್ರಯತ್ನಿಸಿದ್ದೂ ಉಂಟು. ನ್ಯಾಶನಲ್ ಅಸೆಂಬ್ಲಿ ಪಾರ್ಟಿ ಎಂಬ ಹೆಸರಲ್ಲಿ ಪ್ರತಿಪಕ್ಷ ರಚನೆ ಆಗಿತ್ತು. ಅವರನ್ನೆಲ್ಲ ಗಡೀಪಾರು ಮಾಡಲಾಯಿತು. ಕೆಲವರು ಲಂಡನ್ನಿನಿಂದಲೆ ಆನ್ ಲೈನ್ ಮೇಲೆ ಪಕ್ಷದ ಉದ್ಘಾಟನೆ ಮಾಡಲಾಯಿತು. ಆದರೆ ಅದು ಈಗಿನ ಆಡಳಿತದ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ.
ಸೌದ್ ಕಿಂಗ್-೨ (೧೯೫೩-೬೪) , ಕಿಂಗ್ ಫೈಸಲ್( (೬೪-೭೫) , ಕಿಂಗ್ ಖಾಲಿದ್(೭೫-೮೨) , ಕಿಂಗ್ ಫಹದ್ ( 82-2005) , ಕಿಂಗ್ ಅಬ್ದುಲ್ಲಾ ( 2005-15), ಮೊಹ್ಮದ್ ಬಿನ್ ಸಲ್ಮಾನ್ (2017 ರಿಂದ ಕ್ರೌನ್ ಪ್ರಿನ್ಸ್, ೨೦೨೨ ರಿಂದ ಪ್ರಧಾನಿ) ಇದು ರಾಜಮನೆತನ ನಡೆದುಬಂದ ಹಾದಿ. ಈಗಿನ ಆಡಳಿತಗಾರ ಮೊಹ್ಮದ್ ಕಾನೂನು ಪದವೀಧರರಾಗಿದ್ದು ತಮ್ಮ ತಂದೆಯ ಕೆಳಗೆ ಕೆಲಸ ಮಾಡಿ ಅನುಭವ ಪಡೆದವರು. ರಕ್ಷಣಾ ಸಚಿವರು ಅಗಿದ್ದರು. ಅವರಿಗೀಗ ೩೮ ವರ್ಷ. ಅವರ ಕೈಗೆ ಅಧಿಕಾರ ಸಿಕ್ಕ ನಂತರ ಸೌದಿ ಅರೇಬಿಯಾದಲ್ಲಿ ಹಂತಹಂತವಾಗಿ ಸುಧಾರಣಾ ಪರ್ವ ಆರಂಭವಾಗಿದೆ. ಮಹಿಳೆಯರ ಮೇಲಿನ ಬಹಳಷ್ಟು ನಿರ್ಬಂಧಗಳು ತೆರವಾದವು. ಶಿಕ್ಷಣ, ಉದ್ಯಮ ಮತ್ತು ವೈಜ್ಞಾನಿಕ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಲಾಯಿತು.
ಈ ಮೊದಲು ೨೦೦೫ ರಲ್ಲಿ ಉನ್ನತ ಶಿಕ್ಷಣ ಪಡೆಯಲು ಸೌದಿಯ ಯುವಕ ಯುವತಿಯರಿಗೆ ಶೈಕ್ಷಣಿಕ ಸ್ಕಾಲರ್ಶಿಪ್ ನೀಡಿ ಬೇರೆ ದೇಶಗಳಿಗೆ ಕಳಿಸುವ ಯೋಜನೆ ರೂಪಿಸಲಾಯಿತು. ಆ ಪ್ರಕಾರ ಸುಮಾರು ೭೦ ಸಾವಿರ ಯುವಸೌದಿಗಳು ೨೫ ಕ್ಕೂ ಹೆಚ್ಚು ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆನ್ನುವುದು ಗಮನಾರ್ಹ.
ಸೌದಿಯಲ್ಲಿ ಮುಸ್ಲಿಂ ಮಹಿಳೆಯರಿಗೆ ಯಾವ ಸ್ವಾತಂತ್ರ್ಯವೂ ಇಲ್ಲ ಎನ್ನುವ ಭಾವನೆ ಬೇರೆಡೆ ಇದ್ದರೂ ಸಹ ಅಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆದ ಮಹಿಳೆಯರು ಹಲವು ಉನ್ನತ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಹಲವು ರಾಜಕುಮಾರಿಯರೂ ಸೇರಿದ್ದಾರೆ. ರಾಜಕುಮಾರಿ ರೀಮಾ ಬಿಂಟ್ ಬಂದರ್ ಅಲ್ ಸೌದ್ ಅವರು ಯು.ಎಸ್. ಮೊದಲ ಸೌದಿ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ನೂರಾ ಬಿಂತ್ ಮೊಹ್ಮದ ಅಲ್ ಸೌದ್ ಪದವೀಧರೆ ಮತ್ತು ಬಹಳ ದೊಡ್ಡ ಉದ್ಯಮಿಯಾಗಿ ಹೆಸರು ಗಳಿಸಿದ್ದಾರೆ. ಹಸ್ಸಾ ಬಿಂತ್ಸಲ್ಮಾನ್ ಕಾನೂನು ಮತ್ತು ರಾಜಕೀಯ ಉಪನ್ಯಾಸಕಿಯಾಗಿದ್ದಾರೆ. ಈಚೆಗಂತೂ ಹಲವು ಕ್ಷೇತ್ರಗಳಿಗೆ ಅವರ ಕಾರ್ಯವ್ಯಾಪ್ತಿ ಹರಡಿಕೊಂಡಿದೆ. ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಮಹತ್ವವನ್ನು ಈಗಿನ ದೊರೆ ಗುರುತಿಸಿ ಪ್ರೋತ್ಸಾಹಿಸುತ್ತಿದ್ದಾರೆ.
ಎಲ್. ಎಸ್. ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