ದುಬೈ:
ಇದೇ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಬಿಡುಗಡೆ ಮಾಡಿದೆ.
ಟೂರ್ನಿಯು ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದಲ್ಲಿ ಆಯೋಜನೆಗೊಳ್ಳಲಿದ್ದು, ಜೂನ್‌ 1ರಂದು ಟಿ20 ವಿಶ್ವಕಪ್ ಉದ್ಘಾಟನಾ ಪಂದ್ಯ ನಡೆಯಲಿದೆ.

ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಅಮೆರಿಕ ಹಾಗೂ ಕೆನಡಾ ಮುಖಾಮುಖಿಯಾಗಲಿವೆ.
ಜೂನ್‌ 5ರಂದು ಐರ್ಲೆಂಡ್‌ ವಿರುದ್ಧ ಭಾರತ ತನ್ನ ಅಭಿಯಾನ ಆರಂಭಿಸಲಿದ್ದು, ಜೂನ್‌ 9ರಂದು ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್‌ ಪಂದ್ಯ ಆಡಲಿದೆ.
ಈ ಎರಡೂ ಪಂದ್ಯಗಳು ನ್ಯೂಯಾರ್ಕ್‌ನಲ್ಲಿ ನಡೆಯಲಿವೆ.

ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಪಾಲ್ಗೊಳ್ಳಲಿದ್ದು, ತಲಾ ಐದು ತಂಡಗಳ ನಾಲ್ಕು ಗುಂಪುಗಳನ್ನು ಮಾಡಲಾಗಿದೆ. ಈ ಹಂತದಲ್ಲಿ ಪ್ರತಿ ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡಲಿವೆ. ಭಾರತ, ಪಾಕಿಸ್ತಾನ, ಐರ್ಲೆಂಡ್‌, ಅಮೆರಿಕ ಮತ್ತು ಕೆನಡಾ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿವೆ.

ಹಾಲಿ ಚಾಂಪಿಯನ್ ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್ ಮತ್ತು ಒಮನ್ ತಂಡಗಳು ತಂಡ ಬಿ ಗುಂಪಿನಲ್ಲಿವೆ. ಜೂನ್ 8 ರಂದು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಮೆಗಾ ಹಣಾಹಣಿ ನಡೆಯಲಿದೆ.
ಮೆಗಾ ಐಸಿಸಿ ಟಿ20 ವಿಶ್ವಕಪ್‌ನಲ್ಲಿ 55 ಪಂದ್ಯಗಳು ನಡೆಯಲಿದ್ದು, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ‘ಸೂಪರ್-8’ ಹಂತ ಪ್ರವೇಶಿಸಲಿವೆ. ಎಂಟು ತಂಡಗಳನ್ನು ಮತ್ತೆ ಎರಡು ಗುಂಪುಗಳಲ್ಲಿ ಆಡಿಸಲಾಗುತ್ತದೆ. ಎರಡೂ ಗುಂಪಿನಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕಾಣಿಸಿಕೊಳ್ಳುವ ತಂಡಗಳಿಗೆ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಫೈನಲ್‌ ಪಂದ್ಯವು ಜೂನ್‌ 29ರಂದು ನಡೆಯಲಿದೆ.

ಗುಂಪು ಹಂತದಲ್ಲಿ ಭಾರತದ ಪಂದ್ಯಗಳು….
ಭಾರತ vs ಐರ್ಲೆಂಡ್: ಜೂನ್‌ 5 -ನ್ಯೂಯಾರ್ಕ್‌
ಭಾರತ vs ಪಾಕಿಸ್ತಾನ: ಜೂನ್‌ 9-ನ್ಯೂಯಾರ್ಕ್‌
ಭಾರತ vs ಅಮೆರಿಕ : ಜೂನ್‌ 12 -ನ್ಯೂಯಾರ್ಕ್‌
04.ಭಾರತ vs ಕೆನಡಾ: ಜೂನ್‌ 15-ಫ್ಲೋರಿಡಾ