ಮಂಡ್ಯ : ಕೊಟ್ಟ ಮಾತಿನಂತೆ ನಡೆದುಕೊಳ್ಳುವವರನ್ನು ಬೆಂಬಲಿಸಿದರೆ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮಂಡ್ಯ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಆಯೋಜಿಸಲಾಗಿದ್ದ ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಸವಲತ್ತುಗಳನ್ನು ನೀಡಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ಚುನಾವಣೆಯಲ್ಲಿ ರಾಜ್ಯದ ಜನ ನಮ್ಮ ನಿರೀಕ್ಷೆಯನ್ನೂ ಮೀರಿ ಆಶೀರ್ವಾದ ಮಾಡಿದ್ದಾರೆ. 136 ಸ್ಥಾನಗಳಲ್ಲಿ ನಮ್ಮನ್ನು ಗೆಲ್ಲಿಸಿದ್ದಾರೆ. ಕರ್ನಾಟಕದ ಜನ ಪ್ರಭುದ್ಧವಾದ ತೀರ್ಮಾನ ಮಾಡಿದ್ದಾರೆ. ಮಂಡ್ಯ ಜನರೂ ಕೂಡ ಸುಳ್ಳು ಭರವಸೆ ನೀಡಿದ್ದರೂ, ದಾರಿ ತಪ್ಪಿಸುವ ಕೆಲಸ ಮಾಡಿದ್ದರೂ ಸರಿಯಾದ ತೀರ್ಮಾನವನ್ನೇ ಮಾಡಿದ್ದಾರೆ ಎಂದರು.
*ಭರವಸೆಗಳ ಈಡೇರಿಕೆ*
ಚುನಾವಣಾ ಪೂರ್ವದಲ್ಲಿ ನೀಡಿದ್ದ ಅನೇಕ ಭರವಸೆಗಳ ಪೈಕಿ ಪ್ರಮುಖವಾಗಿ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೆ ತಂದೆವು. ಪ್ರಮಾಣವಚನ ಸ್ವೀಕಾರ ಮಾಡಿದ ದಿನವೇ 5 ಗ್ಯಾರಂಟಿಗಳ ಜಾರಿಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದೆವು. ರಾಜ್ಯದ 3.50 ಕೋಟಿ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾದ ಶಕ್ತಿ ಯೋಜನೆಗೆ ಚಾಲನೆ ನೀಡಿದೆವು. 50 ರಿಂದ 60 ಲಕ್ಷ ಮಹಿಳೆಯರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.
*ರೈತರಿಗೆ ಪರಿಹಾರ*
ಕೃಷಿ ಇಲಾಖೆಗೆ 600 ಕೋಟಿ ರೂ.ಗಳನ್ನು ಬೆಳೆ ವಿಮೆಗೆ ನೀಡಲಾಗಿದ್ದು, ಇನ್ನೂ 800 ಕೋಟಿ ರೂ.ಗಳನ್ನು ನೀಡಲಾಗುವುದು. 33.25 ಲಕ್ಷ ರೈತರಿಗೆ 631 ಕೋಟಿ ರೂ.ಗಳನ್ನು ತಲಾ 2000 ರೂ.ಗಳ ಬೆಳೆ ಪರಿಹಾರಕ್ಕೆ ನೀಡಿದ್ದೇವೆ.
*ಮಂಡ್ಯ ಜಿಲ್ಲೆಯನ್ನು ಸಂಪೂರ್ಣ ಅಭಿವೃದ್ಧಿ*
ಬಿಜೆಪಿ ಮೇಲೆ ಜೆಡಿಎಸ್ ಅವರಿಗೆ ಬಹಳ ಪ್ರೀತಿ ಉಂಟಾಗಿದೆ. ನಮ್ಮ ಗ್ಯಾರಂಟಿಗಳ ಬಗ್ಗೆ ಟೀಕಿಸುತ್ತಾರೆ. ಜನರಿಗೆ ಸತ್ಯ ತಿಳಿಸದೆ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾವು ನಿಮ್ಮ ಪರ ಇದ್ದೇವೆ. ಮಂಡ್ಯ ಜಿಲ್ಲೆಯನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು. 500 ಕೋಟಿ ರೂ.ಗಳನ್ನು ಜಿಲ್ಲೆಗೆ ನೀಡಲಾಗುತ್ತಿದೆ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ನೀರಾವರಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ವ್ಯವಸಾಯದ ಮೇಲೆ ಅವಲಂಬಿತ ಜನ ಹೆಚ್ಚಿದ್ದು, ಅಭಿವೃದ್ಧಿ ಮಾಡಲು ಪಣ ತೊಟ್ಟಿದ್ದೇವೆ. ಯಾರೂ ಏನೇ ಹೇಳಿದರೂ ಕೆಲಸ ಮಾಡಿದವರನ್ನು ಗೆಲ್ಲಿಸಬೇಕು ಎಂದರು.
*ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ*
ಮಂಡ್ಯದಲ್ಲಿ 4.57 ಕೋಟಿ ಮಹಿಳೆಯರು ಹಾಗೂ ಇಡೀ ರಾಜ್ಯದಲ್ಲಿ 170 ಕೋಟಿ ಉಚಿತವಾಗಿ ಪ್ರಯಾಣಿಸಿದ್ದಾರೆ.ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ನಂತರ ಜನರನ್ನು ಸಂಪೂರ್ಣವಾಗಿ ಹಿಂದಿನ ಸರ್ಕಾರ ಮರೆತಿತ್ತು. ಆದರೆ ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿಯವರು ರೈತಪರ , ಬಡವರಪರ ಎಂದು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರೂ, ಯಾವುದೇ ಭರವಸೆಗಳನ್ನು ಈಡೇರಿಸಲಿಲ್ಲ. ಅವರು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಲಿಲ್ಲ. ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ, ಬಿಜೆಪಿಯ ಯಡಿಯೂರಪ್ಪನವರು 17 ಶಾಸಕರನ್ನು ಕೊಂಡು ಆಪರೇಷನ್ ಕಮಲ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರು. ಮಾಜಿ ಪ್ರಧಾನಿ ದೇವೇಗೌಡರು ಕೋಮುವಾದಿಗಳೊಂದಿಗೆ ಸೇರುವುದಿಲ್ಲ ಎಂದಿದ್ದವರು ,ಈಗ ಅವರನ್ನೇ ಬೆಂಬಲಿಸುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನ ಅಪವಿತ್ರ ಮೈತ್ರಿಯನ್ನು ಸೋಲಿಸಿ, ನಮ್ಮ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಬೇಕೆಂದು ಜನರನ್ನು ಕೋರಿದರು.
*ಬಡವರ ಬೆಂಬಲಕ್ಕೆ ನಿಲ್ಲದ ಬಿಜೆಪಿ*
ಅನ್ನಭಾಗ್ಯ ಯೋಜನೆಯಡಿ 5 ಕೆಜಿಯ ಜೊತೆಗೆ 5 ಕೆಜಿ ಅಕ್ಕಿ ನೀಡಿ, ರಾಜ್ಯವನ್ನು ಹಸಿವು ಮುಕ್ತ ಮಾಡುವ ಸರ್ಕಾರದ ಉದ್ದೇಶಕ್ಕೆ ಕೇಂದ್ರ ಸರ್ಕಾರ ಸಹಕರಿಸಲಿಲ್ಲ. ಆದ್ದರಿಂದ 5 ಕೆಜಿ ಬದಲಿಗೆ 170 ರೂ.ಗಳನ್ನು ನೀಡುತ್ತಿದ್ದೇವೆ. ಜಿಲ್ಲೆಯಲ್ಲಿ 438705 ಫಲಾನುಭವಿಗಳಿಗೆ 166 ಕೋಟಿ ರೂ.ಗಳ ಅನ್ನಭಾಗ್ಯದ ಆರ್ಥಿಕ ನೆರವು ನೀಡಲಾಗಿದೆ. ಬಡವರ ಬೆಂಬಲಕ್ಕೆ ನಿಲ್ಲದ ಬಿಜೆಪಿ ಸರ್ಕಾರವನ್ನು ಗೆಲ್ಲಿಸಬೇಕೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
*4.60 ಕೋಟಿ ಜನರಿಗೆ ಗ್ಯಾರಂಟಿ ಯೋಜನೆಗಳು*
ಮಂಡ್ಯ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಇಲ್ಲಿನ ಜನರಿಗೆ 464303 ಜನ ನೋಂದಾಯಿಸಿಕೊಂಡಿದ್ದು, 104 ಕೋಟಿ ರೂ. ನೀಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 449197 ಮಹಿಳೆಯರು ನೊಂದಾಯಿಸಿಕೊಂಡಿದ್ದು, 512 ಕೋಟಿ ರೂ. ಗಳನ್ನು ನೀಡಲಾಗಿದೆ. ಯುವನಿಧಿ 3148 ಅರ್ಜಿಗಳು ನೋಂದಾವಣೆಯಾಗಿದ್ದು, 22 ಲಕ್ಷ ರೂ.ಗಳನ್ನು ವರ್ಗಾಯಿಸಲಾಗಿದೆ. ಬಡವರು, ಮಹಿಳೆಯರು, ದಲಿತರು, ರೈತರು ಸೇರಿದಂತೆ ಎಲ್ಲ ಜಾತಿಧರ್ಮದವರಿಗೂ ಆರ್ಥಿಕವಾಗಿ ಬಲ ತುಂಬಲಾಗುತ್ತಿದೆ. 4.60 ಕೋಟಿ ಜನರಿಗೆ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ತಲುಪುತ್ತಿದೆ. ಈವರ್ಷ 36 ಸಾವಿರ ಕೋಟಿ, ನಂತರ 52009 ಕೋಟಿ ರೂ.ಗಳನ್ನು ಬಜೆಟನಲ್ಲಿ ನಿಗದಿಪಡಿಸಲಾಗಿದೆ. ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಮಂಡ್ಯ ಶಾಸಕರಾದ ರವಿಕುಮಾರ್ , ರಮೇಶ್, ನರೇಂದ್ರಸ್ವಾಮಿ , ದರ್ಶನ್ ಪುಟ್ಟಣ್ಣಯ್ಯ, ಕೆ.ಎಂ ಉದಯ, ವಿಧಾನಪರಿಷತ್ ಸದಸ್ಯರಾದ ಮಧು ಮಾದೇಗೌಡ ದಿನೇಶ್ ಗೂಳಿಗೌಡ, ಮರೀತಿಬ್ಬೇಗೌಡ, ರವಿಶಂಕರ್, ಲೋಕಸಭಾ ಅಭ್ಯರ್ಥಿ ವೆಂಕಟರಮಣ ಮೊದಲಾದವರು ಉಪಸ್ಥಿತರಿದ್ದರು.