ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಸೋಮವಾರ ನಡೆದಿದೆ. ಸುದೀರ್ಘ ಒಂದೂವರೆ ಗಂಟೆ ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಿಚಾರಣೆಯನ್ನು ಆ.29ರ ಮಧ್ಯಾಹ್ನ 2.30ಕ್ಕೆ ಮುಂದೂಡಿದರು.

ಅರ್ಜಿ ವಿಚಾರಣೆ ವೇಳೆ ವಾದ-ಪ್ರತಿವಾದ ಆಲಿಸಿದ ಬಳಿಕ ಮಾತನಾಡಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ದೂರುದಾರರು ಹಾಗೂ ಸಿಎಂ ಪರ ವಕೀಲರು ವಾದ ಮಂಡಿಸಿದ್ದಾರೆ. ಪಿಸಿ ಆಕ್ಟ್ 17ಎ ಅಡಿ ಅನುಮತಿ ಪ್ರಶ್ನಿಸಲಾಗಿದ್ದು, ರಿಟ್ ಅರ್ಜಿಯೊಂದಿಗೆ ದಾಖಲೆಗಳನ್ನು ಉಲ್ಲೇಖಿಸಿದ್ದಾರೆ. ರಾಜ್ಯಪಾಲರು ವಿವೇಚನಾರಹಿತವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದು ಸಿಎಂ ಪರ ವಕೀಲರು ವಾದ ಮಂಡಿಸಿದ್ದಾರೆ. ಇನ್ನು ರಾಜ್ಯಪಾಲರ ಆದೇಶಕ್ಕೆ ತಡೆ ನೀಡಬಾರದು ಎಂದು ಪ್ರಭುಲಿಂಗ ನಾವದಗಿ ವಾದಿಸಿದ್ದಾರೆ. ಎಲ್ಲಾ ವಾದವನ್ನು ಕೋರ್ಟ್‌ ಆಲಿಸಿದ್ದು,
ಹೈಕೋರ್ಟ್ ಮುಂದಿನ ಆದೇಶ ನೀಡುವವರೆಗೂ ಅಂದರೆ ಆಗಸ್ಟ್ 29ರವರೆಗೆ ವಿಚಾರಣೆ ಮುಂದೂಡಬೇಕು ಎಂದು ಜನಪ್ರತಿನಿಧಿಗಳ ಕೋರ್ಟ್‌ಗೆ ಸೂಚನೆ ನೀಡಿದರು.

ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದರು. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ವಾದ ಮಂಡಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಾಗಿದ್ದರು. ಸಿಎಂ ಸಿದ್ದರಾಮಯ್ಯ ಪರ ವಕೀಲ ಮನು ಸಿಂಘ್ವಿ ವಾದ ಮಂಡಿಸಿ, ಪ್ರಕರಣದಲ್ಲಿ ಸಂವಿಧಾನಾತ್ಮಕ ಮತ್ತು ಆಡಳಿತಾತ್ಮಕ ವಿಚಾರಗಳಿವೆ. ನಾಳೆ ಜನಪ್ರತಿನಿಧಿಗಳ ಕೋರ್ಟ್ ಆದೇಶ ಬಾಕಿ ಇದೆ. ಗವರ್ನರ್ ಆದೇಶ ನೀಡುವ ಮುನ್ನ ಕ್ಯಾಬಿನೆಟ್ ತೀರ್ಮಾನ ಮಾಡಿದೆ. ಆದರೆ, ಗವರ್ನರ್ ಯಾವ ಆಧಾರ ಇಲ್ಲದೆಯೂ ಅನುಮತಿ ನೀಡಿದ್ದಾರೆ ಎಂದು ಹೇಳಿದರು.

