ಬೆಳಗಾವಿ : ಬೆಳಗಾವಿ ಮಹಾನಗರದಲ್ಲಿ ಮುಂದಿನ ತಿಂಗಳಿನಿಂದಲೇ ನಗರದ ಎಲ್ಲಾ ಆಟೋರಿಕ್ಷಾಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಲಾಗುವುದು. ಆದ್ದರಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪೋಲಿಸ್ ಇಲಾಖೆಯವರು ಆಟೋರಿಕ್ಷಾ ಚಾಲಕರ ಸಂಘಟನೆ ಜೊತೆಗೆ ಸಭೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿ ಪ್ರಾಧಿಕಾರದ ಸಭೆಯಲ್ಲಿ ಅವರು ಈ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬೆಳಗಾವಿ ಮಹಾನಗರದಲ್ಲಿ ಆಟೋ ರಿಕ್ಷಾ ಚಾಲಕರು ಸಾರ್ವಜನಿಕರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಾರೆ. ತಾವು ಹೇಳಿದ್ದೆ ಅಂತಿಮ. ಅವರು ನಿಗದಿಪಡಿಸಿದಷ್ಟು ದರವನ್ನು ನೀಡಲೇ ಬೇಕು. ಆ ರೀತಿಯಾಗಿ ಹಣ ವಸೂಲಿ ಮಾಡುತ್ತಾರೆ. ಆಟೋರಿಕ್ಷಾಗಳಿಗೆ ಮೀಟರ್ ಕಡ್ಡಾಯವಾಗಿ ಅಳವಡಿಸಬೇಕು ಎನ್ನುವುದು ಸಾರ್ವಜನಿಕರ ದಶಕಗಳ ಬೇಡಿಕೆಯಾಗಿದೆ. ಆದರೆ, ಅದನ್ನು ಅನುಷ್ಠಾನಗೊಳಿಸುವುದು ಜಿಲ್ಲಾಡಳಿತಕ್ಕೆ ಸಾಧ್ಯವಿಲ್ಲದ ಮಾತು ಎಂಬಂತೆ ಈ ಹಿಂದೆ ನಡೆದ ನಿದರ್ಶನಗಳೇ ಸಾಕ್ಷಿಯಾಗಿವೆ. ಆದರೆ, ಇದೀಗ ಮತ್ತೆ ಜಿಲ್ಲಾಡಳಿತ ಆಟೋಗಳಿಗೆ ಮೀಟರ್ ಕಡ್ಡಾಯಗೊಳಿಸುವುದಾಗಿ ಹೇಳಿದೆ. ಇದು ಎಷ್ಟರಮಟ್ಟಿಗೆ ಅನುಷ್ಠಾನ ಸಾಧ್ಯವಾಗುತ್ತದೆ ಕಾದು ನೋಡಬೇಕಾಗಿದೆ.

ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ :
ಜಿಲ್ಲಾ ಆಡಳಿತ ನಡೆಸಿರುವ ಸಭೆಯಲ್ಲಿ ಮುಂದಿನ ತಿಂಗಳಿನಿಂದಲೇ ಬೆಳಗಾವಿ ಮಹಾನಗರದಲ್ಲಿ ಆಟೋರಿಕ್ಷಾಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿರುವುದು ಸ್ವಾಗತಾರ್ಹ. ಇದು ಯಾವುದೇ ಕಾರಣಕ್ಕೂ ಮುಂದೂಡಿಕೆ ಆಗಬಾರದು. ಮುಂದಿನ ತಿಂಗಳಿನಿಂದಲೇ ಕಡ್ಡಾಯವಾಗಿ ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಸಬೇಕು. ಈ ಹಿಂದೆ ಸಾಕಷ್ಟು ಸಲ ಜಿಲ್ಲಾಡಳಿತ ಮೀಟರ್ ಅಳವಡಿಸುವುದಾಗಿ ಹೇಳಿತ್ತು. ಆದರೆ ಅನುಷ್ಠಾನಕ್ಕೆ ತರುವುದು ಮಾತ್ರ ಗಗನ ಕುಸುಮವಾಗಿತ್ತು. ರಾಜ್ಯದ ಎರಡನೇ ರಾಜಧಾನಿಯಾಗಿ ಗುರುತಿಸಲ್ಪಟ್ಟಿರುವ ಬೆಳಗಾವಿ ಮಹಾನಗರದಲ್ಲಿ ಉತ್ತಮ ಸಂಚಾರ ವ್ಯವಸ್ಥೆ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಆಟೋರಿಕ್ಷಾಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸುವಂತಾಗಬೇಕು ಎಂದು ಸಾರ್ವಜನಿಕ ವಲಯದಿಂದ ಅಭಿಪ್ರಾಯ ವ್ಯಕ್ತವಾಗಿದೆ.