ರೇವಾರಿ(ಹರಿಯಾಣ): ಅಯೋಧ್ಯೆಯಲ್ಲಿನ ರಾಮ ಮಂದಿರ ಕುರಿತು ತಳೆದಿರುವ ನಿಲುವಿಗಾಗಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ, ‘ಭಗವಾನ್ ರಾಮ ಕಾಲ್ಪನಿಕ ವ್ಯಕ್ತಿ ಎಂಬುದಾಗಿ ಕರೆಯುತ್ತಿದ್ದವರು ಹಾಗೂ ಮಂದಿರ ನಿರ್ಮಾಣ ಬಯಸದಿದ್ದವರು ಈಗ ಜೈ ಸಿಯಾ ರಾಮ್ ಎಂಬ ಘೋಷಣೆ ಕೂಗುತ್ತಿದ್ದಾರೆ’ ಎಂದು ಶುಕ್ರವಾರ ಹೇಳಿದರು.
ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಎಐಐಎಂಎಸ್) ಶಾಖೆಗೆ ಶಿಲಾನ್ಯಾಸ ನೆರವೇರಿಸಿ ಹಾಗೂ ವಿವಿಧ ಯೋಜನೆಗಳನ್ನು ಉದ್ಘಾಟಿಸಿದ ನಂತರ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
2014 ರ ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ ಬಿಜೆಪಿಯು ನನ್ನನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ನಂತರ ನನ್ನ ಮೊದಲ ಸಾರ್ವಜನಿಕ ಕಾರ್ಯಕ್ರಮ ಸೆಪ್ಟೆಂಬರ್ 2013 ರಲ್ಲಿ ರೇವಾರಿಯಲ್ಲಿ ನಡೆಯಿತು ಎಂದು ಮೋದಿ ನೆನಪಿಸಿ ಕೊಂಡರು. ಆಗ ನಾನು ಕೆಲವು ಭರವಸೆಗಳನ್ನು ನೀಡಿದ್ದೆ, ದೇಶವು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರವನ್ನು ಬಯಸಿತ್ತು ಅದು ಈಡೇರಿದೆ ಎಂದು ಹೇಳಿದರು.
‘ಜನರ ಆಶೀರ್ವಾದದಿಂದ, ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೀಟುಗಳಿಗೆ ಮಹತ್ವ ಇದೆ. ಆದರೆ, ಜನರ ಆಶೀರ್ವಾದವೇ ನನ್ನ ಪಾಲಿಗೆ ದೊಡ್ಡ ಆಸ್ತಿ’ ಎಂದು ಮೋದಿ ಹೇಳಿದರು.
ಯುಎಇಗೆ ಇತ್ತೀಚೆಗೆ ನೀಡಿದ್ದ ಭೇಟಿಯನ್ನು ಪ್ರಸ್ತಾಪಿಸಿದ ಮೋದಿ, ‘ವಿಶ್ವದೆಲ್ಲೆಡೆ ಭಾರತಕ್ಕೆ ಅಪಾರ ಗೌರವ ಸಿಗುತ್ತಿದೆ. ಜಾಗತಿಕ ಮಟ್ಟದಲ್ಲಿ ಸಿಗುತ್ತಿರುವ ಈ ಗೌರವ ಮೋದಿಗೆ ಮಾತ್ರ ಸಲ್ಲುವುದಿಲ್ಲ, ಬದಲಾಗಿ ಪ್ರತಿಯೊಬ್ಬ ಭಾರತೀಯನಿಗೂ ಸಲ್ಲುತ್ತದೆ’ ಎಂದರು.
ಪ್ರಧಾನಿ ಅಭ್ಯರ್ಥಿಯಾಗಿ ನಾನು ಕೆಲ ಭರವಸೆಗಳನ್ನು ನೀಡಿದ್ದೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಬೇಕು ಎಂಬುದು ದೇಶದ ಜನರ ಇಚ್ಛೆಯಾಗಿತ್ತು. ಜನರ ಆಶಯವನ್ನು ಪೂರೈಸಲಾಗಿದೆ’ ಎಂದು ಹೇಳಿದರು.