ಸೌದಿ ಅರೇಬಿಯಾ ಮತ್ತು ಭಾರತದ ನಡುವಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ವ್ಯಾಪಾರ ಸಂಬಂಧಗಳು ಶತಶತಮಾನಗಳಿಂದ ಇದ್ದೇಇದೆ. ರಾಜತಾಂತ್ರಿಕ ಸಂಬಂಧ ಆರಂಭವಾದದ್ದು ೧೯೪೭ ರ ನಂತರ. ಸೌದಿ ಅರೇಬಿಯಾ ಚೀನಾ ಮತ್ತು ಪಾಕಿಸ್ತಾನದ ಸ್ನೇಹವನ್ನೂ ಹೊಂದಿದೆಯಾದರೂ ಭಾರತದೊಂದಿಗಿನ ಬಾಂಧವ್ಯಕ್ಕೆ ಅದೇನೂ ಅಡ್ಡಿಯಾಗಿಲ್ಲ ಮತ್ತು ಈ ಬಾಂಧವ್ಯ ವೃದ್ಧಿಯಾಗುತ್ತಲೆ ಇದೆ.
ಸೌದಿ ಅರೇಬಿಯಾ ಬಹುದೊಡ್ಡ ಪ್ರಮಾಣದಲ್ಲಿ ವಿದೇಶಿ ವಲಸಿಗ ಕೆಲಸಗಾರರನ್ನು ಹೊಂದಿದೆ. ಅವರಲ್ಲಿ ಅತಿ ದೊಡ್ಡ ವಲಸಿಗರ ಸಮುದಾಯ ಭಾರತದ್ದು. ಗಲ್ಫ ರಾಷ್ಟ್ರಗಳಲ್ಲಿ ಒಟ್ಟು ೩. ೫ ದಶಲಕ್ಷ ಭಾರತೀಯರಿದ್ದರೆ ಸೌದಿ ಅರೇಬಿಯಾದಲ್ಲಿರುವ ಭಾರತೀಯರ ಸಂಖ್ಯೆ ೧. ೫ ದಶಲಕ್ಷದಷ್ಟು. ಇಲ್ಲಿ ಇನ್ನೊಂದು ಅಂಶವನ್ನು ನಾವು ಗಮನಿಸುವಂತಿದೆ. ವಿದೇಶಗಳಲ್ಲಿರುವ ಭಾರತೀಯ ಕೆಲಸಗಾರರಿಂದ ಭಾರತಕ್ಕೆ ಅಂದರೆ ಅವರ ಮನೆಗಳಿಗೆ ಕಳಿಸಲ್ಪಡುವ ಹಣದ ಮೊತ್ತ ೩.೫ ಶತಕೋಟಿ ಡಾಲರುಗಳಷ್ಟು. ಸೌದಿ ಅಭಿವೃದ್ಧಿಗೆ ಭಾರತದ ಕೊಡುಗೆಯೂ ಬಹಳ ದೊಡ್ಡದೇ ಆಗಿದೆ.
