ಬೆಂಗಳೂರು:
ಪೀಕ್ ಅವರ್​ನಲ್ಲಿ ದರ ಏರಿಸಿ ಜನರ ಸುಲಿಗೆ ತಡೆಯಲು ಆ್ಯಪ್ ಆಧಾರಿತ ಅಗ್ರಿಗೇಟರ್‌ಗಳಾದ ಓಲಾ, ಉಬರ್, ರ್ಯಾಪಿಡೋ ಮತ್ತು ಸಿಟಿ ಟ್ಯಾಕ್ಸಿಗಳಿಗೆ ರಾಜ್ಯ ಸರ್ಕಾರ ಈಗ ಏಕರೂಪ ದರ ನಿಗದಿಪಡಿಸಿದೆ.

ಆ್ಯಪ್ ಆಧಾರಿತ ಕ್ಯಾಬ್ ಅಗ್ರಿಗೇಟರ್‌ಗಳು ಮತ್ತು ಸಿಟಿ ಟ್ಯಾಕ್ಸಿಗಳ ದರಗಳು ಏಕರೂಪವಾಗಿರುತ್ತವೆ ಎಂದು ಸರ್ಕಾರದ ಆದೇಶವು ಹೇಳಿದೆ. ಪರಿಷ್ಕೃತ ದರಗಳು ತಕ್ಷಣದಿಂದ ಜಾರಿಗೆ ಬರುತ್ತವೆ ಹಾಗೂ ಈ ಆದೇಶ ರಾಜ್ಯಾದ್ಯಂತ ಅನ್ವಯವಾಗಲಿದೆ. ಹೊಸ ದರ ರಚನೆಯ ಪ್ರಕಾರ, ವಾಹನದ ವೆಚ್ಚವನ್ನು ಆಧರಿಸಿ ಕ್ಯಾಬ್‌ಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಲಾಗಿದೆ.

ಹೊಸ ಶುಲ್ಕ
10 ಲಕ್ಷ ರೂ. ಅಥವಾ ಅದಕ್ಕಿಂತ ಕಡಿಮೆ ಬೆಲೆಯ ವಾಹನಗಳಿಗೆ ನಾಲ್ಕು ಕಿ.ಮೀ.ವರೆಗಿನ ಕನಿಷ್ಠ ದರವನ್ನು 100 ರೂ.ಗಳಿಗೆ ನಿಗದಿಪಡಿಸಲಾಗಿದೆ. ಪ್ರತಿ ಹೆಚ್ಚುವರಿ ಕಿಮೀಗೆ ತಲಾ 24 ರೂ.ಗಳ ದರ ನಿಗದಿ ಪಡಿಸಲಾಗಿದೆ.
10 ಲಕ್ಷದಿಂದ 15 ಲಕ್ಷ ರೂ.ವರೆಗಿನ ವಾಹನಗಳಿಗೆ ನಾಲ್ಕು ಕಿ.ಮೀ.ವರೆಗೆ ಕನಿಷ್ಠ ದರ 115 ರೂ.ನಿಗದಿ ಪಡಿಸಲಾಗಿದೆ ಹಾಗೂ ಪ್ರತಿ ಹೆಚ್ಚುವರಿ ಕಿಮೀಗೆ ಹೆಚ್ಚುವರಿ ದರ 28 ರೂ.ಗಳನ್ನು ನಿಗದಿ ಮಾಡಲಾಗಿದೆ. 15 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ವಾಹನಗಳಿಗೆ ನಾಲ್ಕು ಕಿ.ಮೀ.ವರೆಗಿನ ಕನಿಷ್ಠ ದರವನ್ನು 130 ರೂ.ಗಳಿಗೆ ನಿಗದಿ ಮಾಡಲಾಗಿದೆ. ಹಾಗೂ ಹೆಚ್ಚುವರಿ ದರವನ್ನು ಪ್ರತಿ ಕಿಮೀಗೆ 32 ರೂ.ಗಳನ್ನು ನಿಗದಿ ಮಾಡಲಾಗಿದೆ. ಸರ್ಕಾರದ ಆದೇಶವು ಕ್ಯಾಬ್ ಅಗ್ರಿಗೇಟರ್‌ಗಳು ಹೆಚ್ಚುವರಿ ಶುಲ್ಕ ಅಥವಾ ಹಣ ಪಡೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ.

ವೇಟಿಂಗ್‌ ಶುಲ್ಕಗಳು
ಹೊಸ ಆದೇಶದ ಪ್ರಕಾರ, ಮೊದಲ ಐದು ನಿಮಿಷಗಳವರೆಗೆ ಯಾವುದೇ ವೇಟಿಂಗ್ ಚಾರ್ಜ್ ಇರುವುದಿಲ್ಲ. ಕಾಯುವ ಸಮಯದ ಮೊದಲ ಐದು ನಿಮಿಷಗಳ ನಂತರ ಪ್ರತಿ ನಿಮಿಷಕ್ಕೆ 1 ರೂ.ಗಳಂತೆ ವಿಧಿಸಲಾಗುತ್ತದೆ. ಇದಲ್ಲದೇ, ಆ್ಯಪ್ ಆಧಾರಿತ ಅಗ್ರಿಗೇಟರ್‌ಗಳು ಪ್ರಯಾಣಿಕರಿಂದ ಶೇಕಡಾ ಐದು ಜಿಎಸ್‌ಟಿ ಮತ್ತು ಟೋಲ್ ಶುಲ್ಕವನ್ನು ಸಂಗ್ರಹಿಸಬಹುದು. ಆದೇಶದ ಪ್ರಕಾರ, ರಾತ್ರಿ 12 ರಿಂದ ಬೆಳಿಗ್ಗೆ 6ರ ವರೆಗೆ ಬುಕ್ ಮಾಡಲಾದ ಕ್ಯಾಬ್‌ಗಳಿಗೆ ನಿರ್ವಾಹಕರು ಶೇಕಡಾ 10 ರಷ್ಟು ಹೆಚ್ಚುವರಿ ಶುಲ್ಕ ವಿಧಿಸಬಹುದು. ಅಲ್ಲದೆ, ಲಗೇಜ್ ದರ ಮೊದಲಿನ 120 ಕೆಜಿ ವರೆಗೆ ಉಚಿತವಾಗಿದ್ದು, ಅದಕ್ಕಿಂತ ಹೆಚ್ಚಿದ್ದರೆ ಪ್ರತಿ 30 ಕೆಜಿಗೆ 7 ರೂ. ನಿಗದಿ ಮಾಡಲಾಗಿದೆ.