ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸು ರಸ್ತೆ ಬಳಿಯ ಚರಂಡಿಗೆ ಇಳಿದ ಘಟನೆ ಕೊಲ್ಲೂರು ಸಮೀಪದ ನಾಗೋಡಿ ಘಾಟಿಯಲ್ಲಿ ನಡೆದಿದೆ.
ಘಾಟಿಯಲ್ಲಿ ಈ ಬಾರಿ ವ್ಯಾಪಕ ಮಳೆ ಸುರಿದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿ ಬಸ್ಸು ಚರಂಡಿಗೆ ಇಳಿದಿದೆ. ಶಾಲಾ-ಕಾಲೇಜಿಗೆ ತೆರಳುತ್ತಿದ್ದ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಖಾಸಗಿ ಬಸ್ ಶಿವಮೊಗ್ಗದಿಂದ ಕೊಲ್ಲೂರು ಕಡೆ ಚಲಿಸುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಮಳೆ ಹಿನ್ನಲೆಯಲ್ಲಿ ಶಾಲೆಗಳಿಗೆ ಸತತ ರಜೆ ಇದ್ದ ಕಾರಣ ವಿದ್ಯಾರ್ಥಿಗಳು ತಮ್ಮ ಊರಿಗೆ ತೆರಳಿದ್ದರು. ಇಂದು ಶಾಲಾ-ಕಾಲೇಜಿಗೆ ವಾಪಸಾಗುವ ವೇಳೆ ಬಸ್ ತುಸು ಅವಘಡಕ್ಕೆ ತುತ್ತಾಗಿದೆ. ಕೊಲ್ಲೂರು ಪದವಿ ಪೂರ್ವ ಕಾಲೇಜಿನ 10 ಮತ್ತು ಕೊಲ್ಲೂರು ಪ್ರೌಢಶಾಲೆಯ ಏಳು ವಿದ್ಯಾರ್ಥಿಗಳು ಇದ್ದರು ಎಂದು ತಿಳಿದುಬಂದಿದೆ. ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯವಾಗಿದ್ದಾರೆ.