ಹೊನ್ನಾವರ : ಶಕ್ತಿ ಯೋಜನೆ ಅವಾಂತರವಿದು. ಬಸ್ ನಿಲ್ಲಿಸುವಂತೆ ನಿರ್ವಾಹಕ ಹಾಗೂ ಯುವತಿ ನಡುವೆ ಉಂಟಾದ ವಾದ-ಪ್ರತಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿ ಬುಧವಾರ ದೂರು ಹಾಗೂ ಪ್ರತಿ ದೂರು ದಾಖಲಾಗಿದೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ಡಿಪೋ ಸೇರಿದ ಹಿರೇಕೆರೂರು- ಭಟ್ಕಳ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಸಿದ್ದಾಪುರದಿಂದ ಪುತ್ತೂರಿಗೆ ಪ್ರಯಾಣಿಸಲು ಹೊನ್ನಾವರಕ್ಕೆ ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ಪಡೆದಿದ್ದರು. ಮಾವಿನಗುಂಡಿ ಸಮೀಪ ಬಸ್ ಆಗಮಿಸುವಾಗ ಬಸ್ಸಿನಲ್ಲಿ ಸೀಟ್ ಇರದ ಕಾರಣ ಹಿಂಬದಿ ಬರುತ್ತಿದ್ದ ಧರ್ಮಸ್ಥಳ ಬಸ್ ಗಮನಿಸಿ ನಿರ್ವಾಹಕರ ಬಳಿ ನಾನು ಬಸ್ಸಿನಿಂದ ಇಳಿಯುತ್ತೇನೆ ಎಂದು ಹೇಳಿದ್ದಾರೆ. ಆಗ ನಿರ್ವಾಹಕ ಹೊನ್ನಾವರ ಟಿಕೆಟ್ ಪಡೆದಿದ್ದೀರಿ ಇಲ್ಲಿ ಇಳಿಯಲು ಸಾಧ್ಯವಿಲ್ಲ ಎಂದು ಹೇಳಿ ಟಿಕೆಟ್ ಹಾಗೂ ಆಧಾರ ಕಾರ್ಡ್ ಪಡೆದಿದ್ದಾರೆ. ಈ ವೇಳೆ ನನಗೆ ನಿಂದಿಸಿದ್ದಾರೆ. ಮುಂದಿನ ನಿರ್ಜನ ಪ್ರದೇಶದ ನೆಟ್ವರ್ಕ್ ಇಲ್ಲದ ಸ್ಥಳದಲ್ಲಿ ಇಳಿಸಿ ಹೋಗಿದ್ದಾರೆ ಎಂದು ಯುವತಿ ದೂರು ನೀಡಿದ್ದಾರೆ.

ಈ ಸಂಬಂಧ ನಿರ್ವಾಹಕ ಪ್ರತಿದೂರು ನೀಡಿದ್ದು, ಯುವತಿ ಬಸ್ ಇಳಿಯುತ್ತೇನೆ ಎಂದು ಹೇಳಿದಾಗ ಶಕ್ತಿ ಯೋಜನೆ ನಿಯಮ ಹೇಳಿದರೂ ಕೇಳದೆ ಮುಂದಿನ ನಿಲುಗಡೆಯಲ್ಲಿ ಇಳಿದಿದ್ದಾರೆ. ನಂತರ ಯುವತಿ ತಂದೆಯೊಂದಿಗೆ ಕಾರಿನಲ್ಲಿ ಆಗಮಿಸಿ ಬಸ್ ಅಡ್ಡಗಟ್ಟಿದ್ದಾರೆ. ನನ್ನನ್ನು ನಿಂದಿಸಿ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಎರಡೂ ಪ್ರಕರಣ ದಾಖಲಿಸಿಕೊಂಡ ಹೊನ್ನಾವರ ಪೊಲಿಸರು ತನಿಖೆ ಮುಂದುವರೆಸಿದ್ದಾರೆ.