ಶನಿವಾರ ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸಿದ ನಂತರ ಭಾರತೀಯ ಕ್ರಿಕೆಟ್ ತಂಡ T20 ವಿಶ್ವಕಪ್ 2024 ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಭಾರತದ 11 ವರ್ಷಗಳ ಕಾಯುವಿಕೆಯ ನಂತರ ರೋಹಿತ್ ಶರ್ಮಾ ನಾಯಕತ್ವದಡಿ ಭಾರತದ ತಂಡವು ತನ್ನ ಎರಡನೇ ಟಿ 20 ವಿಶ್ವಕಪ್‌ ಪ್ರಶಸ್ತಿ ಗೆದ್ದುಕೊಂಡಿತು. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ರೋಹಿತ್ ಶರ್ಮಾ ನಂತರ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 176 ರನ್ ಗಳಿಸಿತು. ಉತ್ತರವಾಗಿ ದಕ್ಷಿಣ ಆಫ್ರಿಕಾ 169/8 ಗಳಿಸಿ ಏಳು ರನ್‌ಗಳಿಂದ ಪರಾಭವಗೊಂಡಿತು.

T20 ವಿಶ್ವಕಪ್ ವಿಜಯದ ನಂತರ ಭಾರತಕ್ಕೆ ಬಂದ ಬಹುಮಾನದ ಮೊತ್ತ….
2024 ರ T20 ವಿಶ್ವಕಪ್ ಚಾಂಪಿಯನ್ ಟೀಮ್ ಇಂಡಿಯಾ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನಿಂದ $2.45 ಮಿಲಿಯನ್ (ಸುಮಾರು 20.42 ಕೋಟಿ ರೂ. ) ಮೊತ್ತವನ್ನು ಸ್ವೀಕರಿಸಿದೆ. 2024 ರ T20 ವಿಶ್ವಕಪ್ ರನ್ನರ್-ಅಪ್ ದಕ್ಷಿಣ ಆಫ್ರಿಕಾ $ 1.28 ಮಿಲಿಯನ್ (ಸುಮಾರು 10.67 ಕೋಟಿ ರೂ.) ಮೊತ್ತವನ್ನು ಪಡೆಯಿತು. ಸೆಮಿಫೈನಲ್‌ನಲ್ಲಿ ಸೋತ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಲಾ $787,500 (INR 6.56 ಕೋಟಿ ಅಂದಾಜು) ಪಡೆದುಕೊಂಡವು.
ಈ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಹಲವು ಆಟಗಾರರು ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ.

