ಬೆಳಗಾವಿ : ಲೋಕಸಭಾ ಚುನಾವಣೆಗೆ ಇನ್ನು ಕೇವಲ 16 ದಿನ ಉಳಿದಿದೆ. ರಾಜಕೀಯ ಪಕ್ಷಗಳು ಈಗಾಗಲೆ 2 ಸುತ್ತಿನ ಪ್ರಚಾರ ಮುಗಿಸಿವೆ. ಇನ್ನೇನಿದ್ದರೂ ಸ್ಟಾರ್ ಪ್ರಚಾರಕರು, ನಾಯಕರ ನಿರೀಕ್ಷೆ.

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಏಪ್ರಿಲ್ 26ರಂದು ನಡೆಯಲಿದೆ, ಅಲ್ಲಿ ಏ.23ರಂದೇ ಬಹುರಂಗ ಪ್ರಚಾರ ಅಂತ್ಯವಾಗಲಿದೆ. ಹಾಗಾಗಿ ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ತೊಡಗಿಕೊಂಡವರು ಏ.24ರ ನಂತರ ಎರಡನೇ ಹಂತದ ಚುನಾವಣೆ ನಡೆಯಲಿರುವ ಉತ್ತರ ಕರ್ನಾಟಕಕ್ಕೆ ಲಗ್ಗೆ ಇಡಲಿದ್ದಾರೆ. ಆಗ ಚುನಾವಣೆ ಕಣ ನಿಜವಾಗಿಯೂ ರಂಗೇರಲಿದೆ.
ಸ್ಟಾರ್ ಪ್ರಚಾರಕರ ಪೈಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವಾಸ ಪಟ್ಟಿ ಮೊಟ್ಟ ಮೊದಲಿಗೆ ಪ್ರಕಟವಾಗಿದೆ. ಏ.24ರಿಂದ ಅವರು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ.

ಏಪ್ರಿಲ್ 24ರಂದು ಕಲಬುರಗಿಗೆ ಆಗಮಿಸಲಿರುವ ಸಿದ್ದರಾಮಯ್ಯ, ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ಅಫ್ಜಲ್ ಪುರ, ಆಳಂದ, ಬೀದರ್ ನಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸುವರು. ಏಪ್ರಿಲ್ 25ರಂದು ಹುಬ್ಬಳ್ಳಿಗೆ ಆಗಮಿಸಲಿರುವ ಸಿದ್ದರಾಮಯ್ಯ, ನವಲಗುಂದ, ಗಜೇಂದ್ರಗಡ ಹಾಗೂ ಹುಬ್ಬಳ್ಳಿಯಲ್ಲಿ ಪ್ರಚಾರ ನಡೆಸುವರು. ಏ.25ರ ರಾತ್ರಿ ಮೈಸೂರಿಗೆ ತೆರಳಿ 26ರಂದು ಮತದಾನ ಮಾಡಿದ ನಂತರ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ತೆರಳುವರು. ಅದೇ ದಿನ ಸಂಜೆ ಕಲಬುರಗಿಯಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸುವರು. ಏ.27ರಂದು ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ, ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಹಾಗೂ ವಿಜಯಪುರದಲ್ಲಿ ಪ್ರಚಾರ ನಡೆಸುವರು.

ಏ.28, 30ರಂದು ಬೆಳಗಾವಿ ಜಿಲ್ಲೆಯಲ್ಲಿ ಪ್ರಚಾರ
ಏ.28ರಂದು ಅಥಣಿಗೆ ಆಗಮಿಸಿ ಬೆಳಗ್ಗೆ 11.30ಕ್ಕೆ ಉಗಾರಖುರ್ದದಲ್ಲಿ ಪ್ರಿಯಾಂಕಾ ಜಾರಕಿಹೊಳಿ ಪರ, ಮಧ್ಯಾಹ್ನ 2.30ಕ್ಕೆ ಯರಗಟ್ಟಿಯಲ್ಲಿ ಮೃಣಾಲ ಹೆಬ್ಬಾಳಕರ್ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸುವರು. ಅಂದು ಸಂಜೆ 6 ಗಂಟೆಗೆ ಸಿಂದನೂರಿನಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸುವರು. 29ರಂದು ಕೂಡ್ಲಗಿ, ಕುಷ್ಟಗಿ ಹಾಗೂ ಬಾಗಲಕೋಟೆಯಲ್ಲಿ ಪ್ರಚಾರ ನಡೆಸುವರು.

30ರಂದು 11 ಗಂಟೆಗೆ ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಪರ, 2.45ಕ್ಕೆ ಗೋಕಾಕಲ್ಲಿ ಮೃಣಾಲ ಹೆಬ್ಬಾಳಕರ್ ಪರ ಸಿದ್ದರಾಮಯ್ಯ ಪ್ರಚಾರ ನಡೆಸಲಿದ್ದಾರೆ. ಅಂದು ಸಂಜೆ 5.45ಕ್ಕೆ ಗಂಗಾವತಿಯಲ್ಲಿ ಪ್ರಚಾರ ಸಭೆ ನಡೆಸುವರು.

ಸಿದ್ದರಾಮಯ್ಯ ಆಖಾಡಕ್ಕಿಳಿಯುವುದರಿಂದ ಚುನಾವಣೆ ಕಣ ರಂಗೇರಲಿದೆ. ವಿರೋಧಿಗಳ ವಿರುದ್ಧ ಒಂದೊಂದೇ ಅಸ್ತ್ರಗಳನ್ನು ಹೊರಗೆ ತೆಗೆಯುವ ಮೂಲಕ ಕಣದಲ್ಲಿ ಆರೋಪ ಪರತ್ಯಾರೋಪಗಳು ಜೋರಾಗಲಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಹೋದಲ್ಲೆಲ್ಲ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಮಾಸ್ ಲೀಡರ್ ಎಂದು ಕರೆಸಿಕೊಂಡಿರುವ ಸಿದ್ದರಾಮಯ್ಯ ಪ್ರಚಾರ ಸಭೆ ಎಂದರೆ ಜನರು ಕಿಕ್ಕಿರಿದು ಸೇರುತ್ತಾರೆ. ಸಿದ್ದರಾಮಯ್ಯ ಪ್ರಚಾರದಿಂದ ಕಾಂಗ್ರೆಸ್ ನಲ್ಲಿ ಉತ್ಸಾಹ ಇಮ್ಮಡಿಗೊಂಡಿದೆ. ವಿಶೇಷವಾಗಿ ಬೆಳಗಾವಿಯಲ್ಲಿ ಸಿದ್ದರಾಮಯ್ಯ ಪ್ರವಾಸದಿಂದಾಗಿ ಕಾಂಗ್ರೆಸ್ ಗೆಲುವಿನ ಓಟಕ್ಕೆ ಶರವೇಗ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.