ಬೆಂಗಳೂರು: ಬೆಂಗಳೂರು ಹೊರವಲಯದ ಹೊಸಕೋಟೆ ಬಳಿ ಕೃಷಿ ಹೊಂಡದಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಹೊಸಕೋಟೆ ತಾಲೂಕಿನ ಕರಿಬೀರನಹೊಸಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಊಟ ಮಾಡಿ ಕೈ ತೊಳೆಯಲು ಕೃಷಿ ಹೊಂಡಕ್ಕೆ ಹೋದ ವೇಳೆ ಅವರು ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಮೃತರನ್ನು ಮರಿಯಪ್ಪ (70) ಮುನಿಯಮ್ಮ ( 60 ) ಮತ್ತು ಭಾರತಿ (40) ಎಂದು ಗುರುತಿಸಲಾಗಿದೆ. ಇವರು ಕರಿಬೀರನಹಳ್ಳಿ ಹೊಸಕಟ್ಟೆ ಸಮೀಪ ನಡೆಯುತ್ತಿದ್ದ ದೇವರ ಉತ್ಸವದಲ್ಲಿ ಪಾಲ್ಗೊಂಡಿದ್ದು, ಅಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ಇತ್ತು. ಕುಟುಂಬದ ಕಷ್ಟ ಪರಿಹಾರಕ್ಕಾಗಿ ಅವರು ಅಲ್ಲಿಗೆ ಹೋಗಿ ದೇವರ ಊಟದ ಪ್ರಸಾದವನ್ನು ಸ್ವೀಕರಿಸಿದ್ದರು. ಈ ವೇಳೆ ಕೈ ತೊಳೆಯಲು ಹೋದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮಗಳು ಭಾರತಿ ಸ್ವಲ್ಪ ಬುದ್ಧಿ ಮಾಂದ್ಯಳಾಗಿದ್ದು, ಆಕೆ ಕೈ ತೊಳೆಯಲು ಹೋದಾಗ ನೀರಿಗೆ ಬಿದ್ದಿದ್ದಾಳೆ ಎನ್ನಲಾಗಿದೆ. ಆಕೆಯನ್ನು ರಕ್ಷಣೆ ಮಾಡಲು ವಯಸ್ಸಾದ ಅಪ್ಪ ಅಮ್ಮ ಹೋಗಿದ್ದು, . ಅವರೆಲ್ಲರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ಮೃತದೇಹಗಳನ್ನು ನೀರಿನಿಂದ ಹೊರತೆಗೆದಿದ್ದಾರೆ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.