T20 ವಿಶ್ವಕಪ್ 2024 ಪ್ರಶಸ್ತಿ ವಿಜೇತರ ಪಟ್ಟಿ:
ವಿಶ್ವಕಪ್ 2024 ಚಾಂಪಿಯನ್‌- ಭಾರತ
ರನ್ನರ್ ಅಪ್- ದಕ್ಷಿಣ ಆಫ್ರಿಕಾ
ಪಂದ್ಯಾವಳಿಯ ಆಟಗಾರ – ಜಸ್ಪ್ರೀತ್ ಬುಮ್ರಾ (4.17 ಎಕಾನಮಿ ರೇಟ್​ನಲ್ಲಿ 15 ವಿಕೆಟ್)
ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ – ವಿರಾಟ್ ಕೊಹ್ಲಿ (59 ಎಸೆತಗಳಲ್ಲಿ 76 ರನ್)
ಫೈನಲ್‌ನ ಸ್ಮಾರ್ಟ್ ಕ್ಯಾಚ್ – ಸೂರ್ಯಕುಮಾರ ಯಾದವ್
ಅತಿ ಹೆಚ್ಚು ರನ್ – ರಹಮಾನುಲ್ಲಾ ಗುರ್ಬಾಝ್ (281 ರನ್)
ಅತಿ ಹೆಚ್ಚು ವಿಕೆಟ್‌ಗಳು – ಭಾರತದ ಅರ್ಷದೀಪ್ ಸಿಂಗ್ ಮತ್ತು ಫಝಲ್ಹಕ್ ಫಾರೂಕಿ (ತಲಾ 17 ವಿಕೆಟ್)
ಗರಿಷ್ಠ ಸ್ಕೋರ್ – ನಿಕೋಲಸ್ ಪೂರನ್ (98 ರನ್ vs ಅಫ್ಘಾನಿಸ್ತಾನ್)
ಅತ್ಯುತ್ತಮ ಬೌಲಿಂಗ್- ಫಝಲ್ಹಕ್ ಫಾರೂಕಿ (9/5 vs ಉಗಾಂಡ)
ಅತ್ಯಧಿಕ ಸ್ಟ್ರೈಕ್ ರೇಟ್ – ಶಾಯ್ ಹೋಪ್ (187.71)
ಅತ್ಯುತ್ತಮ ಎಕಾನಮಿ ರೇಟ್ – ಟಿಮ್ ಸೌಥಿ (3.00)
ಅತ್ಯಧಿಕ ಸಿಕ್ಸರ್‌ – ನಿಕೋಲಸ್ ಪೂರನ್ (17 ಸಿಕ್ಸ್)
ಅತ್ಯಧಿಕ 50+ ಸ್ಕೋರ್‌- ರೋಹಿತ್ ಶರ್ಮಾ ಮತ್ತು ರಹಮಾನುಲ್ಲಾ ಗುರ್ಬಾಝ್ (ತಲಾ 3)
ಅತೀ ಹೆಚ್ಚು ಕ್ಯಾಚ್‌- ಐಡೆನ್ ಮಾರ್ಕ್ರಾಮ್ (8 ಕ್ಯಾಚ್‌ಗಳು)

ಬಾರ್ಬಡೋಸ್ ಪಿಚ್‌ ನ ಮಣ್ಣು ತಿಂದ ನಾಯಕ ರೋಹಿತ್ ಶರ್ಮಾ:
ಭಾರತದ ನಾಯಕ ರೋಹಿತ್ ಶರ್ಮಾ ಶನಿವಾರ ವಿಶಿಷ್ಟ ರೀತಿಯಲ್ಲಿ ತಂಡದ T20 ವಿಶ್ವಕಪ್ 2024 ಗೆಲುವನ್ನು ಆಚರಿಸಿಕೊಂಡಿದ್ದಾರೆ. ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ನಲ್ಲಿ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಜಯಸಾಧಿಸಿ T20 ವಿಶ್ವಕಪ್ 2024 ರೋಹಿತ್ ನೇತೃತ್ವದ ಟೀಮ್‌ ಏಳು ರನ್‌ಗಳಿಂದ ಜಯಸಾಧಿಸಿತು. ಐಸಿಸಿ ಪ್ರಶಸ್ತಿಗಾಗಿ 11 ವರ್ಷಗಳ ಬರವನ್ನು ಇದು ಕೊನೆಗೊಳಿಸಿತು. ಭಾರತೀಯ ತಂಡದಲ್ಲಿ ಸಂತೋಷದ ಕಣ್ಣೀರಿನ ನಡುವೆ, ರೋಹಿತ್ ಅವರು ನಾಯಕನಾಗಿ ತಮ್ಮ ಮೊದಲ ಐಸಿಸಿ (ICC) ಪ್ರಶಸ್ತಿಯನ್ನು ಗಳಿಸಿದ ಪಿಚ್‌ನಿಂದ ಸ್ವಲ್ಪ ಮಣ್ಣನ್ನು ತಿನ್ನುವ ಮೂಲಕ ಈ ಕ್ಷಣವನ್ನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿಕೊಂಡರು.
ಐಸಿಸಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಭಾರತ ಮತ್ತು ದಕ್ಷಿಣ ಆಫ್ರಿಕಾ ಫೈನಲ್‌ನಲ್ಲಿ ಸ್ಪರ್ಧಿಸಿದ್ದ ಬಾರ್ಬಡೋಸ್ ಪಿಚ್‌ನಿಂದ ರೋಹಿತ್ ಶರ್ಮಾ ಮಣ್ಣು ತಿನ್ನುತ್ತಿರುವುದನ್ನು ಸೆರೆಹಿಡಿಯಲಾಗಿದೆ.

