ಬೆಳಗಾವಿ :
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ದ್ವೇಷದ, ಅಲ್ಪಸಂಖ್ಯಾತರ ವಿರುದ್ಧ
ದ ರಾಜಕಾರಣ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಅವರು ಇಂದು ತೆಲಂಗಾಣ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ತೆರಳುವ ಮುನ್ನ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಹಾಶಿಮ್ ಪೀರಾ ದರ್ಗಾದ ಧರ್ಮಾಧಿಕಾರಿ ಸೈಯ್ಯದ್ ಮೊಹಮ್ಮದ್ ತನ್ವೀರ್ ಹಾಶ್ಮೀ ಮೌಲ್ವಿ ಜೊತೆಗೆ ವೇದಿಕೆ ಹಂಚಿಕೊಂಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಮಾತನಾಡಿ ಹಾಶ್ಮೀ ಅವರೊಂದಿಗೆ ಬಹಳ ವರ್ಷಗಳಿಂದ ಸಂಬಂಧ ಇದೆ. ಅವರು ಚುನಾವಣೆ ಗೆಲ್ಲಲು ಈ ರೀತಿ ಮಾಡಬಾರದು. ಯತ್ನಾಳ್ ಮಹಾ ಸುಳ್ಳುಗಾರ. ಹಾಶ್ಮೀ ಅವರ ಮೇಲಿನ ಆರೋಪ ಸಾಬೀತು ಮಾಡಲಿ. ಅವರದ್ದೇ ಸರ್ಕಾರ 10 ವರ್ಷಗಳಿಂದ ಇದೆ. ಇಷ್ಟು ವರ್ಷ ಏನು ಮಾಡುತ್ತಿದ್ದರು. ಬರೀ ಆರೋಪ ಮಾಡುವುದಲ್ಲ ಅದನ್ನು ಸಾಬೀತು ಮಾಡಲಿ ಎಂದರು.
ವಿರೋಧ ಪಕ್ಷದ ನಾಯಕನ ಸ್ಥಾನ ಹಾಗೂ ಪಕ್ಷದ ಅಧ್ಯಕ್ಷರ ಸ್ಥಾನ ಕ್ಕೆ ಪ್ರಯತ್ನಿಸಿದ್ದರು. ಎರಡೂ ಸಿಕ್ಕದ ಕಾರಣ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
*ದಕ್ಷಿಣ ಭಾರತದಲ್ಲಿ ಬಿಜೆಪಿ ಇಲ್ಲ*
ದಕ್ಷಿಣ ಭಾರತದಲ್ಲಿ ಬಿಜೆಪಿ ವಿಸ್ತರಣೆಯಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ ದಕ್ಷಿಣ ಭಾರತದಲ್ಲಿ ಬಿಜೆಪಿ ವಿಸ್ತರಣೆ ಇರಲಿ, ಅದು ಇಲ್ಲವೇ ಇಲ್ಲ ಎಂದರು.
*ಎಸ್.ಸಿ.ಎಸ್.ಪಿ/ ಟಿ. ಎಸ್.ಪಿ ಅನುದಾನ ಕಡಿಮೆ ಯಾ ಕಾಯಿತು*
ಗೋವಿಂದ ಕಾರಜೋಳ ಅವರು ಎಸ್.ಸಿ.ಎಸ್.ಪಿ/ ಟಿ. ಎಸ್.ಪಿ ಹಣ ಬೇರೆಡೆಗೆ ಉಪಯೋಗವಾಗುತ್ತಿರುವ ಆರೋಪಕ್ಕೆ ಉತ್ತರಿಸಿ, ಅವರು ಎಸ್.ಸಿ.ಎಸ್.ಪಿ/ ಟಿ. ಎಸ್.ಪಿ ಅನುದಾನ ಅವರ ಕಾಲದಲ್ಲಿ ಯಾಕೆ ಕಡಿಮೆಯಾಯಿತು ಎಂದು ಉತ್ತರ ಕೊಡಬೇಕು. ನಾನು ಕಡೆ ಬಜೆಟ್ ಮಂಡಿಸಿದಾಗ 30 ಸಾವಿರ ಕೋಟಿ ರೂ.ಗಳ ಅನುದಾನವಿತ್ತು. ಇವರ ಕಾಲಕ್ಕೆ 25 ಸಾವಿರ ಕೋಟಿಯಾಗಿದೆ. ಯಾಕೆ ಆಯ್ತು ಎಂದು ಉತ್ತರ ಕೊಡಬೇಕು ಎಂದರು.
*ಕಲಂ ಡಿ ರದ್ದು: ಶೀಘ್ರ ಆದೇಶ*
ಕಲಂ 7 ಡಿ ರದ್ದು ಮಾಡಿಲ್ಲವೆಂಬ ಆರೋಪಕ್ಕೆ ಉತ್ತರಿಸಿ ಬಜೆಟ್ ನಲ್ಲಿ ಘೋಷಣೆಯಾಗಿದೆ, ಇದನ್ನು ಮಾಡುತ್ತಿದ್ದೇವೆ ಎಂದರು. ಆದೇಶವನ್ನು ತಕ್ಷಣ ಹೊರಡಿಸಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತೆಲಂಗಾಣದ ನೂತನ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ, ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಶುಭ ಕೋರಿದರು.