ಶಿವಮೊಗ್ಗ: ಅಳಿಯ ಪ್ರತಾಪ ಅವರು ನನ್ನ ವ್ಯವಹಾರ,ರಾಜಕೀಯ ಸೇರಿದಂತೆ ಎಲ್ಲವನ್ನೂ ಮನೆ ಮಗನ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದರು. ಆದರೆ ಮಕ್ಕಳಾಗಿಲ್ಲ ಎಂಬ ವಿಚಾರದಲ್ಲಿ ಅಳಿಯನಿಗೆ ಕೊರಗಿತ್ತು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಸಿ. ಪಾಟೀಲ ಅವರು, ಮದುವೆಯಾಗಿ 16 ವರ್ಷ ಆಗಿತ್ತು. ಮಕ್ಕಳಾಗದಿರುವ ವಿಚಾರದಲ್ಲಿ ಆತನಿಗೆ ಕೊರಗಿತ್ತು. ಕುಡಿತದ ಚಟವೂ ಇತ್ತು. ನಂತರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ 2 ತಿಂಗಳು ಚಿಕಿತ್ಸೆ ಕೊಡಿಸಿದ್ದೆ. ಎಲ್ಲಾ ಸರಿ ಹೋಗಿತ್ತು. ನಮ್ಮ ವ್ಯವಹಾರಗಳನ್ನೆಲ್ಲ ಅವರೇ ನೋಡಿಕೊಳ್ಳುತ್ತಿದ್ದರು. ಸೋಮವಾರ ಜಮೀನಿನ ಕೆರೆಗಳ ಕಡೆಗೆ ನಾನು ಹೋಗಿ ಬರುವಾಗ ವಿಷಯ ಗೊತ್ತಾಯಿತು ಎಂದು ತಿಳಿಸಿದರು.
ಮಕ್ಕಳಾಗದ ಹಿನ್ನೆಲೆಯಲ್ಲಿ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಯತ್ನಿಸಿದ್ದೆವು. ಇದಕ್ಕಾಗಿ ನಾವು ಕೋರ್ಟ್ ಅನುಮತಿ ಕೇಳಿದ್ದೆವು. ಅನುಮತಿ ಸಿಗುವುದರಲ್ಲಿತ್ತು. ಇದರ ಮಧ್ಯೆಯೇ ಪ್ರತಾಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತ ಬಿಸಿ ಪಾಟೀಲ ಭಾವುಕರಾದರು.

ಆತ ತನ್ನೂರು ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮಕ್ಕೆ ಹೋಗಿದ್ದ. ಮಧ್ಯಾಹ್ನದ ವೇಳೆಗೆ ಮೆಕ್ಕೆಜೋಳಗಳಿಗೆ ಹಾಕುವ ಕ್ರಿಮಿನಾಶಕ ಮಾತ್ರೆಗಳನ್ನು ಸೇವಿಸಿದ್ದಾನೆ ಎಂದು ಆತನ ಸಹೋದರ ಪ್ರಭುದೇವ ನನಗೆ ಕರೆ ತಿಳಿಸಿದ್ದ. ನಂತರ ಪ್ರತಾಪನಿಗಾಗಿ ಹುಡುಕಾಡುತ್ತಿದ್ದೆವು. ದಾವಣಗೆರೆ ಮತ್ತು ಶಿವಮೊಗ್ಗ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದೆವು. ಹೊನ್ನಾಳಿ ಸಮೀಪದ ಪ್ರದೇಶದಲ್ಲಿ ಅವರ ಮೊಬೈಲ್ ಲೊಕೇಷನ್‌ ಸಿಕ್ಕಿತ್ತು. ಕರೆ ಮಾಡಿದಾಗ ಹೊನ್ನಾಳಿ -ಮಲೆಬೆನ್ನೂರು ರಸ್ತೆಯಲ್ಲಿ ಇದ್ದೇನೆ, ವಿಷ ಸೇವಿಸಿದ್ದೇನೆ ಎಂದು ತಿಳಿಸಿದ್ದರು. ನಂತರ ಹೊನ್ನಾಳಿ ಸಮೀಪ ಸಿಕ್ಕಿದ್ದರು. ನಂತರ ಅವರನ್ನು ದಾವಣಗೆರೆಗೆ ಶಿಫ್ಟ್ ಮಾಡಲಿಕ್ಕೆ ಹೇಳಿದ್ದೆವು. ಆದರೆ ಶಿವಮೊಗ್ಗ ಹತ್ತಿರ ಎಂದು ಇಲ್ಲಿಗೆ ಶಿಫ್ಟ್ ಮಾಡಲಾಗಿತ್ತು ಎಂದರು. ಮಂಗಳವಾರ ಚನ್ನಗಿರಿ ತಾಲೂಕಿನ ಕತ್ತಲಗೆರೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಿದರು.

ಬಿ.ಸಿ. ಪಾಟೀಲ ಅವರ ಮೊದಲ ಪುತ್ರಿ ಸೌಮ್ಯ ಅವರ ಪತಿ ಕೆ.ಜಿ‌. ಪ್ರತಾಪಕುಮಾರ (42) ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದ ಬಳಿ ಅರಣ್ಯ ಪ್ರದೇಶದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿರೇಕೆರೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಅವರು ಹೊನ್ನಾಳಿ ಸಮೀಪದ ಅರಕೆರೆ ಗ್ರಾಮದ ಬಳಿ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವಿಸಿದ್ದಾರೆ. ವಿಷ ಸೇವಿಸಿ ಅಸ್ವಸ್ಥರಾಗಿದ್ದ ಅವರನ್ನು ಕಂಡವರು ಹೊನ್ನಾಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.‌ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.