ನವದೆಹಲಿ : ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದ ಈವರೆಗೆ ದೇಶಾದ್ಯಂತ ನಗದು, ಮದ್ಯ, ಡ್ರಗ್ಸ್‌, ಉಚಿತ ಉಡುಗೊರೆ ಸೇರಿದಂತೆ 8,889 ಕೋಟಿ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಮಾರ್ಚ್‌ 1 ರಿಂದ ಇದುವರೆಗೆ ವಶಕ್ಕೆ ಪಡೆಯಲಾದ ವಸ್ತುಗಳ ಒಟ್ಟು ವಿವರವನ್ನು ನೀಡಿದ ಚುನಾವಣಾ ಆಯೋಗ, 75 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಬೃಹತ್‌ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2019ರ ಲೋಕಸಭಾ ಚುನಾವಣೆ ವೇಳೆ ಒಟ್ಟು 3,475 ಕೋಟಿ ರೂ. ಮೌಲ್ಯದ ನಗದು, ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಬಾರಿ ಇನ್ನೂ 3 ಹಂತದ ಚುನಾವಣೆಗಳು ಬಾಕಿಯಿರುವಂತೆಯೇ ಹಿಂದಿನ ಚುನಾವಣೆಗಿಂತ ಹೆಚ್ಚಿನ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.

ವಶಪಡಿಸಿಕೊಂಡ 8,889 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಪೈಕಿ ಡ್ರಗ್ಸ್‌ ಪಾಲು ಶೇ. 45ರಷ್ಟು ಅಂದರೆ ಸುಮಾರು 3,958 ಕೋಟಿ ರೂ.ಗಳ ಮೌಲ್ಯದ್ದಾಗಿದೆ. 849.15 ಕೋಟಿ ರೂ. ನಗದು, 814.85 ಕೋಟಿ ರೂ. ಮೌಲ್ಯದ 5.39 ಕೋಟಿ ಲೀ. ಮದ್ಯ, 1,200.33 ಕೋಟಿ ರೂ. ಮೌಲ್ಯದ ಲೋಹಗಳು, 2,006.56 ಕೋಟಿ ರೂ. ಉಚಿತ ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಕಳೆದ ಎರಡು ತಿಂಗಳಲ್ಲಿ ಸಿವಿಜಿಲ್ ಆ್ಯಪ್‌ನಲ್ಲಿ ನಾಗರಿಕರಿಂದ 4.24 ಲಕ್ಷಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ ಅವುಗಳಲ್ಲಿ 99.9 ಪ್ರತಿಶತ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಬಹಿರಂಗಪಡಿಸಿದೆ.