ಇಂದಿನ ದಿನಗಳಲ್ಲಿ ಮಾನವನನ್ನು ಕಾಡುವ ಅನೇಕ ತೊಂದರೆಗಳಲ್ಲಿ ನಿದ್ರೆ ಬರದಿರುವ ಕಾಯಿಲೆಯೂ ಒಂದು. ನಗರಗಳಲ್ಲಿ ಬಹಳ ಮಂದಿಗೆ ನಿದ್ದೆಯ ಗುಳಿಗೆಗಳನ್ನು ನುಂಗಿದ ಬಳಿಕವೇ ನಿದ್ದೆ ಬರುತ್ತದೆ. ನಮ್ಮ ಔಷಧಾಲಯಗಳಲ್ಲಿ ಅತಿ ಹೆಚ್ಚು ಮಾರಾಟವಾಗುವ ಮದ್ದೆಂದರೆ-ನಿದ್ರಾ ಗುಳಿಗೆಯೆನ್ನುತ್ತಾರೆ. ಆದರೆ ಹೀಗೆ ನಿದ್ರಾ ಗುಳಿಗೆಯನ್ನು ನುಂಗುವುದು ತಪ್ಪು. ಏಕೆಂದರೆ ಅದೊಂದು ಕೆಟ್ಟ ಚಟವಾಗಿ ಬಿಡುವ ಅಪಾಯವಿದೆ-ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ. ಹಾಗಿದ್ದರೆ ಸಹಜವಾಗಿ ನಿದ್ದೆ ಬರುವಂತೆ ಮಾಡುವ ವಿಧಾನವೇನು ? ಎಂಬುದನ್ನು ತಿಳಿಸುವ ಒಂದು ರೋಚಕ ಪ್ರಸಂಗ ಇಲ್ಲಿದೆ. ಮೊಗಲ ವಂಶದ ಅರಸನಾದ ಅಕ್ಬರನಿಗೆ ಅತ್ಯಂತ ಆತ್ಮೀಯ ಒಡನಾಡಿಯಾಗಿದ್ದವನು-ಬೀರ್‌ಬಲ್. ಇಬ್ಬರೂ ಜತೆಯಾಗಿ ಸಂಜೆಯ ವಾಯು-ವಿಹಾರಕ್ಕೆ ಒಂದು ಹಳ್ಳಿಯ ರಸ್ತೆಯಲ್ಲಿ ಹೊರಟಿದ್ದರು. ದಾರಿಯಲ್ಲಿ ಕಲ್ಲು-ಮುಳ್ಳು ತುಂಬಿದ್ದುದರಿಂದ ಕಾಲಿಗೆ ಚುಚ್ಚ ತೊಡಗಿದವು. ಅಕ್ಬರನಿಗೆ ನಡೆಯುವುದೇ ಕಷ್ಟವಾಯಿತು. ಆದರೆ ಅದೇ ರಸ್ತೆಯ ಪಕ್ಕದಲ್ಲಿ ಹರಡಿದ್ದ ಕಲ್ಲುಗಳ ಮೇಲೆ ಚಾಪೆಯೊಂದನ್ನು ಬಿಡಿಸಿ, ಅದರ ಮೇಲೊಬ್ಬ ಕೂಲಿಕಾರ ಮಲಗಿದ್ದ; ಗಾಢನಿದ್ರೆಯಲ್ಲಿದ್ದ. ಅರಸನಿಗೆ ಆಶ್ಚರ್ಯವಾಯಿತು. ಬೀರ್‌ಬಲ್ಲನೊಡನೆ ‘ಇದರ ಒಳಗುಟ್ಟೇನು ?’ ಎಂದು ಪ್ರಶ್ನಿಸಿದ. ಬೀರ್‌ಬಲ್ ‘ಅವನನ್ನು ಅರಮನೆಗೆ ಕರೆದೊಯ್ದು ವಿಚಾರಿಸೋಣ’ ಎಂದು ನುಡಿದ, ಅರಮನೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿಸಿದ. ಆದರೆ ಅರಮನೆಗೆ ತಲಪಿದ ಬಳಿಕ, ಒಳ್ಳೆಯ ಊಟ ಮಾಡಿಸಿ, ಒಳ್ಳೆಯ ಹಾಸಿಗೆಯ ಮೇಲೆ ಮಲಗಿಸಿದರೂ ಆ ಕೂಲಿಕಾರನಿಗೆ ನಿದ್ದೆಯೇ ಬರಲಿಲ್ಲ. ಬಹುಶಃ ಚಾಪೆಯಡಿಯಲ್ಲಿ ಕಲ್ಲು ಇದ್ದರೆ ನಿದ್ದೆ ಬರುತ್ತದೆ ಎಂದು ಭಾವಿಸಿ ಹಾಸಿಗೆಯಡಿಯಲ್ಲಿ ಕಲ್ಲುಗಳನ್ನು ಹರಡಿ ಮಲಗಿಸಿದರು. ಊಹೂಂ, ನಿದ್ದೆ ಬರಲೇ ಇಲ್ಲ. ಆಗ ಕೂಲಿಕಾರನನ್ನೇ ‘ನಿನಗೇಕೆ ನಿದ್ದೆ ಬರುತ್ತಿಲ್ಲ ?’ ಎಂದು ಪ್ರಶ್ನಿಸಿದಾಗ, ಅವನು ಹೀಗೆ ಉತ್ತರಿಸಿದ ‘ಮಹಾರಾಜರೆ, ನಾನೊಬ್ಬ ರೈತ. ದಿನವಿಡೀ ಹೊಲದಲ್ಲಿ ದುಡಿದಾಗ, ನನಗೆ ತಾನಾಗಿಯೇ ನಿದ್ದೆ ಬರುತ್ತದೆ. ಈ ಅರಮನೆಗೆ ಬಂದಾಗ ಅಂತಹ ದುಡಿತ, ಪರಿಶ್ರಮವಿಲ್ಲದೆ ನಿದ್ದೆ ಬರುತ್ತಿಲ್ಲ’ ಈ ಮಾತನ್ನು ಕೇಳಿದಾಗ ಅಕ್ಬರನು ಸಂತಸದಿಂದ ‘ಶಾಭಾಷ್’ ಎಂದು ಚಪ್ಪಾಳೆ ತಟ್ಟಿದ. ಬೀರ್‌ಬಲ್‌ನೂ ಆನಂದದಿಂದ ಅರಸನನ್ನು ಅನುಕರಿಸುತ್ತಾ ಚಪ್ಪಾಳೆ ತಟ್ಟಿದ. ಇಲ್ಲಿ ಸಹಜ-ನಿದ್ರೆಯ ರಹಸ್ಯ ಮತ್ತು ಪರಿಶ್ರಮದ ಮಹತ್ವ ಅಡಗಿದೆ. ದುಡಿದು ತಿನ್ನುವ ರೈತರು, ಕೂಲಿಕಾರರು, ಜನಸಾಮಾನ್ಯರು ತಮ್ಮ ಪರಿಶ್ರಮದಿಂದ ಇಮ್ಮಡಿ ಲಾಭವನ್ನು ಪಡೆಯುತ್ತಾರೆ. ಹೊಲದಲ್ಲಿ ದುಡಿಯುವುದರಿಂದ ದೊರೆಯುವ ಆರ್ಥಿಕ ಲಾಭದೊಂದಿಗೇ, ದೈಹಿಕ ಆರೋಗ್ಯ ಲಾಭವನ್ನೂ ಪಡೆಯುತ್ತಾರೆ. ಈ ಆರೋಗ್ಯ ಲಾಭಕ್ಕೆ ಬೆಲೆ ಕಟ್ಟಲು ಸಾಧ್ಯವೇ ?

ಕೃಪೆ:ಡಾ.ಡಿ.ವೀರೇಂದ್ರ ಹೆಗ್ಗಡೆ.
ಸಂಗ್ರಹ : ವೀರೇಶ್ ಅರಸಿಕೆರೆ.