ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೆಗೆ ಗುರುವಾರ ಭಕ್ತರ ಘೋಷದೊಂದಿಗೆ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.

ದೇವಳದ ತಂತ್ರಿ ಕುಂಟಾರು ರವೀಶ ಅವರ ನೇತೃತ್ವದಲ್ಲಿ ಧ್ವಜಾರೋಹಣಕ್ಕೆ ಸಂಬಂಧಿಸಿದ ಧಾರ್ಮಿಕ ವಿಧಿವಿಧಾನಗಳು ನಡೆದವು. ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವರ ಬಲಿ ಉತ್ಸವ, ಬಳಿಕ ಧ್ವಜಸ್ತಂಭ ಪೂಜೆ ನಡೆಸಿ ಧ್ವಜಾರೋಹಣ ನೆರವೇರಿಸಲಾಯಿತು. ದೇವಳದ ಪ್ರಧಾನ ಅರ್ಚಕ ವಿ.ಎಸ್.ಭಟ್, ವಸಂತ ಕೆದಿಲಾಯ ಅವರು ವೈದಿಕ ಕಾರ್ಯಕ್ರಮ ನೆರವೇರಿಸಿದರು. ವಾಸ್ತು ಎಂಜಿನಿಯರ್
ಪಿ.ಜಿ.ಜಗನ್ನಿವಾಸ್ ರಾವ್ ಅವರ ನೇತೃತ್ವದಲ್ಲಿ ಧ್ವಜ ಏರಿಸಲಾಯಿತು.

ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ ನಳಿನಿ ಪಿ.ಶೆಟ್ಟಿ, ಈಶ್ವರ ಬಡೇಕರ್, ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ದಿನೇಶ್ ಕುಲಾಲ್ ಪಿ.ವಿ., ಸುಭಾಷ್ ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ, ಪ್ರಸಾದ್ ಮಲ್ಲಿಕಾ ಮಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಎನ್.ಕೆ. ಜಗನ್ನಿವಾಸ ರಾವ್, ದೇವಳದ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಇಒ ನವೀನ್‌ಕುಮಾರ್ ಭಂಡಾರಿ ಇದ್ದರು. ಜಾತ್ರೆ ಅಂಗವಾಗಿ ಸೀಮೆಯ ಭಕ್ತರು ಹೊರೆಕಾಣಿಕೆ ಸುವಸ್ತುಗಳನ್ನು ದೇವಳಕ್ಕೆ ತಂದೊಪ್ಪಿಸಿದರು.

ರಾತ್ರಿ ಅಂಕುರಾರ್ಪಣೆಯ ಬಳಿಕ ದೇವರ ಬಲಿ ಉತ್ಸವ ನಡೆಯಿತು. ದೇವರ ಪೇಟೆ ಸವಾರಿಯು ಬೊಳುವಾರು, ಶ್ರೀರಾಮ ಪೇಟೆ, ಕಾರ್ಜಾಲು, ರಕೇಶ್ವರಿ ದೇವಸ್ಥಾನ, ಕಲ್ಲೇಗ, ಕರ್ಮಲದವರೆಗೆ ನಡೆಯಿತು.

ದೇವಳದ ಮುಂಭಾಗದ ಕಟ್ಟೆಯಲ್ಲಿ ಕುಂಟಾರು ರವೀಶ ತಂತ್ರಿ, ಶಾಸಕ ಅಶೋಕ್ ಕುಮಾರ್ ರೈ ಉಪಸ್ಥಿತಿಯಲ್ಲಿ ಭಗವಾಧ್ವಜಾರೋಹಣ ನೆರವೇರಿಸಲಾಯಿತು.

ಜಾತ್ರೋತ್ಸವದ ಸಂದರ್ಭದಲ್ಲಿ ದೇವಳದ ಕೆರೆಯ ಬಳಿ ಅನ್ನಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದ್ದು, ಹೊಸದಾಗಿ ನಿರ್ಮಿಸಲಾದ ತಾತ್ಕಾಲಿಕ ಅನ್ನಛತ್ರವನ್ನು ಕುಂಟಾರು ರವೀಶ ತಂತ್ರಿ ಉದ್ಘಾಟಿಸಿ, ಅನ್ನಪ್ರಸಾದ ವಿತರಣೆಗೆ ಚಾಲನೆ ನೀಡಿದರು.

ಜಾತ್ರೆಯ ಅಂಗವಾಗಿ ಏ.11ರಂದು ಬೆಳಿಗ್ಗೆ ಬಲಿ ಉತ್ಸವ, ರಾತ್ರಿ ಉತ್ಸವದ ಬಳಿಕ ದೇವರ ಪೇಟೆ ಸವಾರಿಯು ನೆಲ್ಲಿಕಟ್ಟೆ, ಸಾಲ್ಮರ, ಸೂತ್ರಬೆಟ್ಟುಗಳಲ್ಲಿ ನಡೆಯಲಿದೆ. ಮಧ್ಯಾಹ್ನ ಪುತ್ತೂರು ಕೆಎಸ್‌ಆರ್‌ಟಿಸಿ ಅಧಿಕಾರಿ, ಸಿಬ್ಬಂದಿ ವರ್ಗದಿಂದ ಅನ್ನಸಂತರ್ಪಣೆ ನಡೆಯಲಿದೆ.