 

ಪಂದ್ಯ ಮುಗಿದ ನಂತರ, ರೋಹಿತ್ ಶರ್ಮಾ ಅವರು ಪತ್ರಿಕಾಗೋಷ್ಠಿಯಲ್ಲಿ ಟಿ 20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.”ಇದು ನನ್ನ ಕೊನೆಯ ಪಂದ್ಯವೂ ಆಗಿತ್ತು” ಎಂದು ನಾಯಕ ತಮ್ಮ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು, ಇದಕ್ಕೂ ಮೊದಲು ವಿರಾಟ್ ಕೊಹ್ಲಿಯೂ ವಿಶ್ವಕಪ್‌ ಗೆಲುವಿನ ವೇಳೆಯೇ ಟಿ 20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.
ರೋಹಿತ್ ತನ್ನ ವೃತ್ತಿಜೀವನದ ಆರಂಭದಿಂದಲೂ T20 ಸ್ವರೂಪದಲ್ಲಿ ಆಡಿದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಹಾಗೂ ವಿದಾಯ ಹೇಳಲು ಇದಕ್ಕಿಂತ ಉತ್ತಮವಾದ ಕ್ಷಣ ಇರಲಾರದು ಎಂದು ಒತ್ತಿ ಹೇಳಿದರು. ಅವರು ತಮ್ಮ T20 ವೃತ್ತಿಜೀವನದ ಪ್ರತಿ ಕ್ಷಣದ ಬಗ್ಗೆಯೂ ತಮಗಿರುವ ಪ್ರೀತಿಯನ್ನು ಹಂಚಿಕೊಂಡರು. ಕಪ್ ಗೆಲ್ಲುವ ಅವರ ಅಂತಿಮ ಗುರಿಯನ್ನು ಒತ್ತಿಹೇಳಿದರು.

ಗೆಲುವಿನೊಂದಿಗೆ ತಮ್ಮ ಕೋಚಿಂಗ್ ಅವಧಿಯನ್ನು ಕೊನೆಗೊಳಿಸಿದ ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗೆ ರೋಹಿತ್ ಕೃತಜ್ಞತೆ ಸಲ್ಲಿಸಿದರು. ಕಳೆದ ಎರಡು ಮೂರು ದಶಕಗಳಲ್ಲಿ ಭಾರತೀಯ ಕ್ರಿಕೆಟ್‌ಗೆ ಅವರ ಅಪಾರ ಕೊಡುಗೆಗಳನ್ನು ಎತ್ತಿ ತೋರಿಸಿದರು. ಟಿ 20 ವಿಶ್ವಕಪ್ ಗೆದ್ದಿರುವುದು ದ್ರಾವಿಡ್ ಅವರ ಮಹತ್ವದ ಸಾಧನೆಯಾಗಿದೆ ಎಂದು ಅವರು ವಿಶ್ಲೇಷಿಸಿದರು.
“ಕಳೆದ 20, 25 ವರ್ಷಗಳಿಂದ ಅವರು ಭಾರತೀಯ ಕ್ರಿಕೆಟ್‌ಗಾಗಿ ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರಿಗೆ ವಿಶ್ವಕಪ್‌ ಗೆಲುವು ಮಾತ್ರ ಉಳಿದಿತ್ತು. ನಾವು ಅವರಿಗಾಗಿ ಇದನ್ನು ಸಾಧಿಸಿದ್ದರಿಂದ ಇಡೀ ತಂಡದ ಪರವಾಗಿ ನನಗೆ ತುಂಬಾ ಸಂತೋಷವಾಗಿದೆ” ಎಂದು ರೋಹಿತ್ ಹೇಳಿದರು.
ರೋಹಿತ್ ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಅವರ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.