ಬೆಳಗಾವಿ ಸುವರ್ಣಸೌಧ :
ರಾಜ್ಯ ಸರ್ಕಾರವು ಕಲಬರುಗಿಯಲ್ಲಿ ಪಿಎಂ ಮಿತ್ರ ಪಾರ್ಕ್ ಯೋಜನೆಯಡಿ ಸ್ಥಾಪಿಸಲು ರಚನೆಯಾಗಲಿರುವ ವಿಶೇಷ ಉದ್ದೇಶಿತ ವಾಹಕ (Special Purpose Vehicle) ಗೆ ಸಾಂಕೇತಿಕ ದರದಲ್ಲಿ 1000 ಎಕರೆ ಜಮೀನನ್ನು (99 ವರ್ಷಗಳ ಅವಧಿಗೆ ಪ್ರತಿ ಎಕರೆಗೆ ರೂ.1 ರಂತೆ) ಕ್ಯಾಬಿನೆಟ್ ಅನುಮೋದನೆಯೊಂದಿಗೆ ಹಸ್ತಾಂತರಿಸಲಿದೆ ಎಂದು ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ ಇಂದು ವಿಧಾನ ಪರಿಷತ್‌ನಲ್ಲಿ ತಿಳಿಸಿದರು.

ಸದಸ್ಯ ಎಸ್.ತಿಪ್ಪೇಸ್ವಾಮಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು , ರಾಜ್ಯದಲ್ಲಿ ಕೇಂದ್ರ ಸರ್ಕಾರವು ಅಂತರ ರಾಷ್ಟ್ರೀಯ ಮಟ್ಟದ ಜವಳಿ ಮತ್ತು ಸಿದ್ದ ಉಡುಪಿನ ಪಾರ್ಕ್ ನಿರ್ಮಾಣಕ್ಕೆ PM- MITRA Park ಯೋಜನೆಯಡಿ ಕಲಬುರಗಿ ಜಿಲ್ಲೆಯ ಕಲಬುರಗಿ ತಾಲ್ಲೂಕಿನ ಕಿರಣಗಿ, ನದಿಸಿನ್ನೂರು ಹಾಗೂ ಫಿರೋಜಾಬಾದ್ ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳಡಿ 1000 ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಅನುಮೋದನೆ ನೀಡಿರುತ್ತದೆ.
ರಾಜ್ಯದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ನಿರ್ಮಿಸುವ PM- MITRA Park , ಎಲ್ಲಾ ಜವಳಿ ಮೌಲ್ಯ ಸರಪಳಿಯನ್ನು ಒಂದೇ ಸ್ಥಳದಲ್ಲಿ ಸ್ಥಾಪಿಸುವ ಮೂಲಕ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಿ, ಹೂಡಿಕೆಯನ್ನು ಆಕರ್ಷಿಸಿ, ಉತ್ಪಾದನೆ, ಉದ್ಯೋಗ ಮತ್ತು ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವುದು. ಜವಳಿ ಉದ್ಯಮದ ಎಲ್ಲಾ ಮೌಲ್ಯ ಸರಪಳಿಯನ್ನೊಳಗೊಂಡ ಸಮಗ್ರ ದೊಡ್ಡ ಪ್ರಮಾಣದ ಮತ್ತು ಆಧುನಿಕ ಕೈಗಾರಿಕಾ ಮೂಲ ಸೌಕರ್ಯ ಸೌಲಭ್ಯವನ್ನು ಅಭಿವೃದ್ಧಿಪಡಿಸುವುದು. ಜಾಗತಿಕ ಜವಳಿ ಮಾರುಕಟ್ಟೆಯಲ್ಲಿ ಕರ್ನಾಟಕವನ್ನು ಸ್ಪರ್ಧಾತ್ಮಕ ರಾಜ್ಯವನ್ನಾಗಿಸಲು ಹೂಡಿಕೆಗಳನ್ನು ಆಕರ್ಷಿಸಿ ಹೆಚ್ಚಿನ ಉದ್ಯೋಗಗಳನ್ನು ಸೃಜಿಸುವ ಗುರಿ ಹೊಂದಿದೆ. ಸುಸ್ಥಿರ ಕೈಗಾರೀಕರಣದ ಅನ್ವೇಷಣೆ ಹಾಗೂ ಉತ್ತೇಜನೆ, ನಾವಿನ್ಯ ಅನ್ವೇಷಣೆ, ಸ್ಥಿತಿಸ್ಥಾಪಕ ಸೌಕರ್ಯವನ್ನು ನಿರ್ಮಿಸುವವ ಧ್ಯೆಯೋದ್ದೇಶಗಳನ್ನು ಒಳಗೊಂಡಿದೆ.

ಈ ಮೆಗಾ ಪಾರ್ಕ್ ಸ್ಥಾಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದೆ. ಅಲ್ಲದೇ ಸಾರ್ವಜನಿಕ-ಖಾಸಗಿಯವರ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ರಾಯಚೂರು ಜಿಲ್ಲೆಯ ರಾಯಚೂರು, ಧಾರವಾಡ ಜಿಲ್ಲೆಯ ನವಲಗುಂದ, ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಮತ್ತು ಚಿತ್ರದುರ್ಗ ಜಿಲ್ಲೆಯ ಕೊಂಡ್ಲಹಳ್ಳಿ ಈ ಭಾಗಗಲ್ಲಿ ಜವಳಿ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿರುತ್ತದೆ.ಖಾಸಗಿ ಒಡೆತನದಲ್ಲಿ ಬಳ್ಳಾರಿಯಲ್ಲಿ ಜೀನ್ಸ್ ಮತ್ತು ಉಡುಪುಗಳನ್ನು ಉತ್ತೇಜಿಸಲು ಟೆಕ್ಸಟೈಲ್ ಪಾರ್ಕ್ ಅನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ.
PM- MITRA Park ಯೋಜನೆಯಡಿ ನಿರ್ಮಿತವಾಗಲಿರುವ ಪಾರ್ಕ್ನ್ನು 2 ಹಂತಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕೇಂದ್ರ ಸರ್ಕಾರವು 500 ಕೋಟಿಗಳ ಅನುದಾನ ಒದಗಿಸಲಿದೆ. ವಿವರಗಳನ್ನು ಅನುಬಂಧ-3 ರಲ್ಲಿ ಒದಗಿಸಿದೆ. ರಾಜ್ಯ ಸರ್ಕಾರವು ಸದರಿ ಪಾರ್ಕ್ನಲ್ಲಿ ಸ್ಥಾಪನೆ ಯಾಗಲಿರುವ ಜವಳಿ ಘಟಕಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಹಾಗೂ ನೀರನ್ನು ಸರಬರಾಜು ಮಾಡಲಿದೆ ಎಂದು ತಿಳಿಸಿದರು.