ಬೆಳಗಾವಿ : ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಹಣಕಾಸು ನೆರವು ಬಗ್ಗೆ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ಇವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಮಾತನಾಡುತ್ತಾರೆ. ಪ್ರಧಾನಿ ಮೋದಿ ಬಗ್ಗೆ ಮಾತನಾಡಿದರೆ ತಾವು ದೊಡ್ಡ ನಾಯಕರಾಗುತ್ತೇವೆ ಎಂಬ ಭ್ರಮೆ ಸಿದ್ದರಾಮಯ್ಯ ಅವರಿಗಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬ ಕುರಿತು ಮುಖ್ಯಮಂತ್ರಿಯಾಗಿ ಅವರೇ ಯೋಚಿಸಬೇಕು. ಅತ್ಯಂತ ಸುಳ್ಳು ಹೇಳುವ ಪ್ರಧಾನಿ ಮೋದಿ ಎಂಬ ಸಿದ್ದರಾಮಯ್ಯ ಅವರ ಟೀಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಅವರು, ಈ ಮಾತಿಗೆ ನನಗೆ ನಗಬೇಕೋ ಅಳಬೇಕೋ ಗೊತ್ತಾಗುವುದಿಲ್ಲ. ಮೋದಿ ಅವರ ಕುರಿತು ಹಗುರವಾಗಿ ಮಾತನಾಡಿದರೆ ದೊಡ್ಡವರಾಗುತ್ತೇವೆ ಎಂಬ ಭಾವನೆ ಇದ್ದರೆ ಅದು ಖಂಡಿತ ಸಾಧ್ಯವಿಲ್ಲ. ಇಂತಹ ಮಾತು ಕಡಿಮೆ ಮಾಡಿ, ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ತರುವಂತೆ ನಡೆದುಕೊಳ್ಳಿ ಎಂದು ಅವರು ಹೇಳಿದರು.

ಸಚಿವ ಶಿವರಾಜ ತಂಗಡಗಿ ಅವರು ಮೋದಿ ಹೆಸರು ಹೇಳಿ ಮತ ಕೇಳಿದರೆ ಕಪಾಳಮೋಕ್ಷ ಮಾಡಿ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, ತಂಗಡಗಿಗೆ ಇದು ಶೋಭೆ ತರುವ ಮಾತಲ್ಲ. ಕಾಂಗ್ರೆಸ್ಸಿಗೂ ಶೋಭೆ ತರುವುದಿಲ್ಲ. ಇದು ಅತಿರೇಕದ ಪರಮಾವಧಿಯಾಗಿದೆ. ಹಗುರವಾದ ಮಾತು ಆಡಿದವರ ಮೇಲೆ ಪಕ್ಷ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪರ್ಧಿಸುವುದು ನಿಶ್ಚಯವಾಗಿದೆ. ಹಾಲಿ ಸಂಸದೆ ಸುಮಲತಾ ಅವರಿಗೆ ಬೇರೆ ಅವಕಾಶ ಇದೆ. ಸಮಾಧಾನದಿಂದ ಇದ್ದರೆ ಮುಂದೆ ಸೂಕ್ತ ಸ್ಥಾನಮಾನ ಸಿಗಲಿದೆ. ದೆಹಲಿಯವರೆ ಕರೆದು ಅವರ ಜೊತೆ ಮಾತನಾಡಲಿದ್ದಾರೆ ಎಂದು ಹೇಳಿದರು.

ಜಗದೀಶ್ ಶೆಟ್ಟರ್ ಅವರನ್ನು ಬಹುದೊಡ್ಡ ಅಂತರದಿಂದ ಗೆಲ್ಲಿಸುವ ಭರವಸೆಯನ್ನು ಬೆಳಗಾವಿಯ ನಾಯಕರೆಲ್ಲ ನೀಡಿದ್ದಾರೆ. ನನಗೂ ವಿಶ್ವಾಸ ಇದ್ದು ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಬಿಜೆಪಿಗೆ ಜಯ ನಿಶ್ಚಿತ. ಈ ಸಲ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟ ಗೆಲ್ಲಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದರು.