ದೆಹಲಿ :
“ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರದ ಗಮನ ಸೆಳೆಯಲು, ನಮ್ಮ ಪಾಲಿನ ಅನುದಾನದ ಬಗ್ಗೆ ಜನರಿಗೆ ಮನದಟ್ಟು ಮಾಡಲು ರಾಜ್ಯ ಸರ್ಕಾರ ದೆಹಲಿಯಲ್ಲಿ ಹೋರಾಟ ನಡೆಸುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಫೆ.7ರಂದು ರಾಜ್ಯ ಸರ್ಕಾರದ ವತಿಯಿಂದ ನಡೆಯಲಿರುವ ಪ್ರತಿಭಟನೆಯ ಸ್ಥಳ ಜಂತರ್ ಮಂತರ್ ನಲ್ಲಿ ಪರಿಶೀಲನೆ ನಡೆಸಿ, ಸೋಮವಾರ ರಾತ್ರಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.

ಈ ವೇಳೆ ಅವರು ಹೇಳಿದ್ದಿಷ್ಟು;

“ಇಂದು ರಾಜ್ಯ ಸರ್ಕಾರ ನಡೆಸಲಿರುವ ಪ್ರತಿಭಟನಾ ಸ್ಥಳ ಪರಿಶೀಲಿಸಿದ್ದೇನೆ. ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ರಾಜ್ಯ ಸರ್ಕಾರ ನಡೆಸುತ್ತಿರುವ ಹೋರಾಟ ಇದಾಗಿದ್ದು ಇದು ಪಕ್ಷದ ಹೋರಾಟವಲ್ಲ.

ನಮ್ಮ ತೆರಿಗೆ ನಮ್ಮ ಹಕ್ಕು, ನಮ್ಮ ಅನುದಾನ ನಮ್ಮ ಹಕ್ಕು, ನಮ್ಮ ಅಭಿವೃದ್ಧಿ ನಮ್ಮ ಜವಾಬ್ದಾರಿ. ಈ ವಿಚಾರವಾಗಿ ಜನರಿಗೆ ಮನದಟ್ಟು ಮಾಡಬೇಕು. ನಮಗೆ ಪಾಲಿನ ಅನುದಾನ ಕೊಡಿಸುವುದು ನಮ್ಮ ಜವಾಬ್ದಾರಿ. ಜನ ನಮಗೆ ಮತ ಹಾಕಿ ಅಧಿಕಾರಕ್ಕೆ ತಂದಿದ್ದಾರೆ. ನಾವು ಸಮಾಜದ ಋಣ ತೀರಿಸಬೇಕು. ಬಿಜೆಪಿ ಡಬಲ್ ಇಂಜಿನ್ ಸರ್ಕಾರ ನಮಗೆ ನ್ಯಾಯ ಒದಗಿಸಲಿದೆ ಎಂದು ಭಾವಿಸಿದ್ದೆವು.

ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಒಮ್ಮೆ ತುಮಕೂರಿನ ಸಾರ್ವಜನಿಕ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಮಂತ್ರಿಗಳ ಮುಂದೆ ಮನವಿ ಮಾಡಿದ್ದು ಬಿಟ್ಟರೆ ಒಂದು ದಿನ ಕೇಂದ್ರ ಸರ್ಕಾರದ ಜತೆ ರಾಜ್ಯದ ಹಿತದ ಬಗ್ಗೆ ಚರ್ಚೆ ಮಾಡಿಲ್ಲ. ರಾಜ್ಯದಿಂದ ಆಯ್ಕೆಯಾಗಿರುವ 27 ಸಂಸದರು ಒಂದು ದಿನ ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಸಮಸ್ಯೆ ಬಗ್ಗೆ ಚರ್ಚೆ ಮಾಡಲಿಲ್ಲ. ರಾಜ್ಯ ಬರಕ್ಕೆ ತುತ್ತಾಗಿದ್ದರೂ ಪರಿಹಾರ ಕೊಡಲಿಲ್ಲ.

ನಮ್ಮ ಎಲ್ಲಾ ಶಾಸಕರು, ಪರಿಷತ್ ಸದಸ್ಯರು, ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಮೂರ್ನಾಲ್ಕು ಜನ ಮಾತ್ರ ಆರೋಗ್ಯದ ಕಾರಣದಿಂದಾಗಿ ಮನವಿ ಮಾಡಿ ಗೈರಾಗಬಹುದು. ಉಳಿದಂತೆ ಸರ್ಕಾರದ ಜತೆಗೆ ಇರುವ ಪಕ್ಷೇತರ ಶಾಸಕರು ಸೇರಿದಂತೆ ಎಲ್ಲಾ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

*ರಾಜ್ಯದ ಅನ್ಯಾಯದ ಬಗ್ಗೆ ಪ್ರಶ್ನಿಸಲು ಬೊಮ್ಮಾಯಿ ಅವರಿಗೆ ಬಾಯಿಲ್ಲದಿದ್ದರೆ ನಾವು ಪ್ರಶ್ನೆ ಮಾಡುತ್ತೇವೆ:*

ಈ ಪ್ರತಿಭಟನೆ ರಾಜಕೀಯ ಸ್ಟಂಟ್ ಎಂಬ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮಲ್ಲಿ ಯಾರೂ ಸಿನಿಮಾ ನಿರ್ದೇಶಕರು ಹಾಗೂ ನಿರ್ಮಾಪಕರು ಇಲ್ಲ. ನಾನು ಬೊಮ್ಮಾಯಿ ಅವರಿಗೆ ಒಂದು ಸರಳ ಪ್ರಶ್ನೆ ಕೇಳುತ್ತೇನೆ. ಅವರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಘೋಷಣೆ ಮಾಡಿದರು. ಅವರು ಯಾಕೆ ಘೋಷಣೆ ಮಾಡಿದರು? ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 5300 ಕೋಟಿ ಘೋಷಣೆ ಮಾಡಿದ್ದಕ್ಕೆ ಇವರು ತಮ್ಮ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಅಂದಮೇಲೆ ಹಣ ಕೊಡಿಸುವುದು ಅವರ ಜವಾಬ್ದಾರಿ. ರಾಜ್ಯಕ್ಕೆ ಬರಬೇಕಾದ ಹಣ ಕೇಳುವುದು ರಾಜಕೀಯ ಸ್ಟಂಟ್ ಆಗುತ್ತದೆಯೇ? ರಾಜ್ಯದ ಪಾಲನ್ನು ಕೇಳಲು ನಿಮಗೆ ಬಾಯಿ ಇಲ್ಲವಾದರೆ ನಮಗೂ ಇರುವುದಿಲ್ಲವೇ? ಇನ್ನು ಬರದ ವಿಚಾರವಾಗಿ ಕಂದಾಯ ಸಚಿವರು ಹಾಗೂ ಕೃಷಿ ಸಚಿವರು ಕೇಂದ್ರಕ್ಕೆ ಮನವಿ ಮಾಡಿಲ್ಲವೇ? ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿಲ್ಲವೇ? ಸಭೆ ಮಾಡಿ ಪರಿಹಾರ ನೀಡುತ್ತೇವೆ ಎಂದರು. ಆದರೂ ನೀಡಲಿಲ್ಲ. ನಾವು ಅವರ ಪರಿಹಾರ ಮೊತ್ತ ಕಾಯದೆ 35 ಲಕ್ಷ ರೈತರಿಗೆ 2 ಸಾವಿರ ಪರಿಹಾರ ನೀಡಿದ್ದೇವೆ” ಎಂದು ತಿರುಗೇಟು ನೀಡಿದರು.