ಅಯೋಧ್ಯೆ: ರಾಮಮಂದಿರದಲ್ಲಿ ಏ.17ರ ರಾಮನವಮಿ ದಿನ ಬಾಲರಾಮನ ಮೂರ್ತಿಯ ಮೇಲೆ ಸೂರ್ಯರಶ್ಮಿಯ ಕಿರಣ ಬೀಳುವ ಪ್ರಯೋಗವನ್ನು ರೂರ್ಕಿಯ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ ತಜ್ಞರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ.

ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್‌ ಆಸ್ಟ್ರೋಫಿಸಿಕ್ಸ್‌ ತಜ್ಞರು ಈ ತಂತ್ರಜ್ಞಾನ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಏ.17ರ ರಾಮನವಮಿಯಂದು ಸಹ ಬಾಲರಾಮನ ಮೂರ್ತಿಯ ಮೇಲೆ ಮೂರು ಕನ್ನಡಿಗಳ ಸಹಾಯದಿಂದ ಎರಡೂವರೆ ನಿಮಿಷಗಳ ಕಾಲ ಸೂರ್ಯರಶ್ಮಿ ಬೀಳಲಿದೆ. ಅದನ್ನು ದೂರದರ್ಶನ ನೇರಪ್ರಸಾರ ಮಾಡಲಿದ್ದು, ಜಗತ್ತಿನಾದ್ಯಂತ ಜನರು ಈ ತಂತ್ರಜ್ಞಾನ ಕೌತುಕವನ್ನು ಕಣ್ತುಂಬಿಕೊಳ್ಳಬಹುದಾಗಿದೆ ಎಂದು ಟ್ರಸ್ಟ್‌ ಪ್ರಕಟಿಸಿದೆ.