ಬೆಂಗಳೂರು.ಗ್ರಾ(ನೆಲಮಂಗಲ):

ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ಕುಡಿಯುವ ನೀರಿನ ಬವಣೆ ನೀಗಿಸಲು ಮುಂದಿನ ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಬೀರೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ವತಿಯಿಂದ ಶ್ರೀ ಬೀರೇಶ್ವರ ಸಮುದಾಯ ಭವನ ಮತ್ತು ಪ್ರಾರ್ಥನಾ ಮಂದಿರ ಉದ್ಘಾಟಿಸಿ ಮಾತನಾಡಿದರು.

ನೆಲಮಂಗಲ ಪಟ್ಟಣಕ್ಕೆ ಕುಡಿಯುವ ನೀರಿನ ಬೇಡಿಕೆ ಇದೆ. ನೆಲಮಂಗಲ ಸುತ್ತಮುತ್ತಲ ಪ್ರದೇಶಗಳ ಕೆರೆಗಳನ್ನು ತುಂಬುವ ವೃಷಭಾವತಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಈ ಯೋಜನೆಯಿಂದ ನೀರಿನ ಅಂತರ್ಜಲ ಮಟ್ಟ ಹೆಚ್ಚಲಿದೆ. ಮೆಟ್ರೋ ಸಂಪರ್ಕವನ್ನು ನೆಲಮಂಗಲದವರೆಗೂ ವಿಸ್ತರಿಸುವ ಯೋಜನೆ ಸರ್ಕಾರ ಪರಿಶೀಲಿಸಲಿದೆ. ನೆಲಮಂಗಲದ ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದರು.

*ಜಾತಿಯ ಎಲ್ಲೆಯ ಮೀರಿ ಸಮಾಜ ಬೆಳೆಯಬೇಕು:*

ಕುರುಬರು ಸಾಮಾನ್ಯವಾಗಿ ಶೈವ ಪಂಥದವರು. ಬೀರೇಶ್ವರ ಕುರುಬ ಸಮುದಾಯದ ಕುಲದೇವರು. ಇವರು ದೈವಭಕ್ತರು. ದೇವನೊಬ್ಬ ನಾಮ ಹಲವು. ನಾವು ಇತರರಿಗೆ ಒಳಿತು ಬಯಸಿದರೆ ಭಗವಂತನೂ ಒಳ್ಳೆಯದನ್ನೇ ಮಾಡುತ್ತಾನೆ. ಮನುಷ್ಯ ಮತ್ತೊಮ್ಮ ಮನುಷ್ಯನನ್ನು ದ್ವೇಷಿಸಬಾರದು. ಯಾವುದೇ ಜಾತಿ ಮತ ಧರ್ಮದ ಸೇರಿದ ಮನುಷ್ಯರನ್ನು ನಾವು ಗೌರವದಿಂದ ಕಾಣುವುದೇ, ದೇವರಿಗೆ ಅರ್ಪಿಸುವ ಗೌರವ. ಕನಕದಾಸರು, ಸಮಾಜದ ತಾರತಮ್ಯ ತೊಲಗಿ, ಎಲ್ಲರೂ ಮನುಷ್ಯರಾಗಿ ಬಾಳಬೇಕು ಎಂದು ಬಯಸಿದ್ದರು. ಜಾತಿಯ ಎಲ್ಲೆಯ ಮೀರಿ ಸಮಾಜ ಬೆಳೆಯಬೇಕು. ಕನಕದಾಸರು ಒಂದು ಜಾತಿಗೆ ಸೀಮತವಾಗದೇ ವಿಶ್ವ ಮಾನವ ಎಂದು ಕರೆಸಿಕೊಂಡರು. ನಾವೆಲ್ಲರೂ ವಿಶ್ವಮಾನವರಾಗುವ ದಾರಿಯಲ್ಲಿ ನಡೆಯಬೇಕು. ಕುವೆಂಪುರವರು ಸರ್ವಜನಾಂಗದ ಶಾಂತಿಯ ತೋಟದಂತಹ ಸಮಾಜವನ್ನು ನಿರ್ಮಿಸಬೇಕು ಎಂದರು.

