ಘಾಜಿಯಾಬಾದ್ :
ಉತ್ತರ ಪ್ರದೇಶದಲ್ಲಿ ಅಧಿಕಾರ ನಡೆಸುತ್ತಿರುವ ಯೋಗಿ ಆದಿತ್ಯನಾಥ್ ಸರಕಾರ ಈಗಾಗಲೇ ಹಲವು ಮಹಾನಗರಗಳ ಹೆಸರುಗಳನ್ನು ಬದಲಾಯಿಸಿದೆ. ಇದೀಗ ಮತ್ತೊಂದು ಮಹಾನಗರದ ಹೆಸರನ್ನು ಬದಲಾಯಿಸಲು ಸಿದ್ಧತೆ ನಡೆಸಿದೆ.

ರಾಮ ಮಂದಿರ ಉದ್ಘಾಟನೆ ತಯಾರಿಯಲ್ಲಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮತ್ತೊಂದು ಮಹತ್ವದ ಕಾರ್ಯಕ್ಕೆ ಸಜ್ಜಾಗಿದೆ. ಹಲವು ವರ್ಷಗಳ ಬೇಡಿಕೆ ಈಡೇರಿಸಲು ಯೋಗಿ ಸರ್ಕಾರ ತಯಾರಿ ಮಾಡಿಕೊಂಡಿದೆ.

ಘಾಜಿಯಾಬಾದ್‌ ನಗರದ ಹೆಸರನ್ನು ಮರುನಾಮಕರಣ ಮಾಡಲು ಸರ್ಕಾರ ಇದೀಗ ಮುಂದಾಗಿದೆ. ಈಗಾಗಲೇ ಘಾಜಿಯಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಸಭೆ ನಡೆಸಲಾಗಿದ್ದು, ಎರಡು ಹೆಸರುಗಳನ್ನು ಅಂತಿಮಗೊಳಿಸಿದ್ದು, ಈ ಪ್ರಸ್ತಾವನೆಯನ್ನು ಯೋಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಇದೀಗ ಯೋಗಿ ಸರ್ಕಾರ ರಾಮ ಮಂದಿರ ಉದ್ಘಾಟನೆ ಬಳಿಕ ಘಾಜಿಯಾಬಾದ್ ಮರುನಾಮಕರಣ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಘಾಜಿಯಾಬಾದ್‌ ನಗರಕ್ಕೆ ಮೂಲ ಹೆಸರನ್ನು ಇಡಬೇಕು. ಮೊಘಲರ ಆಳ್ವಿಕೆಯಿಂದ ಬದಲಾದ ಹೆಸರು ಬೇಡ ಎನ್ನುವುದು ಬಿಜೆಪಿಯವರ
ಮನವಿಯಾಗಿತ್ತು. ಘಾಜಿಯಾಬಾದ್ ಮುನ್ಸಿಪಲ್
ಕೌನ್ಸಿಲ್ ಸಭೆಯಲ್ಲಿ ಬಿಜೆಪಿ ಕೌನ್ಸಿಲ‌ರ್ ಮರುನಾಮಕರಣ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಮೇಯರ್ ಸುನೀತಾ ದಯಾಳ್ ಈ ಪ್ರಸ್ತಾವನೆ ಅಂಗೀಕರಿಸಲಾಗಿದ್ದು, ಹಿಂದೂಪರ ಸಂಘಟನೆಗಳು ಹಲವು ವರ್ಷಗಳಿಂದ ಮರುನಾಮಕರಣದ ಕುರಿತು ಹೋರಾಟ ಮಾಡುತ್ತಾ ಬಂದಿದೆ. ದಾಳಿಕೋರರ ಹೆಸರಿನ ಬದಲು ಮೂಲ ಹೆಸರು ಅವಶ್ಯಕ ಎಂದು ಸುನೀತಾ ದಯಾಳ್ ತಿಳಿಸಿದ್ದಾರೆ.

ಈ ಹಿಂದೆ ಈ ನಗರಕ್ಕೆ ಘಾಜಿಉದ್ದೀನ್ ನಗರ ಎಂದು ನಾಮಕರಣ ಮಾಡಲಾಗಿತ್ತು. ಆದರೆ ಹೆಸರು ಉದ್ದ ಇದ್ದ ಕಾರಣ ಬಳಿಕ ಘಾಜಿಯಾಬಾದ್ ನಗರ ಎಂದೇ ಗುರಿತಸಲ್ಪಟ್ಟಿತು. ಹಿಂದೊನ್ ನದಿ ದಂಡೆಯಲ್ಲಿದ್ದ ಈ ನಗರ ಹಿಂದೋನ್ ನಗರ ಎಂದೇ ಜನಪ್ರಿಯವಾಗಿತ್ತು.