ಪುರಿ ಜಗದ್ಗುರುಗಳೂ ಸೇರಿದಂತೆ ಕೆಲವರು ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ/ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಗಳಿಗೆ ಹೋಗದಿರಲು ನಿರ್ಧರಿಸಿದ್ದಾರೆ. ಅದು ಅವರ ಇಷ್ಟ. ಆದರೆ ಅದಕ್ಕೆ ಅವರು ನೀಡಿರುವ ಕಾರಣಗಳು ಸಮರ್ಥನೀಯವಲ್ಲ. ಹಿಂದೂ ಸನಾತನ ಧರ್ಮದಲ್ಲಿ ಅಂತಹ ಸಂಕುಚಿತ ಭಾವನೆಗಳಿಗೆ ಎಡೆ ಇಲ್ಲ, ಇರಬಾರದು‌ಕೂಡ. ಈ
ಜಗದ್ಗುರುಗಳಾದವರು ಒಂದು ಮಾತನ್ನು ತಿಳಿದುಕೊಳ್ಳಬೇಕು. ಅವರಿಗಿಂತ ಹಿಂದೂ ಧರ್ಮ ದೊಡ್ಡದು. ಅವರ ಜಗದ್ಗುರು ಪೀಠಕ್ಕಾಗಲಿ, ಅವರಿಗಾಗಲಿ ಮಹತ್ವವಿರುವುದು ಅವರು ಹಿಂದೂ ಧರ್ಮದಲ್ಲಿದ್ದಾರೆನ್ನುವುದಕ್ಕಾಗಿ. ಅದು ಅವರ ವೈಯಕ್ತಿಕ ಪೀಠವಲ್ಲ. ಅದು ಹಿಂದೂ ಧರ್ಮದ ಪೀಠ. ಹಿಂದೂ ಸನಾತನ ಧರ್ಮಕ್ಕೆ ಗೌರವವಿರುವುದು ಅದರ ಮೂಲತತ್ವ ಗಳಾದ ಲೋಕಾ: ಸಮಸ್ತಾ ಸುಖಿನೋ ಭವಂತು/ ಸರ್ವೇ ಜನಾ: ಸುಖಿನೋ ಭವಂತು ಎನ್ನುವುದಕ್ಕಾಗಿ. ಅಲ್ಲಿ ಸಂಕುಚಿತ ಜಾತಿಧರ್ಮಗಳ ಭಾವನೆಗೆ ಸ್ಥಾನವಿಲ್ಲ. ಇರಬಾರದು.

ರಾಮ ಮಂದಿರ ಇಂದು ರೂಪುಗೊಳ್ಳಲು ಕಾರಣರಾದವರು ನರೇಂದ್ರ ಮೋದಿಯವರು. ಅವರು ಈ ದೇಶದ ೧೫೦ ಕೋಟಿ ಜನರ ಪ್ರತಿನಿಧಿ. ಅವರು ಮುಟ್ಟಿದಾಕ್ಷಣ ರಾಮ ಅಪವಿತ್ರನಾಗುವುದಿಲ್ಲ. ಅದು ನಮಗೆ ಹೆಮ್ಮೆಯ ವಿಷಯವಾಗಬೇಕು. ದೇಶವಿದೇಶಗಳ ಕೋಟಿ ಕೋಟಿ ಜನ ಇಂದು ಅಯೋಧ್ಯೆಯತ್ತ ಸಾಗುತ್ತಿದ್ದಾರೆ. ಬಗೆಬಗೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಭ್ರಮಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಸಣ್ಣಪುಟ್ಟ ಕಾರಣಗಳಿಗಾಗಿ ಅಪಸ್ವರವೆತ್ತುವುದು, ಅಬದ್ಧ ನುಡಿಗಳನ್ನಾಡುವುದು ಯಾರಿಗೂ ಶೋಭಿಸುವಂತಹದಲ್ಲ. ಕಾಂಗ್ರೆಸ್ ಕಮ್ಯುನಿಸ್ಟ್ ಪಕ್ಷದವರಿಗೆ ಅವರದೇ ಆದ ಅದೊಂದು ರಾಜಕೀಯ ಉದ್ದೇಶವಿರಬಹುದು. ಆದರೆ ಹಿಂದೂ ಧರ್ಮಪೀಠದ ಮೇಲೆ ಕುಳಿತಿರುವವರು ಅಂತಹ ಮನಸ್ಥಿತಿ ಹೊಂದಿರಬಾರದು. ಮೊದಲೇ ಹಿಂದೂ ಧರ್ಮ ಅಪಾಯದ ಅಂಚಿನಲ್ಲಿದೆ. ಇಂತಹ ಸಮಯದಲ್ಲಿ ನಮ್ಮ ಒಗ್ಗಟ್ಟನ್ನು ನಾವು ಕಾದುಕೊಳ್ಳಬೇಕು ಮತ್ತು ಅದಕ್ಕೆ ಮಠ ಪೀಠಾಧೀಶರ ಬೆಂಬಲ ಅಗತ್ಯ. ಯಾರೇ ಇರಲಿ, ಈ ಕೆಲವು ಜಗದ್ಗುರುಗಳ ನಿಲುವನ್ನು ಸರ್ವಥಾ ಒಪ್ಪಲು ಸಾಧ್ಯವಿಲ್ಲ. ಅವರಿಗಿಂತ ನಮಗೆ ಹಿಂದೂ ಧರ್ಮ ದೊಡ್ಡದು. ಹಿಂದೂ ಧರ್ಮ ಉಳಿದರೆ ಅವರ ಪೀಠ ಉಳಿಯುತ್ತದೆನ್ನುವುದನ್ನು ಅವರು ನೆನಪಿಡುವುದು ಉತ್ತಮ. ಇಡೀ ರಾಷ್ಟ್ರ ಇಂದು ಒಂದಾಗಿ ರಾಮ ಮಂದಿರದ ನಿರ್ಮಾಣ ಮತ್ತು ರಾಮ ವಿಗ್ರಹದ ಪ್ರತಿಷ್ಠಾಪನೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದೆ. ಇದು ನಾವೆಲ್ಲ ಹೆಮ್ಮೆ ಪಡಬೇಕಾದ ಸಂದರ್ಭ.

