ಬೆಂಗಳೂರು:
ಸುಮಾರು 13,000 ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯಿಂದ ಹಳೆಯ ಪಿಂಚಣಿ ಯೋಜನೆಗೆ ಬದಲಾಯಿಸಲು ರಾಜ್ಯ ಸರ್ಜಾರ ಒಪ್ಪಿಗೆ ನೀಡಿದೆ.

ಏಪ್ರಿಲ್ 2006ರ ಪೂರ್ವದಲ್ಲಿ ಅಧಿಸೂಚನೆ ಹೊರಡಿಸಿ ನೇಮಕಗೊಂಡ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಸರ್ಕಾರ ಒಪ್ಪಿಗೆ ನೀಡಿದೆ.

ಹಳೆಯ ಪಿಂಚಣಿ ಸೇವೆಗೆ ಒಳಪಡಲು ಸರ್ಕಾರಿ ನೌಕರರು ತಾವೇ ಒಪ್ಪಿಗೆ ಸೂಚಿಸಬೇಕು; ಏಪ್ರಿಲ್ 2006ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆ ಹೊಂದಿದವರಿಗೆ ಮಾತ್ರ ಅವಕಾಶ; ಹಳೆಯ ಪಿಂಚಣಿ ಸೇವೆಗೆ ಒಳಪಟ್ಟರೆ, ಬದಲಾವಣೆಗೆ ಮತ್ತೆ ಅವಕಾಶವಿಲ್ಲ; ಹಳೆಯ ಪೆನ್ಷನ್ ಸ್ಕೀಮ್‌ಗೆ ಒಳಪಡುವ ಬಗ್ಗೆ ಯಾವುದೇ ಸೂಚನೆ ನೀಡದಿದ್ದರೆ ನೂತನ ರಾಷ್ಟ್ರೀಯ ಪೆನ್ಷನ್ ಸ್ಕೀಮ್ ಮುಂದುವರಿಯುತ್ತದೆ.

ಓಲ್ಡ್ ಪೆನ್ಶನ್ ಸ್ಕೀಮ್‌ಗೆ ಒಳಪಡಲು ಅರ್ಜಿ ಸಲ್ಲಿಸಲು ಜೂನ್ 30ರವರೆಗೆ ಅವಕಾಶ ನೀಡಲಾಗಿದೆ. ಈ ಅವಕಾಶ ಎಲ್ಲಾ ಸರ್ಕಾರಿ ನೌಕರರಿಗೂ ಇಲ್ಲ. ಕೇವಲ ಏಪ್ರಿಲ್ 2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆ ಹೊಂದಿದವರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಸರ್ಕಾರಿ ಪ್ರಕಟಣೆ ತಿಳಿಸಿದೆ.

ಇತ್ತೀಚೆಗೆ ರಾಜ್ಯ ನೌಕರರ ಸಂಘಟನೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಮಾಡಲು ಒತ್ತಾಯಿಸಿತ್ತು. ಈಗಾಗಲೇ ಪಂಜಾಬ್‌, ರಾಜಸ್ಥಾನ, ಚತ್ತಿಸ್‌ಘಡ, ಜಾರ್ಖಂಡ್‌, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಎನ್‌ಪಿಎಸ್‌ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂಬುದು ನೌಕರರ ಬೇಡಿಕೆ.