ಬೆಂಗಳೂರು : ಜೈ ಶ್ರೀರಾಮ ಘೋಷಣೆ ಕೂಗಿದ್ದಕ್ಕೆ ಹಲ್ಲೆ ನಡೆಸಿದ ಆರೋಪಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಈಶಾನ್ಯ ವಿಭಾಗ ಡಿಸಿಪಿ ಅವರು, ಘಟನೆಗೆ ಸಂಬಂಧಪಟ್ಟಂತೆ ನಾಲ್ವರನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ಕೂಡ ಮಾಡಲಾಗಿದೆ. ಘಟನೆಯಲ್ಲಿ ನಾಲ್ವರು ಭಾಗಿಯಾಗಿರುವುದು ಗೊತ್ತಾಗಿದೆ. ನಾಲ್ವರಲ್ಲಿ ಇಬ್ಬರು ಅಪ್ರಾಪ್ತರಿದ್ದಾರೆ. ಪ್ರಮುಖ ಆರೋಪಿ ಫರ್ಮಾನ್ ಎಂದು ಅವರು ತಿಳಿಸಿದ್ದಾರೆ.

ಇದರಲ್ಲಿ ಮತ್ತೆ ಯಾರಾದರೂ ಭಾಗಿಯಾಗಿದ್ದಾರಾ ಎಂದು ಪರಿಶೀಲಿಸಲಾಗುತ್ತಿದೆ. ಆರೋಪಿಗಳು ಹೋಗುತ್ತಿರಬೇಕಾದರೆ ಕಾರನ್ನ ಗಮನಿಸಿದ್ದಾರೆ. ಕಾರಲ್ಲಿ ಬಾವುಟ ಹಿಡಿದು ಹೋಗ್ತಿರೋದು ನೋಡಿ ವಾಪಸ್‌ ಬಂದಿದ್ದಾರೆ. ಕಾರನ್ನು ಅಡ್ಡ ಹಾಕಿ ಗಲಾಟೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ವಿದ್ಯಾರಣ್ಯಪುರ ಪೊಲೀಸರಿಂದ ಈ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ.

ಪ್ರತಿಭಟನೆ ಆರಂಭ; ವಿಚಾರಣೆ ವೇಳೆ ಆರೋಪಿಗಳು ಹೇಳಿದ ಸಂಗತಿ :

ಇಂದು ಪ್ರಕರಣ ವಿರೋಧಿಸಿ ವಿದ್ಯಾರಣ್ಯಪುರ ಪೊಲೀಸ್‌ ಸ್ಟೇಶನ್‌ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದು, ಸ್ಥಳದಲ್ಲಿ ಜಮಾಯಿಸುತ್ತಿದ್ದಾರೆ. ಬಿಗಿ ಭದ್ರತೆ ಹಾಕಲಾಗಿದೆ.

ಯುವಕರ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಬಂಧಿತರು ಯಾರೂ ಗಾಂಜಾ ಸೇವನೆ ಮಾಡಿಲ್ಲ, ಆದರೆ ಆಲ್ಕೋಹಾಲ್‌ ಸೇವಿಸಿರುವುದು ದೃಢಪಟ್ಟಿದೆ. ಟ್ರಾಫಿಕ್ ಜಾಂ ಆದ ಹಿನ್ನೆಲೆಯಲ್ಲಿ ಟ್ರಾಫಿಕ್ ಸಿಗ್ನಲ್‌ಗಾಗಿ ಆರೋಪಿಗಳು ಕಾಯುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಹಿಂದೂ ಯುವಕರು ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ʼಜೈ ಶ್ರೀರಾಂʼ ಘೋಷಣೆ ಕೂಗಿದ್ದರು. ಈ ವೇಳೆ ಕ್ಯಾತೆ ತೆಗೆದ ಆರೋಪಿಗಳು, ಜೈಶ್ರೀರಾಂ ಕೂಗಬೇಡಿ, ಅಲ್ಲಾಹು ಅಕ್ಬರ್‌ ಮಾತ್ರ ಎಂದು ಹಲ್ಲೆ ನಡೆಸಿದ್ದರು.