ಶೋಕಾಸ್ ನೋಟಿಸ್ ನೀಡಿದ್ದಕ್ಕೆ ಕೊಟ್ಟ ಉತ್ತರವನ್ನು ಅವರು ಹೇಳಿಲ್ಲ. ಇಲ್ಲಿ ರಾಜ್ಯಪಾಲರಿಗೆ ಸಿಎಂ ರಾಜೀನಾಮೆ ಕೊಡುವುದು ಮಾತ್ರ ಬೇಕಿದೆ. ಅದಕ್ಕೆ ಒಂದೇ ಒಂದು ಸರಿಯಾದ ಕಾರಣ ನೀಡದೇ ಅಭಿಯೋಜನೆಗೆ ಅನುಮತಿ ನೀಡಿದ್ದಾರೆ. ರಾಜ್ಯಪಾಲರಿ 17ಎ ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದರೆ, ಇದಕ್ಕೆ ಕನಿಷ್ಠ ಎರಡು ನಿಯಮಗಳಿವೆ. ನೂರು ಪುಟಗಳ ಕ್ಯಾಬಿನೆಟ್ ನಿರ್ಧಾರಕ್ಕೆ ರಾಜ್ಯಪಾಲರು ಕೇವಲ ಎರಡು ಪುಟಗಳ ಉತ್ತರ ನೀಡಿದ್ದಾರೆ. ಸಂಪುಟದ ನಿರ್ಧ ರ ಪರಿಗಣಿಸಲ್ಲ ಎಂದಿದ್ದಾರೆ. ಯಾವ ತನಿಖಾಧಿಕಾರಿ ಕೇಳಿದ್ದಾರೆ ಅನ್ನೋದು ಮುಖ್ಯ. ಅಲ್ಲದೆ ಯಾವ ಆರೋಪವಿದೆ ಅನ್ನೋದು ಅವರು ಹೇಳಬೇಕಿತ್ತು? ಬಿಎನ್‌ಎಸ್ ಎಸ್ 218 ಅಡಿಯೂ ಅನುಮತಿ ನೀಡಿದ್ದಾರೆ ಎಂದು
ಗವರ್ನರ್ ತಮ್ಮ ಆದೇಶದಲ್ಲಿ ಮಧ್ಯಪ್ರದೇಶ ಸರ್ಕಾರ & ಮಧ್ಯಪ್ರದೇಶ ಪೊಲೀಸ್ ಎಸ್ಟಾಬ್ಲಿಷ್ ಕೇಸ್ ಉಲ್ಲೇಖ ಮಾಡಿದ್ದಾರೆ ಎಂದು ಆರ್ಟಿಕಲ್ 163 ಬಗ್ಗೆ ಮನು ಸಿಂಘ್ವಿ ಉಲ್ಲೇಖಿಸಿ, ಹೌದು, ರಾಜ್ಯಪಾಲರಿಗೆ ಅಧಿಕಾರ ಇದೆ. ಆದರೆ ಒಂದು ಲೈನ್‌ನಲ್ಲಿ ಕ್ಯಾಬಿನೆಟ್ ನಿರ್ಧಾರ ತಿರಸ್ಕರಿಲು ಸಾಧ್ಯವಿಲ್ಲ. ಹಗರಣ ಸಂಬಂಧ ಮೂವರು ಅನುಮತಿ ಕೇಳಿದ್ದಾರೆ. ಟಿ.ಜೆ. ಅಬ್ರಹಾಂ ದೂರು ಕೊಟ್ಟ ದಿನವೇ ಶೋಕಾಸ್ ನೋಟಿಸ್ ನೀಡಿದ್ದಾರೆ. ಸಾಮಾನ್ಯವಾಗಿ ಒಂದು ದೂರು ನೀಡಿದರೆ ಅದನ್ನು ಪರಿಶೀಲನೆ ಮಾಡಲು ಸಮಯ ಬೇಕು. ಆದರೆ ದೂರು ನೀಡಿದ ದಿನವೇ ಶೋಕಾಸ್ ನೊಟೀಸ್ ನೀಡಿದ್ದಾರೆ. ಅಲ್ಲದೇ ಗವರ್ನರ್ ಮುಂದೆ 12 ಪ್ರಕರಣಗಳಲ್ಲಿ ಅನುಮತಿ ಕೇಳಲಾಗಿದೆ. ಆದರೆ ಅವುಗಳನ್ನು ಇನ್ನೂ ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲ್ಯಾಂಡ್ ಡಿನೋಟಿಫಿಕೇಷನ್ ಪ್ರಕ್ರಿಯೆ ಹಾಗೂ ಭೂ ಪರಿವರ್ತನೆ ಸೇರಿ ಇಲ್ಲಿಯವರೆಗೆ ನಡೆದ ಪ್ರಕ್ರಿಯೆಗಳನ್ನು ಉಲ್ಲೇಖಿಸಿ ವಕೀಲ ಮನು ಸಿಂಘ್ವಿ ವಾದ ಮಂಡಿಸಿ, 2004 ರಿಂದ 2010ರ ತನಕ ಸಿದ್ದರಾಮಯ್ಯ ಪಾತ್ರವೇ ಇಲ್ಲ. 1992ರಲ್ಲಿ ಮುಡಾ ಸ್ವಾಧೀನವನ್ನು 1998ರಲ್ಲಿ ಡಿನೋಟಿಫಿಕೇಷನ್ ಮಾಡಲಾಗಿದೆ. 2004ರಲ್ಳಿ ಸಿಎಂ ಬಾಮೈದನಿಗೆ ಮಾರಾಟ ಆಗಿದೆ. 2005ರಲ್ಲಿ ಕೃಷಿ ಜಮೀನಾಗಿ ಪರಿವರ್ತನೆ ಮಾಡಲಾಗಿದ್ದು, 2010ರಲ್ಲಿ ಸಿಎಂ ಪತ್ನಿಗೆ ದಾನಪತ್ರ ಮಾಡಲಾಗಿದೆ. ಬಹುತೇಕ ಸಮಯದಲ್ಲಿ ಸಿದ್ದರಾಮಯ್ಯ ಅಧಿಕಾರದಲ್ಲಿ ಇರಲಿಲ್ಲ. ಯಾವುದೂ ತರಾತುರಿಯಲ್ಲಿ ನಡೆದಿಲ್ಲ. 2020ರಲ್ಲಿ ಭೂಮಿಗೆ ಪರಿಹಾರವಾಗಿ ನಿವೇಶನಗಳನ್ನು ಹಂಚಲಾಗಿದೆ. 2022ರಲ್ಲಿ ಸೈಟ್‌ಗಳ ಕ್ರಯ ಆಗಿದೆ ಎಂದು ತಿಳಿಸಿದರು.

ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಬಸವರಾಜ್ ಬೊಮ್ಮಾಯಿ ಸೇರಿ ಹಲವರ ವಿರುದ್ದ ಅನುಮತಿ ಕೇಳಲಾಗಿದೆ.
ಈ ವಿಚಾರಗಳು ಪ್ರಾಸಿಕ್ಯೂಷನ್ ಅನುಮತಿ ನೀಡಲು ಮುಖ್ಯವೇ ಎಂದು ಜಡ್ಜ್ ಪ್ರಶ್ನಿಸಿದರು. ಇದಕ್ಕೆ ಮನು ಸಿಂಘ್ವಿ ಉತ್ತರಿಸಿ, ರಾಜ್ಯಪಾಲರ ಶೋಕಾಸ್‌ ನೋಟಿಸ್‌ ಗೆ ಉತ್ತರ ನೀಡಲಾಗಿದೆ. ಅಲ್ಲದೇ ಈ ಬಗ್ಗೆ ಒಂದು ಆಯೋಗ ಸಹ ರಚನೆಯಾಗಿದೆ. ಆ ಕಮಿಟಿ ಈಗಾಗಲೇ ತನಿಖೆ ನಡೆಸುತ್ತಿದೆ ಎಂದು ಹೇಳಿದರು.

ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಬಸವರಾಜ್ ಬೊಮ್ಮಾಯಿ ಸೇರಿ ಹಲವರ ವಿರುದ್ದ ಅನುಮತಿ ಕೇಳಲಾಗಿದೆ.
ಈ ವಿಚಾರಗಳು ಪ್ರಾಸಿಕ್ಯೂಷನ್ ಅನುಮತಿ ನೀಡಲು ಮುಖ್ಯವೇ ಎಂದು ಜಡ್ಜ್ ಪ್ರಶ್ನಿಸಿದರು. ಇದಕ್ಕೆ ಮನು ಸಿಂಘ್ವಿ ಉತ್ತರಿಸಿ, ರಾಜ್ಯಪಾಲರ ಶೋಕಾಸ್‌ ನೋಟಿಸ್‌ ಗೆ ಉತ್ತರ ನೀಡಲಾಗಿದೆ. ಅಲ್ಲದೇ ಈ ಬಗ್ಗೆ ಒಂದು ಆಯೋಗ ಸಹ ರಚನೆಯಾಗಿದೆ. ಆ ಕಮಿಟಿ ಈಗಾಗಲೇ ತನಿಖೆ ನಡೆಸುತ್ತಿದೆ. ಟಿ.ಜೆ. ಅಬ್ರಾಹಂ ಒಬ್ಬ ಬ್ಲ್ಯಾಕ್ ಮೇಲರ್, ಆತನಿಗೆ ಸುಪ್ರೀಂ ಕೋರ್ಟ್ ದಂಡ ಹಾಕಿದೆ ಎಂದರು. ಆದರೆ, ಅದೆಲ್ಲಾ ಈಗ ಅವಶ್ಯಕತೆ ಇಲ್ಲ ಎಂದು ಜಡ್ಜ್ ನಾಗಪ್ರಸನ್ನ ಹೇಳಿದರು.

ಮುರುಗೇಶ್ ನಿರಾಣಿ, ಜೊಲ್ಲೆ, ಜನಾರ್ದನ ರೆಡ್ಡಿ ಸೇರಿ ಹಲವ ವಿರುದ್ಧದ ಅರ್ಜಿಗಳು ಬಾಕಿ ಇದೆ. ಈ ಎಲ್ಲಾ ವಿಚಾರವನ್ನ ಕ್ಯಾಬಿನೆಟ್ ಸಲಹೆಯಲ್ಲಿ ಉಲ್ಲೇಖಿಸಲಾಗಿದೆ. ಹೊಸ‌ ಬಿಎನ್‌ಎಸ್ ಕಾಯ್ದೆಯಡಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲಾಗಿದೆ. ಹೊಸ‌ ಕಾಯಿದೆಯ ಬದಲಾವಣೆ ಎಂದರೆ 420, ಈಗ ವಂಚನೆ ಅಲ್ಲ. 17ಎ ಅಡಿ ಯಾವುದೇ ಪೊಲೀಸ್ ಅಧಿಕಾರಿ ಪ್ರಾಸಿಕ್ಯೂಷನ್‌ಗೆ ಅನುಮತಿ‌ ಕೇಳಿಲ್ಲ. ಕರ್ತವ್ಯದ ಭಾಗವಾಗಿ ಸಿಎಂ ಮುಡಾ ಸೈಟ್ ಹಂಚಿಕೆಯಲ್ಲಿ ಯಾವುದೇ ತೀರ್ಮಾನ ಮಾಡಿಲ್ಲ. ವಿವೇಚನಾರಹಿತವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಈ ಮೂಲಕ ಸಂವಿಧಾನದ 163ನೇ ವಿಧಿಯನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿದರು.

ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಕ್ಯಾಬಿನೆಟ್ ನಿರ್ಣಯದ ಉದ್ದೇಶ ಸಿಎಂ ಅನ್ನು ರಕ್ಷಿಸುವುದಾಗಿರಬಹುದು. ಹೀಗಾಗಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ವಿಚಾರದಲ್ಲಿ ರಾಜ್ಯಪಾಲರಿಗೆ ಸ್ವತಂತ್ರ ಅಧಿಕಾರವಿದೆ ಎಂದು ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಮೂರ್ತಿಗಳು ಅರ್ಜಿ ವಿಚಾರಣೆಯನ್ನು ಆ.29ಕ್ಕೆ ಮುಂದೂಡಿದರು.

*ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಸಿಎಂ ರಿಟ್ ಅರ್ಜಿ ಸಲ್ಲಿಕೆ*

*ನ್ಯಾಯಾಲಯದಲ್ಲಿ ಪರಿಹಾರ ಸಿಗುವ ಸಂಪೂರ್ಣ ವಿಶ್ವಾಸ: ಮುಖ್ಯಮಂತ್ರಿ ಸಿದ್ದರಾಮಯ್ಯ*

ಮುಡಾ ಪ್ರಕರಣದಲ್ಲಿ ತನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ನ್ಯಾಯಾಲಯದಲ್ಲಿ ಪರಿಹಾರ ಸಿಗುವ ಸಂಪೂರ್ಣ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಫೋಟೋ ಜರ್ನಲಿಸ್ಟ್ ರವರ ವತಿಯಿಂದ ಆಯೋಜಿಸಲಾಗಿದ್ದ ಫೋಟೋ ಎಕ್ಸಿಬಿಷನ್ ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

*ನಾನು ಯಾವ ತಪ್ಪನ್ನೂ ಎಸಗಿಲ್ಲ*

ರಿಟ್ ಅರ್ಜಿಯಲ್ಲಿ ಮಧ್ಯಂತರ ಪರಿಹಾರವಾಗಿ ಪ್ರಾಸಿಕ್ಯೂಷನ್ ಗೆ ತಡೆಯಾಜ್ಞೆ ನೀಡಬೇಕೆಂದು ಕೋರಲಾಗಿದೆ. ಈ ರಿಟ್ ಅರ್ಜಿಯ ಬಗ್ಗೆ ಖ್ಯಾತ ವಕೀಲರಾದ ಶ್ರೀ ಅಭಿಷೇಕ್ ಮನು ಸಿಂಗ್ವಿಯವರು ವಾದ ಮಂಡಿಸಲಿದ್ದಾರೆ. ನನ್ನ ಆತ್ಮಸಾಕ್ಷಿ ಸ್ಪಷ್ಟವಾಗಿದ್ದು, ನಾನು ಯಾವ ತಪ್ಪನ್ನೂ ಎಸಗಿಲ್ಲ. ನಾನು ಮಂತ್ರಿಯಾಗಿ 40 ವರ್ಷಗಳು ಕಳೆದಿದ್ದು, ಈ ಅವಧಿಯಲ್ಲಿ ನನ್ನ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ. ಜನರ ಆಶೀರ್ವಾದದಿಂದ ಅವರ ಸೇವೆಯಲ್ಲಿ ನಿರತನಾಗಿದ್ದೇನೆ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕವಿದ್ದಂತೆ. ನಾನು ಯಾವುದೇ ತಪ್ಪು ಮಾಡಿಲ್ಲವೆಂದು ರಾಜ್ಯದ ಜನರಿಗೂ ತಿಳಿದಿದೆ ಎಂದರು.

