ರಾಮ-ಲಕ್ಷ್ಮಣರು ಜನಿಸಿದ ಸ್ಥಳ ಉತ್ತರ ಭಾರತದ ಅಯೋಧ್ಯೆಯಾದರೆ, ಲವ ಕುಶರು ಜನಿಸಿದು ದಕ್ಷಿಣ ಭಾರತದ ಕರ್ನಾಟಕದ ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕು ಆವನಿ ಗ್ರಾಮ.

ತ್ರೇತಾಯುಗ ಕಾಲದ ಆವಂತಿಕಾ ಕ್ಷೇತ್ರ ಇಂದಿನ ಆವನಿ ಗ್ರಾಮ ಸೀತಾಮಾತೆಯ ಮತ್ತು ಶ್ರೀರಾಮನ ಪಾದ ಸ್ಪರ್ಶದಿಂದಾಗಿ ಇಂದಿಗೂ ಸಾಕಷ್ಟು ಪವಾಡಗಳನ್ನು ಪ್ರದರ್ಶಿಸುತ್ತಿದೆ.ತನ್ನೊಡಲಲ್ಲಿ ಹತ್ತಾರು ರಾಮಾಯಣದ ಕಾಲದ ಕುರುಹುಗಳನ್ನು ಹೊಂದಿದೆ. ಆವನಿ ಎಂದರೆ ಪುಣ್ಯ ಭೂಮಿ, ಸೀತೆಯ ಮತ್ತೊಂದು ಹೆಸರು ಆವನಿ ಅಂದ್ರೆ ಭೂಮಿಯ ಒಡಲಿಂದ ಜನಿಸಿದವಳು. ಇಲ್ಲಿ ರಾಮ ಮತ್ತು ಸೀತಾ ಮಾತೆಯ ಕೆಲವು ಕುರುಹುಗಳು ಇಂದಿಗೂ ಕಾಣಬಹುದು. ಆವನಿ ಗ್ರಾಮಕ್ಕೆ ಹೊಂದಿಕೊಂಡಿರುವ ಈ ಬೆಟ್ಟದಲ್ಲಿ ಸೀತಾಮಾತೆ ವನವಾಸಕ್ಕೆ ಬಂದಾಗ ವಾಲ್ಮೀಕಿ ಆಶ್ರಮವಾಗಿದ್ದ ಈ ಬೆಟ್ಟದಲ್ಲಿ ವಾಸವಿದ್ದರು.
ಬೆಟ್ಟದ ಮೇಲೆ ನಾವು ಇಂದಿಗೂ ವಾಲ್ಮೀಕಿ ಆಶ್ರಮದ ಹತ್ತಾರು ಕುರುಹುಗಳನ್ನು ಕಾಣಬಹುದು. ಆವನಿ ಗ್ರಾಮಕ್ಕೆ ಬಂದ ಕೂಡಲೇ ನಿಮಗೆ ಬೆಟ್ಟದ ಆರಂಭದಲ್ಲೇ ಇಲ್ಲಿ ವಾಲ್ಮೀಕಿ ಆಶ್ರಮ ಅನ್ನೋ ಬೋರ್ಡ್ ಕಾಣುತ್ತದೆ. ಅದರಿಂದ ನೀವು ಮುಂದೆ ಸಾಗುತ್ತಾ ಹೋದಂತೆ ಬೃಹತ್ತಾದ ಬೆಟ್ಟದ ಮೇಲೆ ವಾಲ್ಮೀಕಿ ಆಶ್ರಮದ ಕುರುಹುಗಳು ನಿಮಗೆ ಕಾಣುತ್ತವೆ.