“ಹಲ್ಲೆ ಮಾಡೋದು ನಮ್ಮ ಉದ್ದೇಶ ಆಗಿರಲಿಲ್ಲ. ಜೊತೆಗೆ ಯಾವುದೇ ಪ್ರೀ ಪ್ಲಾನ್ ಕೂಡ ಇರಲಿಲ್ಲ. ನಿನ್ನೆ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ನಾಲ್ಕು ಜನರು ಎರಡು ಬೈಕ್‌ಗಳಲ್ಲಿ ಬರುತ್ತಿದ್ದೆವು. ಎಂಎಸ್ ಪಾಳ್ಯ ಮುಖ್ಯರಸ್ತೆಯಲ್ಲಿ ಬರುವಾಗ ಟ್ರಾಫಿಕ್ ಜಾಮ್ ಆಯ್ತು. ಈ ವೇಳೆ ಕಾರಿನಲ್ಲಿ ಮೂರು‌ ನಾಲ್ಕು ಯುವಕರು ಬಂದು ನಮ್ಮ ಬೈಕ್‌ ಪಕ್ಕ ನಿಲ್ಲಿಸಿದ್ರು. ಕಾರಿನ ಗ್ಲಾಸ್ ಓಪನ್ ಮಾಡಿ ನಮ್ಮ ಕಡೆ ತಿರುಗಿ ಜೈ ಶ್ರೀರಾಮ್ ಅಂತ ಜೋರಾಗಿ ಕಿರುಚಿದರು. ಜೊತೆಗೆ ನಮಗೂ ಜೈ ಶ್ರೀರಾಮ್ ಅಂತ ಕೂಗಿ ಅಂದರು. ಅದಕ್ಕೆ ನಾವು, ನೀವೇ ಅಲ್ಲಾ ಹೋ ಅಕ್ಬರ್ ಅಂತ ಕೂಗಿ ಅಂತ ಹೇಳಿದೆವು. ಅದಕ್ಕೆ ನಾವು ಯಾಕೆ ಕೂಗಬೇಕು ಅಂತ ಮಾತಿಗೆ ಮಾತು ಬೆಳೆದು ಸ್ವಲ್ಪ ಹೊಡೆದಾಟ ಆಯ್ತು ಅಷ್ಟೇ. ಯಾವುದೇ ಬೇರೆ ಉದ್ದೇಶ ಇರಲಿಲ್ಲ” ಎಂದು ಆರೋಪಿಗಳು ಪೊಲೀಸ್‌ ವಿಚಾರಣೆ ವೇಳೆ ಹೇಳಿದ್ದಾರೆ.

ಆರೋಪಿಗಳ ಹಿನ್ನೆಲೆಯನ್ನೂ ಪೊಲೀಸರು ಆಮೂಲಾಗ್ರವಾಗಿ ವಿಚಾರಿಸಿದ್ದು, ಯಾವುದೇ ಹಳೇಯ ಕೇಸ್‌ನಲ್ಲಿ ಇರುವುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಮೆಡಿಕಲ್ ಟೆಸ್ಟ್‌ ಮಾಡಿಸಲಾಗಿದ್ದು, ಗಾಂಜಾ ಸೇವನೆ ಬಗ್ಗೆ ಯಾವುದೇ ಮಾಹಿತಿ ದೃಡಪಟ್ಟಿಲ್ಲ. ಬದಲಾಗಿ ಆಲ್ಕೋಹಾಲ್ ಸೇವಿಸಿರುವುದು ಬಯಲಾಗಿದೆ. ಸದ್ಯ ಆರೋಪಿಗಳ ವಿಚಾರಣೆ ಮುಂದುವರಿದಿದೆ.