ಕಾಶಿ, ಮಥುರಾ, ಅಯೋಧ್ಯಾ ಇವೆಲ್ಲ ಹಿಂದುಗಳಿಗೆ ಸೇರಿದ್ದು ಎಂದು ಹೇಳಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಅದಕ್ಕೆ ಪೌರಾಣಿಕ/ ಐತಿಹಾಸಿಕ/ ಭೌಗೋಳಿಕ ಎಲ್ಲ ಆಧಾರಗಳೂ ಇವೆ. ಸಹಸ್ರಾರು ವರ್ಷಗಳ ಗ್ರಂಥಸ್ಥ ದಾಖಲೆಗಳಿವೆ. ನ್ಯಾಯಾಲಯವೇ ಅದನ್ನು ಎಲ್ಲ ಹೇಳಬೇಕು ಎನ್ನುವುದು ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಾವು ಕಾನೂನು ನ್ಯಾಯಂಗಗಳಿಗೆ ಅನಿವಾರ್ಯವಾಗಿ ಕೊಡಬೇಕಾದ ಮಾನ್ಯತೆ ಮತ್ತು ಗೌರವಗಳ ಪ್ರತೀಕ. ಇಂದು ದೇಶದ ಹೆಚ್ಚಿನ ಮಸೀದೆಗಳನ್ನಗೆದರೆ ಸಿಗುವುದು ಅಲ್ಲಿ ಹಿಂದೂ ದೇವಾಲಯಗಳ ಅವಶೇಷಗಳೇ. ವಾಸ್ತವ ಹಿಂದುಗಳಿಗೂ ಗೊತ್ತು, ಅವರಿಗಿಂತ ಚೆನ್ನಾಗಿ ಮುಸ್ಲಿಮರಿಗೂ ಗೊತ್ತು. ಅಲ್ಲದೆ ಇವೆಲ್ಲ ಶತಶತಮಾನಗಳ ಹಿಂದೆ ನಡೆದ ಸಂಗತಿಗಳಾದ್ದರಿಂದ ಈಗಿನ ಭಾರತೀಯ ಮುಸ್ಲಿಮರಿಗೆ ಅದು ಸಂಬಂಧ ಪಟ್ಟ ವಿಷಯವೂ ಅಲ್ಲ. ಅದಕ್ಕಾಗಿ ಅವರು ಅಪರಾಧಪ್ರಜ್ಞೆ ಅನುಭವಿಸಬೇಕಾದ ಅಗತ್ಯವೂ ಇಲ್ಲ.
ಅಯೋಧ್ಯೆ ಪ್ರಕರಣ ಮುಕ್ತಾಯ ಕಂಡಂತಾಗಿದೆ. ಈಗ ಕಾಶಿಯ ಪ್ರಕರಣ ತೆರೆದುಕೊಳ್ಳುತ್ತಿದೆ. ಈಗಾಗಲೇ ಅದರ ಸರ್ವೇ ರಿಪೋರ್ಟಗಳು ಸ್ಪಷ್ಟ ಪಡಿಸಿರುವ ಅಂಶಗಳು ಹಿಂದುಗಳಿಗೆ ಪೂರ್ತಿ ಅನುಕೂಲಕರವಾಗಿವೆ. ಮುಸ್ಲಿಂ ಸಮುದಾಯ ತಾನಾಗಿ ಅದನ್ನು ಹಿಂದುಗಳಿಗೆ ಒಪ್ಪಿಸುವ ಉದಾರ ಮನಸ್ಸನ್ನು ತೋರಿಸಿದರೆ ಅದನ್ನು ಮತ್ತೆ ನ್ಯಾಯಾಲಯಕ್ಕೆ ಒಯ್ಯುವ ಅಗತ್ಯವಿಲ್ಲ ಮತ್ತು ಉಭಯ ಸಮುದಾಯಗಳ ನಡುವಿನ ಸೌಹಾರ್ದ ಸಂಬಂಧ ವೃದ್ದಿಗೆ ಇದೊಂದು ಸುವರ್ಣಾವಕಾಶ. ಅಂತಹ ಒಂದು ಪೂರಕ ಬೆಳವಣಿಗೆಯನ್ನು ನಿರೀಕ್ಷಿಸೋಣ. ಆದರೆ…
