ಪಿಡಿಒಗಳಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು :
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳಿಗೆ ರಾಜ್ಯವೃಂದಕ್ಕೆ ಸೇರಿಸುವ ತಿದ್ದುಪಡಿ ನಿಯಮಗಳ ಕರಡನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಬುಧವಾರ ಪ್ರಕಟಿಸಿದೆ.

ಇದರಿಂದ 1500 ಕ್ಕೂ ಹೆಚ್ಚು ಪಿಡಿಒಗಳಿಗೆ ಹಿರಿಯ ಪಿಡಿಒಗಳಾಗಿ ಬಡ್ತಿ ನೀಡುವುದಕ್ಕೆ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ಪಿಡಿಒ ಹುದ್ದೆ ಜಿಲ್ಲಾ ಮಟ್ಟದ ವೃಂದಕ್ಕೆ ಮಾತ್ರ ಸೀಮಿತವಾಗಿತ್ತು. ಈಗ ಅದನ್ನು ರಾಜ್ಯ ವೃಂದಕ್ಕೆ ಸೇರಿಸಬೇಕೆಂಬ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದಂತಾಗಿದೆ. ಅದಕ್ಕೆ ಪೂರಕವಾಗಿ ಕರ್ನಾಟಕ ಸಾಮಾನ್ಯ ಸೇವೆಗಳು (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) (ವೃಂದ ಮತ್ತು ನೇಮಕಾತಿ) (ತಿದ್ದುಪಡಿ) ನಿಯಮಗಳು 2024 ನ್ನು ರೂಪಿಸಲಾಗಿದೆ.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೈಕಿ ಹಿರಿಯ ಪಿಡಿಒ ಹಾಗೂ ಪಿಡಿಒಗಳನ್ನು ರಾಜ್ಯ ವೃಂದಕ್ಕೆ ಸೇರಿಸಲಾಗಿದೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್ ಒಂದು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್ 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಜಿಲ್ಲಾ ವೃಂದ ಎಂಬುದಾಗಿ ಪರಿಗಣಿಸಲಾಗಿದೆ. ಹಿರಿಯ ಪಿಡಿಒ ಮತ್ತು ಪಿಡಿಒಗಳನ್ನು ರಾಜ್ಯ ವೃಂದದ ಪಟ್ಟಿಯಲ್ಲಿ ಪತ್ರಾಂಕಿತ ವ್ಯವಸ್ಥಾಪಕರ (ಗೆಜೆಟೆಡ್ ಮ್ಯಾನೇಜರ್) ಹುದ್ದೆಯ ನಂತರ ಸೃಜಿಸಲಾಗಿದೆ.

ಪಿಡಿಒಗಳ ಪೈಕಿ 1500 ಜನರಿಗೆ ಬಡ್ತಿ ಮೂಲಕ ಮೂಲಕ ಹಿರಿಯ ಪಿಡಿಒ ಹುದ್ದೆ ನೀಡಲು ತಿದ್ದುಪಡಿ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. 4454 ಪಿಡಿಒ ಹುದ್ದೆ ಇರಲಿದ್ದು, ಶೇಕಡ 65 ರಷ್ಟನ್ನು ನೇರ ನೇಮಕಾತಿ ಮೂಲಕ ಮತ್ತು ಉಳಿದ ಶೇ 35 ರಷ್ಟನ್ನು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್ ಒಂದು ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್ ಒಂದು ನೌಕರರಿಗೆ ಬಡ್ತಿ ನೀಡುವ ಮೂಲಕ ಭರ್ತಿ ಮಾಡಬೇಕಿದೆ.

1227 ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್ ಒಂದು ಹುದ್ದೆ ಇರಲಿದೆ. ಅವುಗಳಲ್ಲಿ ಶೇ. 50ರಷ್ಟು ಬಡ್ತಿ ಮೂಲಕ ಭರ್ತಿ ಮಾಡಲು ನಿಯಮಗಳಲ್ಲಿ ಅವಕಾಶ ನೀಡಲಾಗುತ್ತಿದೆ.