*ಪಿತೂರಿಯ ವಿರುದ್ಧ ಕಾನೂನು ಹಾಗೂ ರಾಜಕೀಯ ಹೋರಾಟ:*

ಬಿಜೆಪಿಯವರು ಸಿಎಂ ರಾಜಿನಾಮೆ ಬೇಡಿಕೆಯಿರಿಸಿ ಪ್ರತಿಭಟನೆ ಕೈಗೊಂಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ರಾಜಭವನವನ್ನು ಬಳಸಿಕೊಂಡು ಬಿಜೆಪಿ, ಜೆಡಿಎಸ್ ಹಾಗೂ ಕೇಂದ್ರಸರ್ಕಾರದವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ದುರುದ್ದೇಶದಿಂದ ನನ್ನ ಮೇಲೆ ಬಸಿ ಬಳಿಯಲು ಇಂತಹ ಕೃತ್ಯಕ್ಕೆ ಕೈಹಾಕಿದ್ದಾರೆ. ಬಿಜೆಪಿಯವರು ದುರುದ್ದೇಶದಿಂದ ಪ್ರತಿಭಟನೆ ಮಾಡುತ್ತಿದ್ದು, ರಾಜಕೀಯವಾಗಿ ಇದನ್ನು ಎದಿರುಸುತ್ತೇವೆ. ಈ ಪಿತೂರಿಯ ವಿರುದ್ಧ ಕಾನೂನು ಹಾಗೂ ರಾಜಕೀಯ ಹೋರಾಟವನ್ನು ಕೈಗೊಳ್ಳುತ್ತೇವೆ. ಇಂತಹ ರಾಜಕೀಯ ಹೋರಾಟಗಳನ್ನು ನಿರಂತರವಾಗಿ ಮಾಡಿಕೊಂಡುಬಂದಿದ್ದು, ಇನ್ನೂ ಹೆಚ್ಚಿನ ಸ್ಪೂರ್ತಿಯೊಂದಿಗೆ ಹೋರಾಡುತ್ತೇನೆ ಎಂದರು.

*ನನ್ನನ್ನು ರಾಜಕೀಯವಾಗಿ ಮುಗಿಸಬಹುದು ಎಂಬುದು ಭ್ರಮೆ*

ಪ್ರತಿಪಕ್ಷಗಳಿಗೆ ಸಿಎಂ ಅವರಿಂದ ಭಯ ಕಾಡುತ್ತಿದ್ದು, ಅವರನ್ನೇ ಗುರಿಮಾಡಿಕೊಂಡು ಆಪಾದನೆ ಮಾಡುತ್ತಿರುವ ಬಗೆಗಿನ ಪ್ರಶ್ನೆಗೆ ಉತ್ತರಿಸುತ್ತಾ, ನಾನು ಬಡಜನರ ಪರವಾಗಿರುವುದೇ ಪ್ರತಿಪಕ್ಷಗಳ ಭಯಕ್ಕೆ ಕಾರಣವಾಗಿದೆ. ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿರುವುದು ಅವರನ್ನು ಕಾಡುತ್ತಿದೆ. ಸಿದ್ದರಾಮಯ್ಯನನ್ನು ರಾಜಕೀಯವಾಗಿ ಮುಗಿಸಿದರೆ, ಕಾಂಗ್ರೆಸ್ ಪಕ್ಷವನ್ನು ಮುಗಿಸಬಹುದು ಎಂಬ ಭ್ರಮೆಯಲ್ಲಿ ಪ್ರತಿಪಕ್ಷಗಳಿವೆ ಎಂದರು.

*ನವರಂಗಿ ನಕಲಿ ಸ್ವಾಮಿ ವಿರುದ್ಧ ರಾಜ್ಯಪಾಲರ ಕ್ರಮ ಏಕಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನೆ*

“ಜನತಾದಳದ ಅಗ್ರಗಣ್ಯ ನಾಯಕ, ನವರಂಗಿ ನಕಲಿ ಸ್ವಾಮಿ, ಬರೀ ಬುರುಡೆ ಬಿಡುವ ಕುಮಾರಸ್ವಾಮಿ ವಿರುದ್ದ ಇಲ್ಲದ ಕ್ರಮ ನಮ್ಮ ವಿರುದ್ದವೇಕೆ ರಾಜ್ಯಪಾಲರೇ? ಮುಂದಿನ 10 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುತ್ತದೆ. ನಿಮ್ಮ ಯಾವ ಹುನ್ನಾರಗಳಿಗೂ ನಮ್ಮ ಸರ್ಕಾರ ಜಗ್ಗುವುದಿಲ್ಲ, ಬಗ್ಗುವುದಿಲ್ಲ, ಹೆದರುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಗುಡುಗಿದರು.

