ಬೆಳಗಾವಿ :
ದಿನ ಬೆಳಗಾದರೆ ತನಗೆ ವಿಚ್ಛೇದನ ನೀಡುವಂತೆ ಒತ್ತಾಯಿಸುತ್ತಿದ್ದ ಪತಿಯನ್ನು ಜೈಲಿಗೆ ಅಟ್ಟುವಲ್ಲಿ ಬೆಳಗಾವಿಯ ಮಹಿಳೆಯೊಬ್ಬರು ಯಶಸ್ವಿಯಾಗಿದ್ದಾರೆ.

ಸಾಕಷ್ಟು ಬುದ್ಧಿ ಹೇಳಿದರೂ ಕೇಳದ ಪತಿಗೆ ಕೊನೆಗೂ ತಾನೇ ಸ್ವತಃ ಪೊಲೀಸ್ ಠಾಣೆ ಏರಿ ಮಹಿಳೆ ದೂರು ನೀಡಿದ್ದಾರೆ. ದೂರಿನಲ್ಲಿ ತಿಳಿಸಿದಂತೆ ಪೊಲೀಸರು ಆತನ ಮೊಬೈಲ್ ಪರಿಶೀಲನೆ ನಡೆಸಿದ್ದಾರೆ. ಆಗ ಆತ ಬ್ಲಾಕ್ ಮೇಲ್ ಮಾಡಲು ಇಟ್ಟುಕೊಂಡಿರುವ ವಿಡಿಯೋ ಮತ್ತು ಫೋಟೋಗಳು ಸಿಕ್ಕಿವೆ. ಪೊಲೀಸರು ಅವನನ್ನು ವಿಚಾರಿಸಲು ಬಂಧಿಸಲು ಯತ್ನಿಸಿದಾಗ ಆತ್ಮಹತ್ಯೆಗೆ ಯತ್ನಿಸಿದ್ದು ಆಸ್ಪತ್ರೆ ದಾಖಲಾಗಿ ಚೇತರಿಸಿಕೊಂಡ ನಂತರ ಇದೀಗ ಹಿಂಡಲಗಾ ಜೈಲಿಗಟ್ಟಿದ್ದಾರೆ. ಆತನ ತಪ್ಪು ಪೊಲೀಸರ ಮುಂದೆ ಬಯಲಾಗಿದ್ದು ಅವನ ಮೇಲೆ ಕಾನೂನು ಕ್ರಮ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಟ್ಟಿಕೊಂಡವಳು ಬೇಡ :
ಬೆಳಗಾವಿಯ ಕಿರಣ ಪಾಟೀಲ ಎಂಬುವವನು
ಕಟ್ಟಿಕೊಂಡ ಹೆಂಡತಿಗೆ ವಿಚ್ಛೇದನ ನೀಡುವಂತೆ ಒತ್ತಾಯಿಸುತ್ತಿದ್ದ. ನೀನು ನನಗೆ ವಿಚ್ಛೇದನ ನೀಡದಿದ್ದರೆ ನಿನ್ನ ಅಶ್ಲೀಲ ವಿಡಿಯೋ ಮತ್ತು ಫೋಟೋ ವೈರಲ್ ಮಾಡುತ್ತೇನೆ ಎಂದು ಪತ್ನಿಗೆ ಒಂದೇ ಸಮನೆ ಬೆದರಿಕೆ ಹಾಕುತ್ತಿದ್ದ. ಈತ ಪತ್ನಿಗೆ ವಿಚ್ಛೇದನ ನೀಡಿ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ತೀರ್ಮಾನಿಸಿದ್ದ. ಇದಕ್ಕಾಗಿ ವಿಚ್ಛೇದನ ನೀಡುವಂತೆ ಪತ್ನಿಗೆ ಪದೇಪದೇ ಒತ್ತಾಯಿಸುತ್ತಿದ್ದ. ಜೊತೆಗೆ ಪತ್ನಿಯ ವ್ಯಕ್ತಿತ್ವಕ್ಕೆ ಕಳಂಕ ತರುವ ಖಾಸಗಿ ಕ್ಷಣದ ವಿಡಿಯೋ ಮತ್ತು ಫೋಟೋ ತೆಗೆದಿಟ್ಟು ಅವುಗಳನ್ನು ವೈರಲ್ ಮಾಡುವ ಬೆದರಿಕೆಯೊಡ್ಡುತ್ತಿದ್ದ.

ನಾನಾಪರಿಯಾಗಿ ಪತಿಗೆ ಬುದ್ಧಿ ಹೇಳಿದರೂ ಪ್ರಯೋಜನವಾಗಲಿಲ್ಲ. ಕೊನೆಗೂ ಪತ್ನಿ ಪೊಲೀಸ್ ಠಾಣೆಯ ಕಟ್ಟೆ ಏರಿದ್ದಾಳೆ. ಸೈಬರ್ ಠಾಣೆಯಲ್ಲಿ ಕೇಸು ದಾಖಲು ಮಾಡಿದ್ದಾಳೆ. ಪೊಲೀಸರು ಕಿರಣ್ ನ ವಿಚಾರಣೆ ನಡೆಸಿದಾಗ ಆತನ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ಹಾಗೂ ಫೋಟೋ ಇರುವುದು ಬೆಳಕಿಗೆ ಬಂದಿದೆ.

ಪೊಲೀಸರು ಕಿರಣನನ್ನು ಬಂಧಿಸಲು ಹೋದಾಗ ಆತ ತಪ್ಪಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ನಿನ್ನೆ ಆತ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬೆನ್ನಲ್ಲೇ ಪೊಲೀಸರು ಅವನನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ ಪಿ ಡಾ.ಭೀಮಶಂಕರ ಗುಳೇದ ಅವರು ನೊಂದ ಮಹಿಳೆ ಪೊಲೀಸ್ ಠಾಣೆಯಲ್ಲಿ ಪತಿಯ ಬಗ್ಗೆ ದೂರು ನೀಡಿದ್ದಳು. ಕೇಸ್ ದಾಖಲಾಗಿದ್ದು ನ್ಯಾಯಾಲಯದಲ್ಲಿದೆ. ಕಿರಣನಲ್ಲಿ ಇರುವ ವಿಡಿಯೋ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.