![ಶ್ರವಣ ಸಮಸ್ಯೆ ಇರುವ ಮಕ್ಕಳು ಚಿಕಿತ್ಸೆ ಪಡೆದು ಆರೋಗ್ಯಕರ ಜೀವನ ನಡೆಸಬಹುದು; ಈರಣ್ಣ ಕಡಾಡಿ ಶ್ರವಣ ಸಮಸ್ಯೆ ಇರುವ ಮಕ್ಕಳು ಚಿಕಿತ್ಸೆ ಪಡೆದು ಆರೋಗ್ಯಕರ ಜೀವನ ನಡೆಸಬಹುದು; ಈರಣ್ಣ ಕಡಾಡಿ](https://udayaprabha.com/wp-content/uploads/2024/03/IMG_20240303_210503.jpg)
ಬೆಳಗಾವಿ : ಮನುಷ್ಯನ ದೇಹದಲ್ಲಿ ಇರುವ ಪ್ರತಿಯೊಂದು ಅಂಗವು ಅಮೂಲ್ಯವಾದದ್ದು, ಕೆಲವು ಜನರಿಗೆ ಹುಟ್ಟಿನಿಂದಲೇ ಶ್ರವಣ ಸಮಸ್ಯೆ ಹೊಂದಿದ್ದು ಈ ಬಗ್ಗೆ ಇರುವ ತಪ್ಪು ತಿಳಿವಳಿಕೆಗಳಿಂದ ಹೊರ ಬಂದು ಸರಿಯಾದ ಚಿಕಿತ್ಸೆ ಪಡೆದುಕೊಂಡಲ್ಲಿ ಶ್ರವಣ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ಜಿಲ್ಲಾ ಆಸ್ಪತ್ರೆ, ಅಡಿಟೋರಿಯಂ ಸಭಾ ಭವನದಲ್ಲಿ ಶನಿವಾರ ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಉತ್ತಮ ಆರೋಗ್ಯಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಗ್ಯ ಇಲಾಖೆಗೆ ಸಾಕಷ್ಟು ಅನುದಾನ ನೀಡುವದರ ಜೊತೆಗೆ ಅನೇಕ ಆರೋಗ್ಯ ಯೋಜನೆಗಳನ್ನು ಜಾರಿಗೊಳಿಸಿವೆ. ಈ ಯೋಜನೆಗಳ ಮುಖಾಂತರ ಸಾರ್ವಜನಿಕರು ತಮ್ಮ ಆರೋಗ್ಯದ ಸಮಸ್ಯೆಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು.
ಸರ್ಕಾರಗಳು ಜಾರಿಗೊಳಿಸಿರುವ ಆರೋಗ್ಯ ಯೋಜನೆಯಗಳಡಿ ಶ್ರವಣ ಸಮಸ್ಯೆ ಇರುವ ಮಕ್ಕಳಿಗೆ ಚಿಕಿತ್ಸೆ ಒದಗಿಸಿ ಆರೋಗ್ಯಕರ ಜೀವನ ನಡೆಸುವಂತೆ ತಿಳಿಸಿದರು.
ಶ್ರವಣ ದೋಷ ಸಮಸ್ಯೆ ಹೊಂದಿರುವ ಮಕ್ಕಳಿಗೆ ಶ್ರವಣ ಆರೈಕೆ ಸೇವೆಗಳ ಕಿಟ್ ವಿತರಿಸಿ, ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸರ್ಕಾರಿ ಆಸ್ಪತ್ರೆಗಳಿಗೆ ಜಿಲ್ಲಾ ಮಟ್ಟದ ಕಾಯಕಲ್ಪ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಮತ್ತು ಕಲ್ಯಾಣಾಧಿಕಾರಿ ಡಾ.ಮಹೇಶ ಕೋಣಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಶ್ವನಾಥ ಬೋವಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ವಿ.ವಿ.ಶಿಂಧೆ, ಬೆಳಗಾವಿ ಬಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ.ಅಶೋಕ ಕುಮಾರ ಶೆಟ್ಟಿ, ಬಿಮ್ಸ್ ಸ್ಥಳಿಯ ವೈದ್ಯಾಧಿಕಾರಿ ಸರೋಜಿ ಲೆಗಡಿ, ಡಾ. ವಿವೇಕ ಹೊನ್ನಾಳಿ, ಜಿಲ್ಲಾ ಕುಷ್ಠ ರೋಗ ಅಧಿಕಾರಿ ಗೀತಾ ಕಾಂಬಳೆ, ಜಿಲ್ಲಾ ಕ್ಷಯ ರೋಗ ಅಧಿಕಾರಿ ಚಾಂದಣಿ ದೇವಡಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಎಮ್.ಭೋಮಿ ಸ್ವಾಗತಿಸಿದರು, ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್.ಗಡೇದ ವಂದಿಸಿದರು. ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾಜಿ ಮಾಲಗೆನ್ನವರ ನಿರೂಪಸಿದರು.