ಬೆಳಗಾವಿ :
ಇಡೀ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಬೆಳಗಾವಿಯ ಪ್ರೇಮಿಗಳು ಇದೀಗ ಸಪ್ತಪದಿ ತುಳಿದಿದ್ದಾರೆ. ಅವರು ಈಗ ಸರಳ ವಿವಾಹ ಆಗುವ ಮೂಲಕ ಹೊಸ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ, ಕಾನೂನು ಪ್ರಕಾರ ಈ ಪ್ರೇಮಿಗಳು ಇದೀಗ ವಿವಾಹ ಬಂಧನಕ್ಕೆ ಒಳಗಾಗಿದ್ದು ಎಲ್ಲಾ ವಿವಾದಗಳಿಗೂ ತೆರೆ ಎಳೆದಿದ್ದಾರೆ.

ಪ್ರಕರಣ ಏನು ?
ಮನೆ ಬಿಟ್ಟು ಹೋಗಿದ್ದ ಬೆಳಗಾವಿ ತಾಲೂಕಿನ ಹೊಸ ವಂಟಮೂರಿಯ ಪ್ರೇಮಿಗಳ ವಿವಾಹ ಮಂಗಳವಾರದಂದು ನೋಂದಣಿಯಾಗಿದೆ. ಪ್ರೇಮಿಗಳು ಮನೆ ಬಿಟ್ಟು ಹೋದರು ಎಂಬ ಕಾರಣಕ್ಕೆ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ, ವಿದ್ಯುತ್‌ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಲಾಗಿತ್ತು. ಈ ಸಂಬಂಧ 11 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಲ್ಲೆ ನಡೆದ ದಿನ (2023ರ ಡಿ.11) ಪ್ರೇಮಿಗಳು ದೇವಸ್ಥಾನದಲ್ಲಿ ಮದುವೆಯಾಗಿದ್ದರು.

ಇದೀಗ ಜ.30ರಂದು ಅವರ ವಿವಾಹ ಬೆಳಗಾವಿಯ ಉದ್ಯಮಬಾಗದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದಾರೆ. ಸಂಬಂಧಿ ಮಹಿಳೆಯರು ಇದಕ್ಕೆ ಸಾಕ್ಷಿ ಸಹಿ ಮಾಡಿದ್ದಾರೆ.

ಸಂತ್ರಸ್ತ ಮಹಿಳೆಯ ಪುತ್ರ ಹಾಗೂ ಪ್ರಮುಖ ಆರೋಪಿಯ ಪುತ್ರಿ ಡಿ.10ರ ರಾತ್ರಿ ಮನೆ ಬಿಟ್ಟು ಹೋಗಿದ್ದರು. ಡಿ.11ರ ಬೆಳಿಗ್ಗೆ ಯುವತಿಯ ಮನೆಯವರು ಯುವಕನ ತಾಯಿಯನ್ನು ಬೆತ್ತಲೆ ಮಾಡಿ, ಅಮಾನುಷವಾಗಿ ಹಲ್ಲೆ ಮಾಡಿದ್ದರು.

ಕರ್ನಾಟಕ ಹೈಕೋರ್ಟ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ. ಘಟನೆಯಿಂದ ಸಂತ್ರಸ್ತ ಮಹಿಳೆಗೆ ಇಲ್ಲಿನ ಜಿಲ್ಲಾಸ್ಪತ್ರೆಯ ಸಖಿ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ನವದಂಪತಿ ಹಾಗೂ ಸಂತ್ರಸ್ತೆ ಬೇರೆಬೇರೆ ಕಡೆಗಳಲ್ಲಿ ವಾಸವಾಗಿದ್ದು, ಅವರಿಗೆ ಪೊಲೀಸ್‌ ರಕ್ಷಣೆ ಒದಗಿಸಲಾಗಿದೆ.

ಪ್ರೇಮಿಗಳು ರಾತ್ರೋರಾತ್ರಿ ಮನೆ ಬಿಟ್ಟು ಓಡಿ ಹೋಗಿದ್ದ ವಿಷಯ ಯುವತಿಯ ಮನೆಯವರ ರೋಷಕ್ಕೆ ಕಾರಣವಾಗಿತ್ತು. ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಅಮಾನವೀಯ ಹಲ್ಲೆ ನಡೆಸಿದ ಪ್ರಕರಣ ಇಡೀ ಕನ್ನಡ ನಾಡು ಖಂಡಿಸಿತ್ತು. ಇದೀಗ ವಿವಾಹ ನೋಂದಣಿಯಾಗುವ ಮೂಲಕ ಮೂಲಕ ಪ್ರಕರಣ ಸುಖಾಂತ್ಯಗೊಂಡಿದೆ.