ಬೆಳಗಾವಿ ತಾಲೂಕಿನ ಹೊಸವಂಟಮುರಿ ಗ್ರಾಮದಲ್ಲಿ ತಿಂಗಳ ಹಿಂದಷ್ಟೇ ಒಂದೇ ಸಮುದಾಯಕ್ಕೆ ಸೇರಿದ ಯುವಕ-ಯುವತಿ ಪ್ರೀತಿಸಿದ ಕಾರಣಕ್ಕೆ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿದ ಘಟನೆ ಮಾಸುವ ಮುನ್ನವೇ ಇದೀಗ ನಾವಗೆ ಗ್ರಾಮದಲ್ಲಿ ಪ್ರೀತಿ-ಪ್ರೇಮ ಕಾರಣಕ್ಕೆ ಕಿಡಿಗೇಡಿಗಳು ನಾಲ್ಕು ಮನೆಗಳಿಗೆ ನುಗ್ಗಿ ಅಟ್ಟಹಾಸ ಮೆರೆದಿದ್ದಾರೆ. ಪುಂಡರ ಗುಂಪು ಗ್ರಾಮಕ್ಕೆ ನುಗ್ಗಿ ಬಂದೂಕು, ದೊಣ್ಣೆ ಹಿಡಿದು ದಾಳಿ ನಡೆಸಿದೆ. ಎರಡು ಕಾರು, 4 ಬೈಕ್ ಜಖಂಗೊಂಡಿವೆ. ನಾಲ್ಕು ಮನೆಗಳ ಮೇಲೆ ದಾಳಿಯಾಗಿದೆ.

ಬೆಳಗಾವಿ :
ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ನಿನ್ನೆ ರಾತ್ರಿ ಕೆಲ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ನಾಲ್ಕು ಮನೆಗಳ ಮೇಲೆ ಮನ ಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ.

ಗ್ರಾಮಕ್ಕೆ ತಡರಾತ್ರಿ ನುಗ್ಗಿದ ಕಿಡಿಗೇಡಿಗಳು ಸುಮಾರು 30 ಕ್ಕೂ ಹೆಚ್ಚು ಜನ ಇದ್ದರು ಎನ್ನಲಾಗಿದೆ. ಎಲ್ಲರೂ ಮುಸುಕುಧಾರಿಗಳಾಗಿ ಗ್ರಾಮ ಪ್ರವೇಶಿಸಿ ಅಟ್ಟಹಾಸ ಮೆರೆದಿದ್ದಾರೆ. ಇವರ ಪುಂಡಾಟ ನೋಡಿ ಗ್ರಾಮಸ್ಥರು ಬೆಚ್ಚಿ ಬೀಳುವಂತಾಗಿದೆ. ಮನೆಗಳ ಕಿಟಕಿ, ಗೋಡೆ ಹಾಗೂ ಟೈಲ್ಸ್ ಗಳನ್ನು ಸಹಾ ಧ್ವಂಸಗೊಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತದೆ. ಘಟನೆಗೆ ಕಾರಣರಾದ ಎಲ್ಲರನ್ನು ಶೀಘ್ರವೇ ಬಂಧಿಸುವುದಾಗಿ ಹೇಳಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.