ಹರಿಹರಪುರ ಸ್ವಾಮೀಜಿ ಸ್ಪಷ್ಟನೆ :

ಹರಿಹರಪುರ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ. ಇದೇ ತಿಂಗಳ 22 ರಂದು ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಕಾರ್ಯ ಇದೆ. ಈ ಶುಭ ಸಂದರ್ಭದಲ್ಲಿ ನಾವೆಲ್ಲರೂ ಇದ್ದೇವೆ. ಶಂಕರಗುರು ಪರಂಪರೆಯ ಮಠಗಳಿಗೆ ಅಸಮಾಧಾನವಿದೆ ಎಂಬ ವದಂತಿಗಳು ಕೇಳಿ ಬರುತ್ತಿವೆ. ಇದಕ್ಕೆ ನಾವು ಸ್ಪಷ್ಟನೆಯನ್ನು ನೀಡುತ್ತಿದ್ದೇವೆ ಎಂದು ಹೇಳಿದರು. ಶಂಕರ ಗುರುಪರಂಪರೆಗೂ ಮತ್ತು ಅಯೋಧ್ಯೆ ರಾಮಮಂದಿರಕ್ಕೂ ಏನು ಸಂಬಂಧ? ಇದನ್ನ ತಿಳಿದುಕೊಳ್ಳುವ ಮೊದಲು, ಭಗವಾನ್ ಶ್ರೀರಾಮನಿಗೂ ಶಂಕರ ಪರಂಪರೆಗೂ ಏನು ಸಂಬಂಧ ಎಂದು ತಿಳಿದುಕೊಳ್ಳಬೇಕು. ಶಂಕರ ಗುರುಪರಂಪರೆಯ ಆದಿಪುರುಷರು ಶಂಕರರು. ಅದೈತ ಸಿದ್ದಾಂತದ ಮೂಲಕ ಪರಮಾತ್ಮನನ್ನು ತತ್ವ ರೂಪದಲ್ಲಿ ಆರಾಧಿಸುವ ಪದ್ಧತಿಯನ್ನು ಜಗತ್ತಿಗೆ ತಿಳಿಸಿದ್ದಾರೆ. ಹರಿಹರ ಪರಬ್ರಹ್ಮನ
ಅತ್ಯಂತ ಸಮಾನವಾದ ರೂಪಗಳು. ಹರಿಹರನನ್ನು ಶ್ರದ್ಧಾ ಭಕ್ತಿಯಯಿಂದ ಆರಾಧಿಸುವ ಪರಂಪರೆ ಶಂಕರ ಪರಂಪರೆ ಎಂದರು.