ವಾಲ್ಮೀಕಿ ಆಶ್ರಮ, ಲವ ಕುಶರು ಜನಿಸಿದ ಸ್ಥಳ ಹಾಗೂ ಸೀತಾ ಮಾತೆ ವಾಸವಿದ್ದ ಸಣ್ಣದೊಂದು ಮನೆಯೂ ಸಹ ಇಂದಿಗೂ ಕಾಣಬಹುದು. ಇನ್ನು ಇಲ್ಲಿರುವ ಧನುಷೋಟೆ ಅನ್ನೋ ಸ್ಥಳ ಸೀತಾಮಾತೆಯನ್ನು ಲಕ್ಷ್ಮಣ ದಂಡಕಾರಣ್ಯದಲ್ಲಿ ಕರೆದುಕೊಂಡು ವನವಾಸಕ್ಕೆ ಬಿಡಲು ಬಂದಾಗ ಸೀತಾಮಾತೆ ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಆಗ ಲಕ್ಷ್ಮಣ ತನ್ನ ಧನಸ್ಸನ್ನು ಹೂಡಿ ಗಂಗೆಯನ್ನು ತರುತ್ತಾನೆ. ಈ ಸ್ಥಳದಲ್ಲಿ ಅಂದು ಉತ್ಪತ್ತಿಯಾದ ಗಂಗೆಯನ್ನು ಇಂದಿಗೂ ಧನುಷೋಟೆಯಲ್ಲಿ ಪಾತಾಳಗಂಗೆಯಾಗಿ ನಾವು ನೋಡಬಹುದು.ಮಹರ್ಷಿ ವಾಲ್ಮೀಕಿ ಕೇವಲ ಕವಿಯಾಗದೆ ರಾಮನ ಮಕ್ಕಳಿಗೆ ಆಯುಧ, ಜ್ಞಾನ ಕಲಿಸಿದ ಮಹರ್ಷಿ ವಾಲ್ಮೀಕಿ
ಸೀತೆಯನ್ನು ಸಾಂತ್ವನ ಮಾಡಿ ಆಶ್ರಮದಲ್ಲಿ ತನ್ನ ಸ್ವಂತ ಮಗಳಂತೆ ಬೆಳೆಸಿದ ಮಹರ್ಷಿ ವಾಲ್ಮೀಕಿ ಇನ್ನು ಇದೇ ವಾಲ್ಮೀಕಿ ಆಶ್ರಮದಲ್ಲಿ ಲವಕುಶ ಇಬ್ಬರೂ ವಾಲ್ಮೀಕಿ ಮಹರ್ಷಿಗಳಿಂದ ವಿದ್ಯಾಭ್ಯಾಸ ಕಲಿತು, ಇದೇ ಒಂದು ಬೆಟ್ಟದಲ್ಲಿ ಆಟವಾಡಿ ಬೆಳೆದ ಸ್ಥಳವಾಗಿದೆ. ಇದೇ ಆವಂತಿಕಾ ಕ್ಷೇತ್ರದಲ್ಲಿ ರಾಮ ಲಕ್ಷ್ಮಣ ಮತ್ತು ಲವಕುಶರ ನಡುವೆ ಒಂದು ದೊಡ್ಡ ಕಾಳಗ ಕೂಡಾ ನಡೆದಿದೆ. ಶ್ರೀರಾಮಚಂದ್ರ ಅಶ್ವಮೇಧಯಾಗ ಮಾಡಿದ ಸಂದರ್ಭದಲ್ಲಿ ಲವಕುಶರು ಅಶ್ವದ ಕುದುರೆಯನ್ನು ಕಟ್ಟಿಹಾಕುತ್ತಾರೆ.ಈ ವೇಳೆ ತಂದೆ ಮಕ್ಕಳ ನಡುವೆಯೇ ಯುದ್ದ ನಡೆದ ಸ್ಥಳ ಕೂಡಾ ಇದೇ ಎಂದು ಹೇಳಲಾಗುತ್ತದೆ. ಇನ್ನು ಬೆಟ್ಟದ ಮೇಲೆ ಸೀತಾ ಮಾತೆ ಪೂಜೆ ಮಾಡುತ್ತಿದ್ದ ಪಾರ್ವತಿ ದೇವಸ್ಥಾನ ಇದೆ, ಈ ದೇವಾಲಯವನ್ನು ಸೀತಾಪಾರ್ವತಿ ದೇವಸ್ಥಾನ ಎಂದು ಕರೆಯಲಾಗುತ್ತದೆ.

ಇನ್ನು ಇದಿಷ್ಟು ವಾಲ್ಮೀಕಿ ಆಶ್ರಮದಲ್ಲಿ ಸೀತಾಮಾತೆ ವನವಾಸಕ್ಕೆ ಹೋದಾಗ ಸಿಗುವ ಕುರುಹುಗಳಾದರೆ, ಶ್ರೀರಾಮಚಂದ್ರನ ಅಶ್ವ ಮೇಧದ ಕುದುರೆಯನ್ನು ಕಟ್ಟಿಹಾಕಿದ್ದ ಲವಕುಶರ ನಡುವೆ ನಡೆದ ಯುದ್ಧದ ನಂತರ ರಾಮ, ಲಕ್ಷ್ಮಣ, ಭರತ, ಶತ್ರುಜ್ಞ ಹಾಗೂ ವಾಲಿ ಸುಗ್ರೀವರು ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡಿದ್ರು ಅನ್ನೋ ಪ್ರತೀತಿ ಇದೆ.

ಅದಕ್ಕೆ ತಕ್ಕಂತೆ ಇಂದಿಗೂ ಅವರು ಪ್ರತಿಷ್ಠಾಪನೆ ಮಾಡಿರುವ ರಾಮಲಿಂಗೇಶ್ವರ, ಭರತ ಲಿಂಗೇಶ್ವರ, ಲಕ್ಷ್ಮಣ ಲಿಂಗೇಶ್ವರ, ಶತ್ರುಜ್ಞ ಲಿಂಗೇಶ್ವರ ಲಿಂಗಗಳು ನಮಗೆ ಕಾಣಸಿಗುತ್ತದೆ. ಇಂದಿಗೂ ರಾಮಾಯಣ ಕಾಲದ ಜೀವಂತಿಕೆಯನ್ನು ಉಳಿಸಿಕೊಂಡು ಈ ಕ್ಷೇತ್ರ ಸಹಸ್ರಾರು ಜನರ ಭಕ್ತಿಯ ಆರಾಧನೆಯ ಕೇಂದ್ರವಾಗಿ ನಿಂತಿದೆ.