ಬೆಂಗಳೂರು : ರಾಮೇಶ್ವರಂ ಕೆಫೆಯಲ್ಲಿನ ಸ್ಫೋಟಕ್ಕೆ ಕಾರಣರಾಗಿರುವ ದುಷ್ಕರ್ಮಿಗಳನ್ನು ಆದಷ್ಟು ಬೇಗ ಪತ್ತೆಹಚ್ಚಿ ಬಂಧಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸ್ಫೋಟ ನಡೆದ ಕೋರಮಂಗಲದ ರಾಮೇಶ್ವರಂ ಕೆಫೆ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;

“ಸುಮಾರು 1 ಗಂಟೆಗೆ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ್ದು, ಇದೊಂದು ಅಲ್ಪ ತೀವ್ರತೆ ಸ್ಫೋಟವಾಗಿದೆ. ಈ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದು, ಬಾಂಬ್ ನಿಗ್ರಹ ದಳ, ಎಫ್ ಎಸ್ ಎಲ್ ತಂಡ ಪರಿಶೀಲನೆ ನಡೆಸುತ್ತಿದೆ. ಈ ಪ್ರಕರಣದ ತನಿಖೆಗೆ 7-8 ತಂಡಗಳನ್ನು ನೇಮಿಸಲಾಗಿದೆ.

ಈ ಸ್ಫೋಟದಲ್ಲಿ ಯಾರಿಗೂ ತೊಂದರೆ ಆಗಿಲ್ಲ. ಬೆಂಗಳೂರಿನ ನಾಗರೀಕರು ಗಾಬರಿಯಾಗುವ ಅಗತ್ಯವಿಲ್ಲ.

ಈ ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದು, ತನಿಖಾಧಿಕಾರಿಗಳಿಗೆ ಮುಕ್ತ ಅವಕಾಶ ನೀಡಲಾಗಿದೆ.”

ಬಿಜೆಪಿ ನಾಯಕರು ಸರ್ಕಾರದ ಬಗ್ಗೆ ಟೀಕೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಅವರು ಏನಾದರೂ ಟೀಕೆ, ಆರೋಪ ಮಾಡಲಿ. ನಾವು ನಮ್ಮ ನಗರ ಹಾಗೂ ರಾಜ್ಯದ ಘನತೆ ರಕ್ಷಣೆ ಮಾಡಲು ಪ್ರಯತ್ನಿಸುತ್ತೇವೆ. ಅವರ ಅಧಿಕಾರ ಅವಧಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಏನೆಲ್ಲಾ ಆಗಿದೆ ಎಂದು ಎಲ್ಲರಿಗೂ ಗೊತ್ತಿದೆ. ನಾವು ಅದರ ಬಗ್ಗೆ ಹೆಚ್ಚು ಚರ್ಚೆ ಮಾಡುವುದಿಲ್ಲ. ಆದಷ್ಟು ಬೇಗ ಈ ಪ್ರಕರಣದ ರೂವಾರಿಗಳನ್ನು ಸೆರೆ ಹಿಡಿಯುತ್ತೇವೆ. ಪೊಲೀಸರು ಕಾನೂನು ಪಾಲನೆ ಮಾಡಲಿದ್ದಾರೆ. ಬೆಂಗಳೂರಿನ ಎಲ್ಲೆಡೆ ಕ್ಯಾಮೆರಾಗಳಿದ್ದು ಆದಷ್ಟು ಬೇಗ ಇವರನ್ನು ಪತ್ತೆ ಹಚ್ಚುತ್ತೇವೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ” ಎಂದು ತಿಳಿಸಿದರು.