*ಗ್ಯಾರಂಟಿಗಳಿಂದ ಜನರ ಆರ್ಥಿಕತೆ ಹೆಚ್ಚುತ್ತದೆ :*

ಮುಖ್ಯಮಂತ್ರಿಯಾಗಿ ಎಲ್ಲ ಧರ್ಮದ ಬಡವರಿಗೆ ಆರ್ಥಿಕ , ಸಾಮಾಜಿಕ ಶಕ್ತಿಯನ್ನು ತುಂಬುವುದು ನನ್ನ ಗುರಿಯಾಗಿದೆ. ಬಡವರಿಗೆ ಅಕ್ಕಿ, ಉಚಿತ ವಿದ್ಯುತ್, ಶಕ್ತಿ ಯೋಜನೆ,ಗೃಹಲಕ್ಷ್ಮಿ ಯೋಜನೆಗಳು ಯಾವುದೇ ಜಾತಿಧರ್ಮಕ್ಕೆ ಸೀಮಿತವಾಗಿಲ್ಲ. 1.14 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಜನರ ಕೈಗೆ ಬರುವ ದುಡ್ಡು, ಅವರ ಇತರೆ ಅವಶ್ಯಕತೆಗಳನ್ನು ಪೂರೈಸಿ, ಆರ್ಥಿಕತೆ ಹೆಚ್ಚುತ್ತದೆ. ಕೇವಲ ಶ್ರೀಮಂತರಲ್ಲದೇ, ಬಡವರು ಊಟಮಾಡುವಂತಾಗಬೇಕು, ಕರ್ನಾಟಕ ಹಸಿವುಮುಕ್ತ ರಾಜ್ಯವಾಗಬೇಕು. 1.30 ಕೋಟಿ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳಿಂದ ಲಾಭವಾಗಿದೆ. ಸಮಾಜ ನಿಂತ ನೀರಾಗದೆ ಬದಲಾವಣೆಯಾಗಬೇಕು. ಸಮಾಜಕ್ಕೆ ಚಲನೆ ದೊರೆತಾಗ ಆರ್ಥಿಕತೆ ಚುರುಕಾಗುತ್ತದೆ ಎಂದರು.

ಚುನಾವಣಾ ಫಲಿತಾಂಶ: ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ….

ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವುಗಳು ಸ್ವಾಭಾವಿಕ. ಪ್ರತಿಯೊಂದು ಚುನಾವಣಾ ಫಲಿತಾಂಶದಲ್ಲಿ ರಾಜಕೀಯ ಪಕ್ಷಗಳು ಕಲಿಯುವ ಪಾಠ ಇದೆ.
ನಾವು ಸೋಲಿನಿಂದ ಕುಗ್ಗುವುದಿಲ್ಲ, ಗೆಲುವಿನಿಂದ ಹಿಗ್ಗುವುದಿಲ್ಲ.

ನಾಲ್ಕು ರಾಜ್ಯಗಳ ಚುನಾವಣೆಗಳ ಪೈಕಿ ತೆಲಂಗಾಣದಲ್ಲಿ ಕಾಂಗ್ರೆಸ್ ಸ್ಪಷ್ಟ ಗೆಲುವು ಸಾಧಿಸಿದೆ. ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ ಗಢಗಳಲ್ಲಿ ಹಿನ್ನಡೆ ಆಗಿದೆ.

ತೆಲಂಗಾಣ ನಮ್ಮ ನೆರೆಯ ರಾಜ್ಯವಾಗಿರುವ ಕಾರಣ ಅಲ್ಲಿನ ಗೆಲುವಿನಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸು ಮತ್ತು ಕಾಂಗ್ರೆಸ್ ಪಕ್ಷದ ನಾಯಕರ ಶ್ರಮದ ದೊಡ್ಡ ಪಾತ್ರ ಇದೆ.

ವರ್ಷದ ಹಿಂದೆ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಕಾರ್ಯಕ್ರಮ ಅಲ್ಲಿನ ಪಕ್ಷದ ಕಾರ್ಯಕರ್ತರನ್ನು ಇನ್ನಷ್ಟು ಹುರಿದುಂಬಿಸಿದ್ದು ನಿಜ . ಅದರ ನಂತರ ಬಹಳ ವ್ಯವಸ್ಥಿತವಾದ ಪ್ರಚಾರ ನಡೆಯಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಮತ್ತು ನುಡಿದಂತೆ ನಡೆದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಗೊಳಿಸಿದ್ದು ತೆಲಂಗಾಣದ ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಡುವಂತಾಯಿತು.

ಬಿಜೆಪಿ ಬಿಆರ್ ಎಸ್ ಪಕ್ಷದ ಜೊತೆ ಒಳ ಒಪ್ಪಂದ ಮಾಡಿಕೊಂಡದ್ದು ಮತದಾರರು ಎರಡು ಪಕ್ಷಗಳ ಮೇಲೆ ಭರವಸೆ ಕಳೆದುಕೊಳ್ಳುವಂತೆ ಮಾಡಿತು. ಈ ಒಳ ಒಪ್ಪಂದದ ತಂತ್ರಗಾರಿಕೆಯನ್ನು ಕಾಂಗ್ರೆಸ್ ಪಕ್ಷ ಪ್ರಚಾರದ ಸಮಯದಲ್ಲಿ ಬಯಲು ಮಾಡಿದ್ದು‌ ನಮ್ಮ ಗೆಲುವಿಗೆ ಕಾರಣ.

ಉಳಿದ ಮೂರು ರಾಜ್ಯಗಳಲ್ಲಿ ಬಿಜೆಪಿಯ ಗೆಲುವಿನಲ್ಲಿ ಹಣ ಮತ್ತು ಕೋಮುವಾದಿ ರಾಜಕಾರಣದ ಪಾತ್ರ ಇದೆ. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಅಕ್ರಮ ಗಳಿಕೆಯನ್ನು ನೀರಿನಂತೆ ಚೆಲ್ಲಿದೆ. ಅದರ ಜೊತೆ ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುವ ತಮ್ಮ ಹಳೆಯ ಆಟವನ್ನು‌ ಮುಂದುವರಿಸಿದೆ.

ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಯೇ ಇಲ್ಲದೆ ಇರುವ ಕಾರಣಕ್ಕೆ ಬಿಜೆಪಿ‌ ಅಲ್ಲಿ ಹೆಚ್ಚು ಹಣವನ್ನು ವ್ಯರ್ಥ ಮಾಡಲು ಹೋಗಿಲ್ಲ. ಅಲ್ಲಿ ಬಿಜೆಪಿ ಕೋಮುವಾದಿ ರಾಜಕಾರಣಕ್ಕೆ ಅವಕಾಶ ಇರಲಿಲ್ಲ.

ರಾಜಸ್ತಾನದಲ್ಲಿ ಸಾಮಾನ್ಯವಾಗಿ ಪ್ರತಿ ಚುನಾವಣೆಯಲ್ಲಿ ಪಕ್ಷವನ್ನು‌ ಬದಲಾಯಿಸುವ ಕಾರಣದಿಂದಾಗಿ ಅಶೋಕ್ ಗೆಹ್ಲೋತ್ ಸರ್ಕಾರ ಒಳ್ಳೆಯ ಕೆಲಸ ಮಾಡಿದ್ದರೂ ಮರಳಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ.

ರಾಜಸ್ತಾನ ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಆಡಳಿತ ವಿರೋಧಿ ಅಲೆ ಕಾರಣ. ಇತ್ತೀಚಿನ ವರ್ಷಗಳಲ್ಲಿ ರಾಜಸ್ತಾನದಲ್ಲಿ ಯಾವುದೇ ಆಡಳಿತ ಪಕ್ಷ ಮರಳಿ ಅಧಿಕಾರಕ್ಕೆ ಬಂದಿರುವ ಉದಾಹರಣೆ ಇಲ್ಲ. ಅಲ್ಲಿನ ಮತದಾರರು ಪ್ರತಿ ಚುನಾವಣೆಯಲ್ಲಿ ಆಡಳಿತ ಪಕ್ಷವನ್ನು ಸೋಲಿಸುತ್ತಾ ಬಂದಿದ್ದಾರೆ. ಈ ಚುನಾವಣೆಯಲ್ಲಿಯೂ ಆ ಪರಂಪರೆಯನ್ನು‌ ಮುಂದುವರಿಸಿದ್ದಾರೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.

ಲೀಲಾವತಿಯವರನ್ನು ಆಸ್ಪತ್ರೆಗೆ ಸೇರಿಸಿದಲ್ಲಿ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ : ಸಿದ್ದರಾಮಯ್ಯ

ನೆಲಮಂಗಲ :
ಹಿರಿಯ ಕಲಾವಿದೆ ಲೀಲಾವತಿಯವರನ್ನು ಆಸ್ಪತ್ರೆಗೆ ಸೇರಿಸಿದಲ್ಲಿ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಸೋಲದೇವನಹಳ್ಳಿ ಯಲ್ಲಿ ಇರುವ ಕನ್ನಡ ಚಲನಚಿತ್ರ ಹಿರಿಯ ನಟಿ ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಲೀಲಾವತಿ ಯವರು ಚೆನ್ನಾಗಿದ್ದ ಸಂದರ್ಭದಲ್ಲಿ ಜಮೀನು ವಿಚಾರವಾಗಿ ಇದ್ದ ತೊಂದರೆ ಬಗೆಹರಿಸಲು ಭೇಟಿಯಾಗುತ್ತಿದ್ದರು. ಈಗ ವಯೋಸಹಜವಾಗಿ ಕಾಯಿಲೆಗಳಿಂದ ಹಾಸಿಗೆ ಹಿಡಿದಿದ್ದಾರೆ. ಆಸ್ಪತ್ರೆಗೆ ಸೇರಿಸಿದರೆ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದ್ದೇನೆ ಎಂದರು.

ಲೀಲಾವತಿ ಯವರು ಒಬ್ಬ ನೈಜ ಪ್ರತಿಭೆಯಿದ್ದ ಕಲಾವಿದೆ. ಅವರ ಮಗ ವಿನೋದ್ ರಾಜ್ ಕೂಡ ಚೆನ್ನಾಗಿ ನೋಡಿಕೊಳ್ಳಲಿ ಎಂದು ಹೇಳಿದ್ದೇನೆ. ಸರ್ಕಾರದಿಂದ ಏನೇ ಸಹಾಯದ ಅಗತ್ಯವಿದ್ದರು ಒದಗಿಸುವುದಾಗಿ ತಿಳಿಸಿದ್ದೇನೆ ಎಂದರು.

 

ರೈತರ ಪರವಾಗಿ ಲೀಲಾವತಿ ಗಟ್ಟಿಯಾದ ನಿಲುವು ಹೊಂದಿದ್ದರು. ಈಗಾಲೂ ಅವರಿಗೆ ರಕ್ಷಣೆ ನೀಡುವ ಕೆಲಸ ಮಾಡುತ್ತೇವೆ ಎಂದು ಮುಖ್ಯ ಮಂತ್ರಿಗಳು ಭರವಸೆ ನೀಡಿದರು.