ನವದೆಹಲಿ: ಅಡಕೆ ಮಾರಾಟ ಹಂಗಾಮು ಆರಂಭವಾಗಿರುವ ಸಂದರ್ಭದಲ್ಲೇ ಶ್ರೀಲಂಕಾದಿಂದ 5 ಲಕ್ಷ ಟನ್‌ ಅಡಕೆ ಆಮದು ಮಾಡಿಕೊಳ್ಳಲು ಕಂಪನಿಯೊಂದು ಮುಂದಾಗಿದೆ ಎಂದು ವರದಿಯಾಗಿದೆ.

ಅಡಕೆ ಬೆಳೆಗಾರರಿಗೆ ದರ ಕುಸಿತದ ಆತಂಕ ಎದುರಾಗಿದೆ. ಶ್ರೀಲಂಕಾದಿಂದ ಅಡಕೆ ಆಮದು ಸಂಬಂಧ ಬ್ರಿಟನ್‌ ಮೂಲದ ಎಸ್‌ರಾಂ ಅಂಡ್‌ ಎಂರಾಂ ಗ್ರೂಪ್‌ ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಾಗಿದ್ದು, ಶ್ರೀಲಂಕಾ ಮೂಲದ ವ್ಯಾಪಾರಿ ಸಂಸ್ಥೆ ಪ್ರೈಮ್‌ ಸ್ಟಾರ್ ಪ್ರೈವೇಟ್‌ ಲಿಮಿಟೆಡ್‌ ಜೊತೆ ಅಡಕೆ ಆಮದು ಒಪ್ಪಂದ ಮಾಡಿಕೊಂಡಿರುವುದಾಗಿ ಎಸ್‌ರಾಂ ಅಂಡ್‌ ಎಂರಾಂ ಗ್ರೂಪ್‌ ಶುಕ್ರವಾರ ಹೇಳಿರುವುದಾಗಿ ವರದಿಯಾಗಿದೆ.

2022ರ ಏಪ್ರಿಲ್‌-ಡಿಸೆಂಬರ್‌ ಅವಧಿಯಲ್ಲಿ ಭಾರತ 53.71 ಕೋಟಿ ರೂ. ಮೌಲ್ಯದ ಅಡಕೆ ಆಮದು ಮಾಡಿಕೊಂಡಿತ್ತು. ಆದರೆ 2023ರ ಏಪ್ರಿಲ್‌-ಡಿಸೆಂಬರ್‌ ಅವಧಿಯಲ್ಲಿ ಅದು 4.04 ಕೋಟಿ ರೂ.ಗಳಿಗೆ ಕುಸಿದಿತ್ತು.
ಇಂಡೋನೇಷ್ಯಾ, ಬಾಂಗ್ಲಾದೇಶ ಹಾಗೂ ಶ್ರೀಲಂಕಾದಿಂದ ಭಾರತ ಅಡಕೆ ಆಮದು ಮಾಡಿಕೊಳ್ಳುತ್ತದೆ. ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಕೇಜಿಗೆ 351 ರೂ.ಗಿಂತ ಕಡಿಮೆ ಇಲ್ಲದ ಅಡಕೆ (ಸುಪಾರಿ) ಆಮದಿಗೆ ಮಾತ್ರವೇ ಅವಕಾಶವಿದೆ ಎಂದು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ ತಿಳಿಸಿದೆ.

ಈ ಹಿಂದೆ ವಿದೇಶದಿಂದ ಅಡಕೆ ಆಮದು ಮಾಡಿಕೊಂಡಿದ್ದಾಗ, ಅಡಕೆ ದರ ಕುಸಿದಿತ್ತು. ಹೀಗಾಗಿ ಈಗ ಮತ್ತೊಮ್ಮೆ ಅಡಕೆ ಆಮದು ಬಗ್ಗೆ ಒಪ್ಪಂದಗಳು ನಡೆದಿದೆ ಎಂಬ ಸುದ್ದಿ ಮಧ್ಯೆಯೇ ಬೆಳೆಗಾರರಿಗೆ ದರ ಕುಸಿತದ ಆತಂಕವೂ ಎದುರಾಗಿದೆ.