ದೆಹಲಿ:

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಮಾಜಿ ಮಿತ್ರ ಪಕ್ಷಗಳನ್ನು ಒಂದೊಂದಾಗಿ ಸೆಳೆದುಕೊಳ್ಳುತ್ತಿದೆ. ದೇಶದ ಕೆಲ ರಾಜ್ಯಗಳಲ್ಲಿ ಈ ಬೆಳವಣಿಗೆ ಈಗಾಗಲೇ ನಡೆದಿದೆ. ಇದೀಗ ದಕ್ಷಿಣದ ದೊಡ್ಡ ರಾಜ್ಯವಾಗಿರುವ ಆಂಧ್ರಪ್ರದೇಶದಲ್ಲಿ ಬಿಜೆಪಿ ತನ್ನ ಒಂದು ಕಾಲದ ಮಿತ್ರ ಪಕ್ಷ ತೆಲುಗು ದೇಶಂ ಜೊತೆ ಮೈತ್ರಿಗೆ ಮುಂದಾಗಿದೆ.

ತೆಲುಗು ದೇಶಂ ಪಕ್ಷದ(ಟಿಡಿಪಿ) ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ.

ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಏಕಕಾಲಕ್ಕೆ ನಡೆಯಲಿದ್ದು, ಈ ಭೇಟಿ ನಾಯ್ಡು ಅವರು ಮತ್ತೆ ಎನ್‌ಡಿಎಗೆ ಜೊತೆ ಕೈಜೋಡಿಸಲಿದ್ದಾರೆಯೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.

ಒಂದು ವೇಳೆ ಎನ್‌ಡಿಎ ಜೊತೆ ಟಿಡಿಪಿ ಮೈತ್ರಿಯಾದರೆ ಪ್ರತಿಪಕ್ಷಗಳೊಂದಿಗೆ ಕೈಜೋಡಿಸಿ ಮತ್ತೆ ಎನ್‌ಡಿಎಗೆ ಮರಳಿದವರ ಸಾಲಿಗೆ ನಾಯ್ಡು ಕೂಡ ಸೇರ್ಪಡೆಯಾಗುತ್ತಾರೆ. ಇತ್ತೀಚೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಎನ್‌ಡಿಎಗೆ ಮರಳಿದ್ದರು.

‘ಬಿಜೆಪಿಯೊಂದಿಗೆ ಕೈಜೋಡಿಸಲು ನಾಯ್ಡು ಅವರು ಉತ್ಸುಕರಾಗಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ನಾಯ್ಡು ಅವರು ಎನ್‌ಡಿಎ ಜೊತೆ ಕೈಜೋಡಿಸಿದರೆ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂಬ ಲೆಕ್ಕಚಾರವೂ ಇದರ ಹಿಂದೆ ಎನ್ನಲಾಗಿದೆ.