೨೦೦೬ ರಲ್ಲಿ ಸೌದಿ ದೊರೆ ಅಬ್ದುಲ್ಲಾ ಭಾರತಕ್ಕೆ ಭೆಟ್ಟಿ ನೀಡಿದಾಗ ” ದಿಲ್ಲಿ ಘೋಷಣೆ” ಗೆ ಸಹಿ ಹಾಕಲಾಯಿತು.೨೦೧೦ ರಲ್ಲಿ ಭಾರತದ ಅಗಿನ ಪ್ರಧಾನಿ ಡಾ. ಮನಮೋಹನಸಿಂಗ್ ಸೌದಿಗೆ ಭೆಟ್ಟಿಯಿತ್ತಾಗ “ರಿಯಾದ್ ಘೋಷಣೆ” ಮಾಡಲಾಯಿತು. ಇದು ದ್ವಿಪಕ್ಷೀಯ ಸಂಬಂದ ವೃದ್ಧಿಗೆ ಹಾದಿ ಮಾಡಿಕೊಟ್ಟಿತು. ೨೦೧೬ ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಿಯಾದ್ ಗೆ ಭೆಟ್ಟಿಯಿತ್ತಾಗ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಯಿತು. ೨೦೧೯ ರಲ್ಲಿ ಕಿಂಗ್ ಮೊಹ್ಮದ್ ಅವರು ಭಾರತಕ್ಕೆ ಆಗಮಿಸಿದಾಗ ೧೦೦ ಶತಕೋಟಿ ಡಾಲರು ಮೊತ್ತದ ಆರು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ೨೦೧೯ ರಲ್ಲಿ ಮೋದಿ ಎರಡನೆಯ ಸಲ ಸೌದಿಗೆ ಭೆಟ್ಟಿಯಿತ್ತಾಗ ೧೨ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು. ೨೦೨೩ ರಲ್ಲಿ ಸೌದಿ ಪ್ರಧಾನಿ ಭಾರತದಲ್ಲಿ ನಡೆದ ಜಿ-೨೦ ಶೃಂಗಸಭೆಯಲ್ಲಿ ಪಾಲ್ಗೊಂಡಾಗ ಲೂ ೮ ಹೊಸ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಸಚಿವರುಗಳ ಮಟ್ಟದಲ್ಲು ಉಭಯ ರಾಷ್ಟ್ರಗಳ ನಡುವೆ ಪರಸ್ಪರ ಭೆಟ್ಟಿ ಮತ್ತು ಕಾರ್ಯಯೋಜನೆಗಳ ಒಪ್ಪಂದಗಳು ಸಾಕಷ್ಟು ನಡೆದಿವೆ. ಅವುಗಳಲ್ಲಿ ‌ಮಹಾರಾಷ್ಟ್ರದಲ್ಲಿ ೪೪ ಶತಕೋಟಿ ಡಾಲರು ಬಂಡವಾಳದ ಬೃಹತ್ ವೆಸ್ಟಕೋಸ್ಟ್ ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಪ್ರಾಜೆಕ್ಟ್ ಸಹ ಒಂದು.
ಪೆಟ್ರೋಲಿಯಂ ವಸ್ತುಗಳ ಕ್ಷೇತ್ರದಲ್ಲಿ ಭಾರತ ಸೌದಿ ಅರೇಬಿಯಾವನ್ನೇ ಅವಲಂಬಿಸಿಕೊಂಡಿದ್ದು ೨೦೨೩ ರಲ್ಲಿ ಭಾರತ ೩೯.೫ mmt ಕಚ್ಚಾತೈಲವನ್ನು ಮತ್ತು ೭.೮೫ mmt LPG ಯನ್ನು ಆಮದು ಮಾಡಿಕೊಂಡಿದೆ. ಉಳಿದಂತೆ ಸಾಂಸ್ಕೃತಿಕ ಮತ್ತು ಯೋಗ ಕ್ಷೇತ್ರಗಳಲ್ಲಿಯೂ ಸೌದಿ ಭಾರತದೊಡನೆ ಸಹಕಾರ ಒಪ್ಪಂದ ಮಾಡಿಕೊಂಡಿದೆ. ಉಭಯ ರಾಷ್ಟ್ರಗಳ ನಡುವಿನ ಪರಸ್ಪರ ಕೊಡಕೊಳ್ಳುವಿಕೆಯ ಪ್ರಕ್ರಿಯೆ ನಿರಂತರವಾಗಿ ನಡೆದೇಇದೆ. ಭಾರತ- ಮಧ್ಯಪ್ರಾಚ್ಯ- ಯುರೋಪ್ ಆರ್ಥಿಕ ಕಾರಿಡಾರ್ ಯೋಜನೆಯ ಘೋಷಣೆ ಅವುಗಳಲ್ಲಿ ಮಹತ್ವದ್ದಾಗಿದೆ. ಪಾಕ್, ಚೀನಾ ಜೊತೆಗೆ ಸೌದಿಯ ಸಂಬಂಧವಿದೆಯಾದರೂ ಭಾರತದೊಂದಿಗಿನ ಸಂಬಂಧವನ್ನು ಸೌದಿ ಕೆಡಿಸಿಕೊಂಡಿಲ್ಲ. ಏಕೆಂದರೆ ಭಾರತದ ಮಹತ್ವ ಅದಕ್ಕೆ ಗೊತ್ತಿದೆ.

✒️ ಎಲ್.ಎಸ್.ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