ಕಮಲಶಿಲೆ : ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಅಮ್ಮನವರ ದೇವಳದ ಸಮೀಪದಲ್ಲಿ ಹರಿಯುವ ಪವಿತ್ರ ಕುಬ್ಜಾ ನದಿ ಬುಧವಾರ ರಾತ್ರಿ 1.45 ರ ಸುಮಾರಿಗೆ ದೇವಳದ ಗರ್ಭಗುಡಿ ಪ್ರವೇಶಿಸಿ ದೇವಿಯ ಪಾದ ಸ್ಪರ್ಶಿಸಿ ಸ್ನಾನ ಮಾಡಿಸಿದ್ದಾಳೆ.ಪ್ರತಿ ವರ್ಷ ಮಳೆಗಾಲದಲ್ಲಿ ದೇವಳದ ಸಮೀಪದಲ್ಲಿ ಹರಿಯುವ ಪವಿತ್ರ ಕುಬ್ಜಾ ನದಿ ದೇವಳದ ಗರ್ಭಗುಡಿ ಪ್ರವೇಶಿಸಿ ದೇವಿಯ ಪಾದ ಸ್ಪರ್ಶಿಸಿ ಸ್ನಾನ ಮಾಡಿಸುವುದು ಅನಾವೃಷ್ಠಿ ದೂರವಾಗಿ ಸುಭಿಕ್ಷೆ ನೆಲೆಯಾಗಲು ಶುಭ ಸಂದೇಶ ಎನ್ನುವುದು ಹಿಂದಿನಿಂದಲೂ ನಂಬಿ ಬಂದ ವಾಡಿಕೆಯಾಗಿದೆ. ದೇವಳದ ಗರ್ಭಗುಡಿ ಪ್ರವೇಶಿಸಿ ದೇವಿಯ ಪಾದ ಸ್ಪರ್ಶಿಸಿದ ಬಳಿಕ ಭಕ್ತಾದಿಗಳು ಶುಭ ಘಳಿಗೆಯಲ್ಲಿ ದರ್ಶನ ಪಡೆಯುತ್ತಾರೆ. ಕುಬ್ಜಾ ನದಿ ನೀರು ದೇವಳದ ಗರ್ಭಗುಡಿಯಲ್ಲಿರುವ ದೇವಿಯ ಉದ್ಬವ ಲಿಂಗವನ್ನು ಮುಳುಗಿಸಿದಾಗ ದೇವಿಯ ಸ್ನಾನವಾಗಿದೆ ಎನ್ನುವುದು ನಂಬಿಕೆಯಾಗಿದೆ. ಮಂಗಳಾರತಿ ಬೆಳಗಿದ ಬಳಿಕ ದೇವಿಯ ಉದ್ಬವ ಲಿಂಗದ ಬಳಿ ಇಟ್ಟಿರುವ ಹೂವು ನೀರಿನಲ್ಲಿ ತೇಲಿಕೊಂಡು ಗರ್ಭಗುಡಿಯಿಂದ ಹೊರ ಬಂದು ನೀರು ಇಳಿಮುಖಗೊಳ್ಳುವ ಅದ್ಬುತ ಕ್ಷಣದ ಬಳಿಕ ಭಕ್ತಾದಿಗಳು ಸ್ನಾನ ಮಾಡುತ್ತಾರೆ. ಧಾರ್ಮಿಕ ನೆಲೆಯಲ್ಲಿ ಮಳೆಗಾಲದಲ್ಲಿ ವರ್ಷಕ್ಕೊಮ್ಮೆ ಪವಿತ್ರ ಕುಬ್ಜಾ ನದಿ ದೇವಳದ ಗರ್ಭಗುಡಿ ಪ್ರವೇಶಿಸಿ ದೇವಿಯ ಪಾದ ಸ್ಪರ್ಶಿಸಿ ಸ್ನಾನ ಮಾಡಿಸುವ ದೇವಿಯ ಮಹಿಮೆಯ ಸನ್ನಿವೇಶವನ್ನು ಕಣ್ಣು ತುಂಬಿಸಿಕೊಳ್ಳಲು ಪ್ರತಿ ಸಲ ಊರ ಪರವೂರ ಸಾವಿರಾರೂ ಭಕ್ತಾದಿಗಳು ತಂಡೋಪತಂಡವಾಗಿ ಆಗಮಿಸುತ್ತಾರೆ. ದೇವಳದ ಅನುವಂಶಿಕ ಮೊಕ್ತೇಸರ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ, ಅನುವಂಶಿಕ ಸಹ ಮೊಕ್ತೇಸರ ಅಜ್ರಿ ಚಂದ್ರಶೇಖರ ಶೆಟ್ಟಿ, ವ್ಯವಸ್ಥಾಪಕ ಗುರುಭಟ್,ಅರ್ಚಕ ವೃಂದವರು, ಊರ ಪರವೂರ ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.