ಮುಖ್ಯಮಂತ್ರಿಗಳ ವಿರುದ್ಧದ ವಿಚಾರಣೆಗೆ ರಾಜ್ಯಪಾಲರು ನೀಡಿರುವ ಅನುಮತಿಯನ್ನು ಖಂಡಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಶಿವಕುಮಾರ್ ಅವರು ಭಾಷಣದ ಉದ್ದಕ್ಕೂ ಪ್ರತಿಪಕ್ಷಗಳ ಹುನ್ನಾರ ಹಾಗೂ ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿ ಅವರ ಮೇಲೂ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿ ಕಳಂಕಿತರ ವಿರುದ್ದ ವಿಚಾರಣೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರೂ ಏಕೆ ಪುರಸ್ಕರಿಸಿಲ್ಲ ರಾಜ್ಯಪಾಲರೇ?” ಎಂದು ಪ್ರಶ್ನಿಸಿದರು.

“ವಿರೋಧ ಪಕ್ಷದವರು ಹತ್ತು ಜನ್ಮ ಎತ್ತಿದರೂ ಕಾಂಗ್ರೆಸ್ ಸರ್ಕಾರ ಬೀಳಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು ರಾಜಿನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮಂತ್ರದಿಂದ ಮಾವಿನಕಾಯಿ ಉದುರಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರ ಪರವಾಗಿ ಡಿ.ಕೆ.ಶಿವಕುಮಾರ್ ಒಬ್ಬನೇ ಅಲ್ಲ ಇಂಡಿಯಾ ಒಕ್ಕೂಟ ಹಾಗೂ ರಾಜ್ಯದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಕಟ್ಟ ಕಡೆಯ ಮತದಾರರು ಆಶೀರ್ವಾದ ಮಾಡಿ ಬೆನ್ನಲುಬಾಗಿ ನಿಂತಿದ್ದಾರೆ” ಎಂದರು.

*ರಾಜ್ಯಪಾಲರೇ ಬಿಜೆಪಿಯವರು ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ*

“ಸರ್ಕಾರ ನೀಡಿರುವ ಸಲಹೆಗಳನ್ನೂ ಓದದ ರಾಜ್ಯಪಾಲರು ಟಿ.ಜೆ.ಅಬ್ರಹಾಂ ಎನ್ನುವ ವ್ಯಕ್ತಿ ಬೆಳಗ್ಗೆ ಅರ್ಜಿ ಕೊಟ್ಟರೆ, ಸಾಯಂಕಾಲದ ವೇಳೆಗೆ ಒಂದೇ ದಿನದಲ್ಲಿ ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಬಿಜೆಪಿಯವರು ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ರಾಜ್ಯಪಾಲರೇ ನಿಮ್ಮದು ಸಾಂವಿಧಾನಿಕ ಹುದ್ದೆ, ನಿಮ್ಮ ಮೇಲೆ ಈಗಲೂ ಗೌರವವಿದೆ. ನಿಮಗೆ ಸಾಕಷ್ಟು ಸಮಯವಿದ್ದು ವಿಚಾರಣೆಗೆ ನೀಡಿರುವ ಅನುಮತಿ ವಾಪಸ್ ಪಡೆಯಿರಿ” ಎಂದು ಆಗ್ರಹಿಸಿದರು.

*ರಾಜ್ಯಪಾಲರ ಹುದ್ದೆ ಸೃಷ್ಟಿ ಮಾಡಿದ್ದೇ ಕಾಂಗ್ರೆಸ್*

“ರಾಜ್ಯಪಾಲರು ಸಿಎಂ ಅವರ ವಿರುದ್ಧ ನೀಡಿರುವ ಅನುಮತಿ ವಿರುದ್ದ ನ್ಯಾಯಲಯದಲ್ಲಿ ನಮ್ಮ ಪರವಾಗಿ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇವೆ. ಹಿಂಬಾಗಿಲ ಮೂಲಕ ಬಿಜೆಪಿ, ಜೆಡಿಎಸ್ ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿವೆ. ಸಂವಿಧಾನದ ಮೂಲಕ ರಾಜ್ಯಪಾಲರ ಕುರ್ಚಿಯನ್ನು ಸೃಷ್ಟಿ ಮಾಡಿದ್ದೇ ಕಾಂಗ್ರೆಸ್ ಸರ್ಕಾರ. ನಮ್ಮ ಪಕ್ಷ ಕೊಟ್ಟಿರುವ ಸಂವಿಧಾನದ ಹಕ್ಕನ್ನು ದುರುಪಯೋಗ ಪಡಿಸಿಕೊಂಡು ಮುಖ್ಯಮಂತ್ರಿಗಳ ವಿರುದ್ಧ ವಿಚಾರಣೆಗೆ ಅವಕಾಶ ನೀಡಿರುವುದು ಹಾಸ್ಯಾಸ್ಪದ” ಎಂದರು.

“ಪ್ರತಿಪಕ್ಷಗಳಿಗೆ ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳ ಮೇಲೆ ಅಸೂಯೆ. ಬಡವರ ಪರವಾಗಿ ಕೆಲಸ ಮಾಡುತ್ತಿರುವ ಹಿಂದುಳಿದ ವರ್ಗದ ನಾಯಕನೊಬ್ಬ ಗ್ಯಾರಂಟಿಗಳನ್ನು ನೀಡಿ ಜನರ ಹೃದಯ ಗೆದ್ದಿದ್ದಾರೆ ಎಂಬುದನ್ನು ಪ್ರತಿಪಕ್ಷಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಧಿಕಾರ ಸಿಗಲಿಲ್ಲ ಎಂದು ಕೈ, ಕೈ ಹೊಸಕಿಕೊಳ್ಳುತ್ತಿದ್ದಾರೆ” ಎಂದು ಕಿಡಿಕಾರಿದರು.

“ಪ್ರತಿಪಕ್ಷದವರಿಗೆ ಹೊಟ್ಟೆಯುರಿ ಬಂದರೆ ನಮ್ಮ ಬಳಿ ಇರುವ ವೈದ್ಯರಿಂದ ಔಷಧಿ ಕಳಿಸಿಕೊಡೋಣ. ಹೊಟ್ಟೆಯುರಿಗೆ ಔಷಧವಿದೆ ಆದರೆ ಅಸೂಯೆಗೆ ಮದ್ದಿಲ್ಲ. ನಾವು ಅವರ ಮಾತುಗಳಿಗೆ ತಲೆಕೆಡಿಸಿಕೊಳ್ಳುವ ಪ್ರಮೇಯವಿಲ್ಲ. ಏಕೆಂದರೆ ವಿಚಾರಣೆಗೆ ನೀಡಿರುವ ಅನುಮತಿಯನ್ನು ನ್ಯಾಯಲಯವು ಧಿಕ್ಕರಿಸಿ ನ್ಯಾಯ ನೀಡುವ ನಂಬಿಕೆಯಿದೆ” ಎಂದರು.

*ರಾಜ್ಯಪಾಲರೇ ಒಳಸಂಚು ಏಕೆ?*

“ಜನ ಬಹುಮತ ನೀಡಿರುವ ಕಾರಣಕ್ಕೆ ರಾಜ್ಯಪಾಲರು ಸರ್ಕಾರಕ್ಕೆ ಪ್ರಮಾಣ ವಚನ ಭೋದನೆ ಮಾಡಿದರು. ಏಕೆ ಈಗ ಒಳಸಂಚು ಮಾಡುತ್ತಿದ್ದೀರಿ. ನಿಮಗೆ ಸಂವಿಧಾನವನ್ನು ಕಾಪಾಡುವ ಜವಾಬ್ದಾರಿ ನೀಡಲಾಗಿದೆ. ಆದರೆ ನೀವು ಏಕೆ ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಿ? ಸಂವಿಧಾನವನ್ನು ಕಾಪಾಡಬೇಕೆ ಹೊರತು, ಆ ಕುರ್ಚಿಗೆ ಕಳಂಕ ತರಬಾರದು ಎಂದು ನಿಮಗೆ ಸಲಹೆಯನ್ನು ನೀಡುತ್ತಿದ್ದೇವೆ” ಎಂದು ಹೇಳಿದರು.

“ನಮ್ಮ ಮುಖ್ಯಮಂತ್ರಿಗಳ ಮೇಲೆ ಅಗಾಧವಾದ ಆರೋಪಗಳು ಬಂದಿವೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ. ಆ ಆರೋಪಗಳ ಮೇಲೆ ನೀವು ತನಿಖೆ ನಡೆಸಿದ್ದೀರಾ? ಇದರ ಬಗ್ಗೆ ಯಾವುದಾದರೂ ತನಿಖಾ ಸಂಸ್ಥೆಗಳು ವರದಿ ನೀಡಿದ್ದಾವೆಯೇ? ಅಧಿಕಾರಿಗಳು, ಲೋಕಾಯುಕ್ತರು ಇಬ್ಬರಲ್ಲಿ ಯಾರು ನಿಮಗೆ ವರದಿ ನೀಡಿದ್ದಾರೆ” ಎಂದು ಖಾರವಾಗಿ ಪ್ರಶ್ನಿಸಿದರು.

“ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಬೇಕು ಎಂದು ಬ್ರಿಟಿಷರು 200 ವರ್ಷಗಳ ಕಾಲ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಈ ದೇಶದ ಜನರಿಗೆ ಸಂವಿಧಾನ, ಪ್ರಜಾಪ್ರಭುತ್ವ ಸೇರಿದಂತೆ ಎಲ್ಲಾ ಹಕ್ಕುಗಳನ್ನು ನೀಡಿದ್ದು ಕಾಂಗ್ರೆಸ್. ನಮ್ಮ ಸರ್ಕಾರದ ಯೋಜನೆಗಳನ್ನು ನೋಡಿ ಬಿಜೆಪಿಯವರು ಅನೇಕ ಕಡೆ ಕರ್ನಾಟಕ ಮಾಡೆಲ್ ಎಂದು ಜಾರಿಗೆ ತರುತ್ತಿದ್ದಾರೆ. ಇದು ಆ ಪಕ್ಷಕ್ಕೆ ಹೊಟ್ಟೆಯುರಿಯಾಗಿದೆ” ಎಂದರು.

“ನನ್ನ ಅಧ್ಯಕ್ಷತೆ ಹಾಗೂ ಸಿದ್ದರಾಮಯ್ಯ ಅವರ ಮುಖಂಡತ್ವಕ್ಕೆ 136 ಸ್ಥಾನವನ್ನು ನೀಡಿ, ಉತ್ತಮ ಆಡಳಿತ ನೀಡಿ ಎಂದು ಜನ ಅವಕಾಶಕೊಟ್ಟಿದ್ದಾರೆ. ಸರ್ಕಾರವನ್ನು ಅಲುಗಾಡಿಸುವವರ ವಿರುದ್ಧದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಎಲ್ಲರ ಜೊತೆ ಚರ್ಚೆ ಮಾಡಿ ಹೋರಾಟ ಮುಂದುವರೆಸುತ್ತೇವೆ. ಸಿದ್ದರಾಮಯ್ಯ ಅವರ ಜೊತೆ ನಿಂತು ಅವರ ಪರವಾಗಿ ಇರುತ್ತೇವೆ” ಎಂದರು.

*ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಸಾಧ್ಯವಿಲ್ಲ*

“ಬಿಜೆಪಿಯ ಹುನ್ನಾರಗಳನ್ನು ಜನರಿಗೆ ತಿಳಿಸುವ ಕೆಲಸ ಮುಂದಿನ ದಿನಗಳಲ್ಲಿ ಮಾಡಲಾಗುವುದು. ಬಿಜೆಪಿಯವರು ಅಧಿಕಾರಕ್ಕೆ ಏಕೆ ಬರಲಿಲ್ಲ. ನೀವು ಈ ಹಿಂದೆ 17 ಜನರನ್ನು ಕರೆದುಕೊಂಡು ಹೋಗಿ ಆಪರೇಷನ್ ಕಮಲ ಮಾಡಿ ಜನತಾದಳ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿದರು. ಈ ಬಾರಿಯೂ ಸ್ವಲ್ಪ ಪ್ರಯತ್ನ ಪಟ್ಟರು. ಆದರೆ ಅವರ ಆಟ ನಡೆಯಲಿಲ್ಲ. ಮುಂದಕ್ಕೂ ನಡೆಯುವುದಿಲ್ಲ. ಕಾಂಗ್ರೆಸ್ ಪಕ್ಷದ ಒಬ್ಬನೇ ಒಬ್ಬ ಶಾಸಕನನ್ನು ಖರೀದಿ ಮಾಡಲು ಸಾಧ್ಯವಿಲ್ಲ” ಎಂದು ಸವಾಲು ಹಾಕಿದರು.

“ಮುಡಾ ಅಕ್ರಮದಲ್ಲಿ ಸಿದ್ದರಾಮಯ್ಯ ಅವರು ಎಲ್ಲಾದರೂ ಪ್ರಭಾವ ಬೀರಿದ್ದಾರೆಯೇ. ಸಿದ್ದರಾಮಯ್ಯ ಅವರ ಪತ್ನಿಗೆ ಅವರ ಅಣ್ಣ ಅರಿಶಿನ, ಕುಂಕುಮಕ್ಕೆ ಎಂದು ಜಮೀನು ದಾನ ಕೊಟ್ಟಿದ್ದರು. ಇದನ್ನು ಮುಡಾ ಆಕ್ರಮಿಸಿಕೊಂಡ ಕಾರಣಕ್ಕೆ ಪರಿಹಾರ ನೀಡಿ ಎಂದು ಮನವಿ ಮಾಡಿದ್ದರು. ಸಿಎಂ ಅವರ ಪತ್ನಿ ಇಂತಲ್ಲೇ ಸೈಟ್ ಬೇಕು ಎಂದು ಎಲ್ಲಿಯೂ ಮನವಿ ಮಾಡಿಲ್ಲ. ಸಿದ್ದರಾಮಯ್ಯ ಅವರು ಎಲ್ಲಿಯೂ ಪ್ರಭಾವ ಬೀರಿಲ್ಲ. ಇದು ನಡೆದಾಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಈಗ ಅವರೇ ಆರೋಪ ಮಾಡುತ್ತಿರುವುದು ಎಷ್ಟು ಸರಿ?” ಎಂದು ಹೇಳಿದರು.