ಸಾರ್ವತ್ರಿಕ ಚುನಾವಣೆಯ ನಂತರ ಆಗಬಹುದಾದ ಬದಲಾವಣೆಗಳ ನಂತರ ಈ ವಿಷಯದ ಮುಂದಿನ ಅಧ್ಯಾಯಗಳು ಮತ್ತೆ ತೆರೆದುಕೊಳ್ಳಬಹುದು. ಕಾಶಿಯ ನಂತರ ಮಥುರಾ ವಿಷಯ ಮುನ್ನೆಲೆಗೆ ಬರಬಹುದು. ಭಾರತೀಯರ ಮುಖ್ಯ ಸಮಸ್ಯೆ ಇರುವುದು ಸ್ವಾತಂತ್ರ್ಯದ ನಂತರ ಬಂದ ಕೆಲ ಸರಕಾರಗಳ ಕೃಪಾಶಯದಲ್ಲಿ ಎಡಪಂಥೀಯ ಧೋರಣೆಯ ಲೇಖಕರು, ಸಂಶೋಧಕರು, ಇತಿಹಾಸಕಾರರು ಸಿದ್ಧಪಡಿಸಿದ ಸುಳ್ಳು ಇತಿಹಾಸ. ಪ್ರಧಾನಿ ನೆಹರೂ ಅಂದು ಕಮ್ಯುನಿಸ್ಟ್ ಒಲವಿನವರಾಗಿದ್ದರು. ರಶ್ಯಾ ಅವರಿಗೆ ಹೆಚ್ಚು ಪ್ರಿಯವಾಗಿತ್ತೆಂಬುದೇನೂ ರಹಸ್ಯ ಅಲ್ಲ. ಆದರೆ ಅದರಿಂದ ಆದದ್ದು ನಿಜವಾದ ಭಾರತೀಯ ಇತಿಹಾಸಕ್ಕೆ ಅನ್ಯಾಯ. ಸತ್ಯದ ಮೇಲೆ ನಕಲಿ ಇತಿಹಾಸಕಾರರು ಕಪ್ಪು ಪರದೆ ಎಳೆದುಬಿಟ್ಟರು. ಭಾರತದ ವೀರ ಪುರುಷರ ಕಥೆಗಳನ್ನು ಬದಿಗೆ ಸರಿಸಿದರು. ಮುಸ್ಲಿಂ ಆಕ್ರಮಣಕಾರರು, ದುಷ್ಟರು ದರೋಡೆಕೋರರು, ಹಿಂಸಾಚಾರಿಗಳು, ಮತಾಂತರಿಗಳು, ಇತಿಹಾಸದ ಪುಟಗಳಲ್ಲಿ ವೀರ ಪುರುಷರಾಗಿ , ಆದರ್ಶ ಪುರುಷರಾಗಿ ಚಿತ್ರಿಸಲ್ಪಟ್ಟರು. ಅದನ್ನೇ ಅರ್ವತ್ತೆಪ್ಪತ್ತು ವರ್ಷ ನಾವು ಮುಗ್ಧವಾಗಿ , ಸತ್ಯವೆಂದು ನಂಬಿಓದಿದೆವು. ಸತ್ಯ ಹೊರ ಹಾಕುವವರು ಯಾರೂ ಇರಲಿಲ್ಲ. ಒಂದೊಂದಾಗಿ ಸತ್ಯ ಹೊರಬರತೊಡಗಿದ್ದು ಬಹಳ ತಡವಾಗಿ. ಇಂದಿಗೂ ಸತ್ಯವನ್ನು ಒಪ್ಪಿಕೊಳ್ಳಲಾಗದ ಜಡ್ಡು ಹಿಡಿದ ಮನಸ್ಥಿತಿಯ ಜನರು ನಮ್ಮ ನಡುವೆ ಇದ್ದಾರೆ. ಅದಕ್ಕೂ ಧೈರ್ಯ ಬೇಕು. ಆದರೆ ಸತ್ಯದ ಮೇಲಿಡಲಾದ ಮುಚ್ಚಳ ಎಂದಿದ್ದರೂ ಹಾರಿಹೋಗಲೇಬೇಕಲ್ಲವೇ?
-ಎಲ್. ಎಸ್. ಶಾಸ್ತ್ರಿ