ಹರಿ ಅಂದರೇ ಮಹಾವಿಷ್ಣು, ವಿಷ್ಣುವಿನ 7ನೇ ಅವತಾರವೇ ಶ್ರೀರಾಮ. ಶಂಕರರು ಶ್ರೀ ರಾಮನ ಪರಮ ಭಕ್ತರಾಗಿದ್ದರು. ಶಂಕರರು ರಾಮನ ಬಗ್ಗೆ ಸ್ತೋತ್ರಗಳನ್ನು ರಚಿಸಿ ಶ್ರೀರಾಮನಿಗೆ ಸಮರ್ಪಣೆ ಮಾಡಿದ್ದಾರೆ. ಶಂಕರರು ಸ್ಥಾಪಿಸಿದ ಪೀಠಗಳಲ್ಲಿ ಶ್ರೀರಾಮನನ್ನು ನಿರಂತರವಾಗಿ ಆರಾಧಿಸುವಂತೆ ಆದೇಶಿಸಿದ್ದಾರೆ. ಶಂಕರ ಪರಂಪರೆಯ ಎಲ್ಲಾ ಮಠಗಳು ಶ್ರೀರಾಮನನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಶ್ರೀರಾಮ ಮಂದಿರ ಅನ್ನೋದು ಎಲ್ಲಾ ಮಠಗಳಲ್ಲೂ ಇದೆ ಎಂದು ತಿಳಿಸಿದರು.

ಶ್ರೀರಾಮ ಭಾರತೀಯ ಸಂಸ್ಕೃತಿಗೆ ಸೇರಿದ ದೇವರು. ನಮ್ಮ ದೇಶದ ಹೆಗ್ಗುರುತು ಭಗವಾನ್ ಶ್ರೀ ರಾಮ. ಈ ಪವಿತ್ರ ದೇಶದ ಅಸ್ಮಿತೆ. ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರ ಹುಟ್ಟಿದ್ದಾನೆ. ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ದೇವಾಲಯ ಇತ್ತು. ಆದರೆ, ವಿದೇಶಿ ಆಕ್ರಮಣಕಾರರಿಂದ ನಾಶವಾಗಿತ್ತು. ಭಾರತೀಯರ 500 ವರ್ಷಗಳ ಹೋರಾಟದ ಫಲವಾಗಿ ಮಂದಿರ ನಿರ್ಮಾಣವಾಗುತ್ತಿದೆ. ಇದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರ. ಶ್ರೀರಾಮನ ಲೋಕಾರ್ಪಣೆ ಎಂಬುದು ಸಮಸ್ತ ಭಾರತೀಯರ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.

ಶ್ರೀರಾಮನ ಲೋಕಾರ್ಪಣೆ ವಿಚಾರ ಸಮಸ್ತ, ಮತ, ಧರ್ಮ ಜಾತಿ, ಮತ, ಪಂಥ, ಸಿದ್ಧಾಂತ ಎಲ್ಲರಲ್ಲೂ ಸಂತೋಷ ಮೂಡಿಸಿದೆ. ಗುರು ಪರಂಪರೆಗೂ ಅಸಮಾಧಾನವಿಲ್ಲ, ವಿಶೇಷವಾಗಿ ಶಂಕರ ಗುರು ಪರಂಪರೆಯ ಮಠಗಳಿಗೆ ಕಿಂಚಿತ್ತೂ ಬಿನ್ನಾಭಿಪ್ರಾಯವಿಲ್ಲ. ಒಂದು ವೇಳೆ ಯಾರಾದರೂ ಭಿನ್ನಾಭಿಪ್ರಾಯ ತಿಳಿಸಿದರೆ ಕೇವಲ ಅವರ ವೈಯುಕ್ತಿಕ ಅಭಿಪ್ರಾಯವಾಗಿರುತ್ತದೆ ಎಂದು ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಪೀಠಂ, ಶ್ರೀಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಸ್ಪಷ್ಟಪಡಿಸಿದರು. ಅಯೋಧ್ಯೆಯಲ್ಲಿ ನಿರ್ಮಾಣವಾಗಿರು ಭವ್ಯ ರಾಮಮಂದಿರ ಉದ್ಘಾಟನೆಗೆ ಶಂಕರಾಚಾರ್ಯರು ಸ್ಥಾಪಿಸಿರುವ ನಾಲ್ಕು ಪೀಠಗಳು ವಿರೋಧ ವ್ಯಕ್ತಪಡಿಸಿವೆ ಎಂದು ಕರ್ನಾಟಕದ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದರು.