ಜಗತ್ತಿನ ಅತಿ ದೊಡ್ಡ ಮರಳುಗಾಡು ಹೊಂದಿರುವ ಅರಬ್ ಪ್ರದೇಶದ ವೈಶಿಷ್ಟ್ಯಗಳೇ ಬೇರೆ. ಅಲ್ಲಿಯ ಪಶುಪಕ್ಷಿ ಸಸ್ಯಗಳ ಸ್ವರೂಪ ಉಳಿದ ಭಾಗಗಳಿಗಿಂತ ಭಿನ್ನವಾದುದು. ಆದರೆ ಈ ವ್ಯಾಪಕ ಮರುಭೂಮಿಯ ಬಹುಭಾಗ ಮರಳಿನಿಂದ ತುಂಬಿದ್ದರೂ ಅಲ್ಲಿ ಕೆಲವು ಭಾಗಗಳಲ್ಲಿ ಪರ್ವತ ಶ್ರೇಣಿ, ಹುಲ್ಲುಗಾವಲು, ಬೆಟ್ಟಗಳು, ವಾಡಿಗಳು, ಜ್ವಾಲಾಮುಖಿ, ಓಯಾಸಿಸ್ , ಅರಣ್ಯ ಎಲ್ಲವನ್ನೂ ಕಾಣಬಹುದು. ಸುಮಾರು ೧೩೦೦ ದ್ವೀಪಗಳಿಂದ , ೧೬೪೦ ಮೈಲುದ್ದದ ಕರಾವಳಿಗಳಿಂದ ಕೂಡಿದ ಅರೇಬಿಯನ್ ದೇಶಗಳಲ್ಲಿ ಅವುಗಳದೇ ಆದ ಪ್ರತ್ಯೇಕ ಜೀವಜಗತ್ತನ್ನೂ ಕಾಣಬಹುದಾಗಿದೆ. ಗಲ್ಫ್ ಆಫ್ ಅರಾಬಾ, ಕೆಂಪು ಸಮುದ್ರ, ಸರವತ್ / ಸರತ್ ಪರ್ವತ ಶ್ರೇಣಿ, ಅಸಿರ್ ಪರ್ವತ ಶ್ರೇಣಿ, ಸೌದಾ ಪರ್ವತಗಳು ಅಲ್ಪ‌ಮಳೆ, ಹಸಿರು ಸಸ್ಯವರ್ಗಗಳಿಂದ ಕೂಡಿವೆ. ಪ್ರದೇಶದ ಪರಿಸರಕ್ಕೆ ತಕ್ಕಂತೆ ಬೇರೆಲ್ಲೂ ಕಾಣಸಿಗದ ಹಲವು ಅಪರೂಪದ ಪಕ್ಷಿ ಪ್ರಾಣಿ ಸಸ್ಯ ಪ್ರಭೇದಗಳನ್ನೂ ಒಳಗೊಂಡಿದೆ.
ಬೆಕ್ಕಿನ ಕುಟುಂಬದ ಮರಳು ಬೆಕ್ಕುಗಳು ಸೌದಿಯ ಪಶ್ಚಿಮ ಪ್ರದೇಶದಲ್ಲಿ ಕಾಣಸಿಗುತ್ತಿದ್ದು ನೆಲದ ಬಿಸಿಯಿಂದ ರಕ್ಷಿಸಲು ಅದರ ಪಂಜುಗಳು ದಪ್ಪ ಕೂದಲಿನಿಂದ ಮುಚ್ಚಿರುತ್ತವೆ. ನಜ್ದ್ ತಬೂಕ್ ಪ್ರದೇಶದಲ್ಲಿ ಅರೇಬಿಯನ್ ತೋಳಗಳು ಇದ್ದರೂ ಅವು ಅಳಿವಿನಂಚಿನಲ್ಲಿವೆಯೆನ್ನಲಾಗಿದೆ. ೨-೩ ಸಾವಿರವಷ್ಟೇ ಉಳಿದುಕೊಂಡಿವೆ. ಸ್ಯಾಂಡ್ ಗ್ರೌಸ್, ಬಜಾರ್ಡ್, ಕ್ಷಿಲ್, ಲಾರ್ಕ್ ಹದ್ದುಗಳು, ಗ್ರಿಫನ್, ಪೆರ್ರಿಯಾಕ್ಸ್ ರಣಹದ್ದುಗಳು, ಮ್ಯಾಕ್ ಕ್ವೀನ್ ಬಸ್ಟರ್ಡ್, ಹಿಜಾಜ್ ಪರ್ವತ ಪ್ರದೇಶದ ಬಬೂನ್ ಮಂಗಗಳು, ಅಸಿರ್ ಪರ್ವತ ಪ್ರದೇಶದ ಅರೆಬಿಯನ್ ಚಿರತೆ, ಪಶ್ಚಿಮ ಮರುಭೂಮಿಯ ಮರಳುಬೆಕ್ಕು, ಮೊದಲಾದ ೨೩೬ ಬಗೆಯ ಪ್ರಾಣಿಗಳನ್ನು ಗುರುತಿಸಲಾಗಿದೆ. ಮರುಭೂಮಿಯ ಹಾವುಗಳು ತುಂಬ ವಿಷಕಾರಿಯಾಗಿರುತ್ತವೆ. ವೈಪರ್, ಕೊಂಬಿನ ವೈಪರ್, ಗರಗಸದ ವೈಪರ್, ಕಾರ್ಪೆಟ್ ವೈಪರ್, ಆಡ್ಡರ್, ಸುಳ್ಳುಕೊಂಬಿನ ವೈಪರ್ ಮೊದಲಾದ ವಿಷಸರ್ಪಗಳು ವಿಶೇಷವಾಗಿ ಕಂಡುಬರುತ್ತವೆ. ಮರಳಿನ ಹಳದಿ ಬಣ್ಣವನ್ನೇ ಹೊಂದಿರುವ ಕೆಲ ಹಾವುಗಳು ತುಂಬ ಅಪಾಯಕಾರಿಯೂ ಆಗಿವೆ. ಅವು ಒಂದು ಬಗೆಯ ವಿಶಿಷ್ಟ ಶಬ್ದವನ್ನೂ ಮಾಡುವುದರಿಂದ ಮನುಷ್ಯರು ಅದನ್ನು ಗಮನಿಸಿ ದೂರ ಹೋಗಿ ರಕ್ಷಣೆ ಪಡೆಯಬೇಕಾಗುತ್ತದೆ.
ಜಬಲ್ ಅಜಾ ಪರ್ವತ ಪ್ರದೇಶ ಸಸ್ಯ ವರ್ಗಕ್ಕೆ ಹೆಸರಾಗಿದೆ. ಜಗತ್ತಿನ ಅತಿ ವಿಶಾಲ ಮರುಭೂಮಿಯೆನಿಸಿದ ರಬ್ ಅಲ್ ಖಲಿಯಲ್ಲಿ ೩೭ ಬಗೆಯ ಹೂ ಬಿಡುವ ಸಸ್ಯಗಳು ಇದ್ದು ಅವುಗಳಲ್ಲಿ ೧೭ ಪ್ರಕಾರಗಳು ಕೇವಲ ಮರುಭುಮಿಯಲ್ಲಿ ಮಾತ್ರ ಕಂಡುಬರುವಂತಹವು. ಅಲ್ಲಿ ದೊಡ್ಡ ಆಕಾರದ ಮರಗಳು ಕಾಣುವುದಿಲ್ಲ. ಕುರುಚಲು ಪೊದೆಗಳು ಜಾಸ್ತಿ. ಅರೇಬಿಯನ್ ಚಿರತೆ , ತೋಳಗಳು ಅಳಿವಿನಂಚಿಗೆ ಸಾಗಿವೆ. ೮ ಜಾತಿಯ ಕರಡಿಗಳು, ೧೭೫೦೦ ಬಗೆಯ ಚಿಟ್ಟೆಗಳು, ೩೫೦೦೦೦ ಬಗೆಯ ಜೀರುಂಡೆಗಳು, ೧೭೬೮ ಜಾತಿಯ ಬಾರ್ಜ್ ಮೀನುಗಳು, ೩೫೦೦ ಜಾತಿಯ ಸಸ್ಯಗಳು ಮೊದಲಾದವುಗಳನ್ನೂ ಈ ಮರಳುಗಾಡಿನಲ್ಲಿ ಗುರುತಿಸಲಾಗಿದೆ.
ಅಸಿರ್ ಪರ್ವತ ಪ್ರದೇಶದಲ್ಲಿ ೫೦ ಸೆಂ. ಮೀ. ನಷ್ಟು ಮಳೆಯಾಗುತ್ತಿದ್ದರೆ ರಬ್ ಅಲ್ ಖಲಿ ಮರುಭೂಮಿಯಲ್ಲಿ ಹತ್ತು ವರ್ಷ ಮಳೆ ಬೀಳದಿರುವುದೂ ಇದೆ. ಒಟ್ಟಾರೆ ಅರೇಬಿಯನ್ ಮರುಭೂಮಿ ಈ ವಿಷಯದಲ್ಲೂ ತನ್ನ ವೈಶಿಷ್ಟ್ಯವನ್ನು ಕಾದುಕೊಂಡಿದ್ದು ಹಲವು ಕುತೂಹಲದ ಸಂಗತಿಗಳಿಂದೊಡಗೂಡಿದೆ. ನಾವು ಬೇರೆ ಕಡೆಗೆ ನೋಡಲಾಗದ ಹಲವು ಪಶು ಪಕ್ಷಿ ಸಸ್ಯಜಾತಿಗಳನ್ನು ಇಲ್ಲಿ ನೋಡಬಹುದಾಗಿದೆ.