ಬೆಳಗಾವಿ ಸುವರ್ಣಸೌಧ :
ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ಪದ್ದತಿಯಲ್ಲಿ ವಿತರಿಸುವ ಪಡಿತರ ಅಕ್ರಮ ತಡೆಗೆ ಸಂಪೂರ್ಣ ಪ್ರಯತ್ನ ಮಾಡಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಇಂದು ವಿಧಾನ ಪರಿಷತ್ನಲ್ಲಿ ತಿಳಿಸಿದರು.
ಸದಸ್ಯ ಭಾರತಿ ಶೆಟ್ಟಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸುವ ಪಡಿತರ ಅಕ್ರಮ ಸಾಗಾಣಿಕೆ ಕಂಡು ಬಂದಲ್ಲಿ ಕೂಡಲೇ ದಾಳಿ ನಡೆಸಿ, ಅಗತ್ಯ ವಸ್ತುಗಳ ಕಾಯ್ದೆ 1955 ರಡಿ ಪ್ರಕರಣ ದಾಖಲಿಸಿ, ಅಕ್ರಮ ಪಡಿತರ ದಾಸ್ತಾನು ಮುಟ್ಟುಗೋಲು ಹಾಕಿಕೊಂಡು, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಮುಟ್ಟುಗೋಲು ದಾಸ್ತಾನನ್ನು ವಿಲೇ ಮಾಡಿ, ವಿಲೇ ಪಡಿಸಿದ ಪಡಿತರ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಲಾಗುತ್ತಿದೆ.
ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದ – ವ್ಯಕ್ತಿಗಳ ವಿರುದ್ಧ ಹಾಗೂ ಈ ಘಟನೆಗಳಿಗೆ ಕಾರಣಕರ್ತರಾದ ಅಧಿಕಾರಿ/ನೌಕರರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸಿ ಆಪಾದನೆಗಳ ಬಗ್ಗೆ ದೋಷಾರೋಪಣೆ ಪಟ್ಟಿಯನ್ನು ಸಂಬಂಧಿಸಿದ ನ್ಯಾಯಾಲಯಗಳಲ್ಲಿ ದಾಖಲಿಸಲಾಗುತ್ತಿದ್ದು, ಕಾನೂನು ರೀತ್ಯ ಕ್ರಮ ಜರುಗಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಏಪ್ರಿಲ್-2023 ರಿಂದ ನವೆಂಬರ್-2023 ರ ಅಂತ್ಯದವರೆಗೂ ಅಗತ್ಯ ವಸ್ತುಗಳ ಕಾಯ್ದೆ 1955 ರಡಿ ಪಡಿತರ ಆಹಾರಧಾನ್ಯ ಕಳ್ಳಸಾಗಾಣಿಕೆಯ ಒಟ್ಟು 251 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 232 ಪ್ರಕರಣಗಳಲ್ಲಿ ಎಫ್.ಐ.ಆರ್ ದಾಖಲಿಸಿದ್ದು, ಒಟ್ಟು 31,32,08,215 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, ಈ ಪ್ರಕರಣಗಳಲ್ಲಿ ಒಟ್ಟು 385 ಆರೋಪಿಗಳನ್ನು ಬಂಧಿಸಿ, 167 ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದರು.